Gruha Lakshmi : ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ: ಅರ್ಜಿ ಸಲ್ಲಿಸುವವರು ತಿಳಿಯಬೇಕಾದ ಮಾಹಿತಿ
ಕಾಂಗ್ರೆಸ್‌ನ ಚುನಾವಣೆ ಘೋಷಣೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಗೆ ಇಂದಿನಿಂದ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.
ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಕುಟುಂಬಗಳ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಹಣ ಹಾಕುವ ಮಹತ್ವದ ಯೋಜನೆ ಇದಾಗಿದೆ. ಜೂನ್ ತಿಂಗಳಲ್ಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಬೇಕಿತ್ತಾದರೂ, ಗೃಹಜ್ಯೋತಿ ಯೋಜನೆ ನೋಂದಣಿಯಲ್ಲಿ ಹಲವು ಗೊಂದಲ ಉಂಟಾದ ನಂತರ, ಗೃಹಲಕ್ಷ್ಮಿ ಯೋಜನೆಯನ್ನು ಮುಂದೂಡಲಾಗಿತ್ತು.

ಯಾವುದೇ ಗೊಂದಲಕ್ಕೆ ಆಸ್ಪದ ಕೊಡದೆ, ಸೂಕ್ತ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಸವಲತ್ತು ದೊರೆಯುವಂತೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಇನ್ನು ಜುಲೈನಲ್ಲಿ ಅರ್ಜಿ ಸಲ್ಲಿಸಿದರೆ ಆಗಸ್ಟ್ 17 ಅಥವಾ 18ರಿಂದ ಖಾತೆಗೆ ಹಣ ಹಾಕಲಾಗುವುದು ಹೇಳಿದ್ದಾರೆ.
ಯೋಜನೆಯ ಫಲಾನುಭವಿಗಳಾಗಲು ಅರ್ಹತೆ
ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಗಳಲ್ಲಿ ಮನೆ ಯಜಮಾನಿ ಎಂದು ನಮೂದಿಸಿರುವ ಮಹಿಳೆಗೆ ಯೋಜನೆ ಅನ್ವಯಿಸಲಿದೆ ಎಂದು ಸರ್ಕಾರ ಸುತ್ತೋಲೆಯಲ್ಲಿ ಹೇಳಿದೆ. ಕುಟುಂಬದ ಯಜಮಾನಿ ಅಥವಾ ಯಜಮಾನಿ ಪತಿ ಆದಾಯ ತೆರಿಗೆದಾರರಾಗಿದ್ದರೆ ಈ ಯೋಜನೆಗೆ ಅರ್ಹರಲ್ಲ. ಯಜಮಾನಿ ಅಥವಾ ಪತಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಪಡಿತರ ಚೀಟಿ ಸಂಖ್ಯೆ, ಮನೆಯ ಯಜಮಾನಿ ಮತ್ತು ಯಜಮಾನಿ ಪತಿಯ ಆಧಾರ್ ಕಾರ್ಡ್ ಸಂಖ್ಯೆ. ಯಜಮಾನಿ ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್ ಅಥವಾ ಫಲಾನುಭವಿ ಇಚ್ಚಿಸುವ ಪರ್ಯಾಯ ಬ್ಯಾಂಕ್ ಖಾತೆ ವಿವರ.
ನೋಂದಣಿ ಮಾಡುವುದು ಹೇಗೆ
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಸರ್ಕಾರ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿದ್ದು ಅವರ ಮೂಲಕ ಕೂಡ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಪ್ರತಿ ಫಲಾನುಭವಿಗೆ ನೋಂದಣಿ ಮಾಡಿಕೊಳ್ಳಲು ಸರ್ಕಾರವೇ ದಿನಾಂಕ, ಸಮಯ ಮತ್ತು ಸ್ಥಳವನ್ನು ನಿಗದಿ ಮಾಡುತ್ತದೆ. 1902 ಕರೆ ಮಾಡುವ ಮೂಲಕ ಇಲ್ಲವೇ 8147500500 ಈ ಸಂಖ್ಯೆಗೆ ಎಸ್‌ಎಂಎಸ್ ಮಾಡುವ ಮೂಲಕ ನೀವು ನೋಂದಣಿ ಮಾಡಿಕೊಳ್ಳುವ ದಿನಾಂಕ ಸಮಯ ಮತ್ತು ಸ್ಥಳದ ಮಾಹಿತಿ ಪಡೆಯಬಹುದಾಗಿದೆ.
ನಿಗದಿತ ಸಮಯದಲ್ಲಿ ಭೇಟಿ ಮಾಡಲು ಸಾಧ್ಯವಾಗದೇ ಇದ್ದರೆ ಸಂಜೆ 5 ಗಂಟೆಯ ಬಳಿಕ ತೆರಳಿ ನೋಂದಾಯಿಸಿಕೊಳ್ಳಬಹುದು. ಅರ್ಜಿ ನೋಂದಣಿಯಾದ ನಂತರ ಅರ್ಹ ಫಲಾನುಭವಿಗಳಿಗೆ ಅನುಮೋದನೆ ಪತ್ರ ನೀಡಲಾಗುತ್ತದೆ.
ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ, ಯಾರಿಗೂ ಹಣ ಕೊಡಬೇಡಿ ಎಂದು ಸರ್ಕಾರ ಮನವಿ ಮಾಡಿದೆ. ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಕೊನೆಯ ದಿನಾಂಕ ಕೂಡ ಇರುವುದಿಲ್ಲ. ಯಾವುದೇ ಗೊಂದಲ ಇದ್ದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 1902 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ಒಳಗೆ ಮಾತ್ರ ಕರೆ ಮಾಡಬೇಕಾಗಿರುತ್ತದೆ.
ನೋಂದಣಿ ಪ್ರಕ್ರಿಯೆಗೆ ಜನಜಂಗುಳಿ ಹೆಚ್ಚಾಗಿ, ಸರ್ವರ್ ಸಮಸ್ಯೆಯಾಗುವುದನ್ನು ತಪ್ಪಿಸಲು ಸರ್ಕಾರವೇ ನೋಂದಣಿಗೆ ಸಮಯ ನಿಗದಿ ಮಾಡಲಿದೆ. ನೀವು ಅರ್ಜಿ ನೋಂದಾಯಿಸಲು ತೆರಳುವ ಮುನ್ನ ನಿಮ್ಮ ಸಮಯ, ದಿನಾಂಕವನ್ನು ಖಚಿತಪಡಿಸಿಕೊಂಡು ಹೋದರೆ ಆಗುವ ಗೊಂದಲಗಳನ್ನು ತಪ್ಪಿಸಬಹುದು.












Click it and Unblock the Notifications