Gruha Jyothi; ಜುಲೈ ಅಂತ್ಯಕ್ಕೆ ಹೊಸ ಅಪ್‌ಡೇಟ್
ಬೆಂಗಳೂರು, ಜುಲೈ 28; ಕರ್ನಾಟಕ ಸರ್ಕಾರ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ 'ಗೃಹಜ್ಯೋತಿ' ಯೋಜನೆ ಆಗಸ್ಟ್ ತಿಂಗಳಿನಲ್ಲಿ ಜಾರಿಗೆ ಬರಲಿದೆ. ಯೋಜನೆ ಫಲಾನುಭವಿಯಾಗಲು ಕೋಟ್ಯಾಂತರ ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನೂ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡದವರ ಸಂಖ್ಯೆಯೂ ಹೆಚ್ಚಿದೆ.
ಜುಲೈ ತಿಂಗಳು ಅಂತ್ಯವಾಗುತ್ತಿರುವುದರಿಂದ ಇಂಧನ ಇಲಾಖೆ ಗೃಹಜ್ಯೋತಿ ಯೋಜನೆ ಬಗ್ಗೆ ಹೊಸ ಅಪ್‌ಡೇಟ್ ನೀಡಿದೆ. ಯಾರು ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡಬೇಕು ಎಂಬ ಬಗ್ಗೆ ಸ್ಪಷ್ಟನೆಯನ್ನು ಕೊಟ್ಟಿದೆ. ಆಗಸ್ಟ್ ತಿಂಗಳಿನಲ್ಲಿಯೂ ಜನರು ಗೃಹಜ್ಯೋತಿ ಯೋಜನೆಯ ಫಲಾನುಭವಿಯಾಗಲು ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ.

'ಗೃಹಜ್ಯೋತಿ' ಯೋಜನೆ ಫಲಾನುಭವಿಯಾಗಲು ಇಂಧನ ಇಲಾಖೆ ಜುಲೈ ತಿಂಗಳಿಗೆ ನೀಡಿದ್ದ ಗಡುವು ಗುರುವಾರ (ಜುಲೈ 27)ಕ್ಕೆ ಮುಕ್ತಾಯಗೊಂಡಿದೆ. ಆದ್ದರಿಂದ ಯೋಜನೆಗೆ ನೋಂದಣಿ ಮಾಡಿಸದಿದ್ದರೆ ಜುಲೈ ತಿಂಗಳ ಪೂರ್ಣ ವಿದ್ಯುತ್ ಬಿಲ್ ಜನರು ಪಾವತಿ ಮಾಡಬೇಕಿದೆ.
ನೋಂದಣಿಗೆ ಅವಕಾಶವಿದೆ; ಇಂಧನ ಇಲಾಖೆ ಮಾಹಿತಿ ಪ್ರಕಾರ ಜುಲೈ 25ರ ತನಕ ರಾಜ್ಯದಲ್ಲಿ 1.18 ಕೋಟಿ ಜನರು 'ಗೃಹಜ್ಯೋತಿ' ಯೋಜನೆ ಫಲಾನುಭವಿಯಾಗಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಒಟ್ಟು ಫಲಾನುಭವಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಇದು ಶೇ 60.75ರಷ್ಟು ಮಾತ್ರ.
ಹಲವರ ಅರ್ಜಿಗಳು ಇನ್ನೂ ಪರಿಶೀಲನೆ ಹಂತದಲ್ಲಿದೆ. ಹಲವರ ಅರ್ಜಿಗಳು ಇನ್ನೂ ಸಹ ಸಲ್ಲಿಕೆಯಾಗಿಲ್ಲ. ನೀವು ಯೋಜನೆಗೆ ನೋಂದಣಿ ಮಾಡಿಸದಿದ್ದರೆ ಜುಲೈ 28 ರಿಂದ ಆಗಸ್ಟ್ 27ರ ತನಕ ಮತ್ತೆ ನೋಂದಣಿ ಮಾಡಿಸಲು ಅವಕಾಶವಿದೆ. ಆಗ ನೀವು ಆಗಸ್ಟ್ ತಿಂಗಳ ಗೃಹಜ್ಯೋತಿ ಫಲಾನುಭವಿಯಾಗುತ್ತೀರಿ. 200 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡಿದರೆ ಶೂನ್ಯ ಬಿಲ್ ಅನ್ನು ಸೆಪ್ಟೆಂಬರ್‌ನಲ್ಲಿ ಪಡೆಯಲಿದ್ದೀರಿ.
ಎಸ್ಕಾಂಗಳು ಹಲವಾರು ಅರ್ಜಿಗಳನ್ನು ಇನ್ನೂ ಅಂತಿಮಗೊಳಿಸಿಕೊಳ್ಳದೇ ಬಾಕಿ ಉಳಿಸಿಕೊಂಡಿವೆ. ಒಂದು ವೇಳೆ ನೀವು ಜುಲೈ 27ರೊಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಲ್ಲಿ https://sevasindhu.karnataka.gov.in ವೆಬ್‌ಸೈಟ್‌ಗೆ ಹೋಗಿ ನಿಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
ಈಗಾಗಲೇ 'ಗೃಹಜ್ಯೋತಿ' ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದವರಿಗೆ ಅವರ ಹಿಂದಿನ 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ಶೇ 10ರಷ್ಟು ಹೆಚ್ಚು ವಿದ್ಯುತ್ ಅನ್ನು ಉಚಿತವಾಗಿ ಬಳಕೆ ಮಾಡಲು ಅವಕಾಶ ನೀಡಲಾಗುತ್ತದೆ. ಇಂತಹ ಫಲಾನುಭವಿಗಳು ಆಗಸ್ಟ್‌ನಲ್ಲಿ ಶೂನ್ಯ ಬಳಕೆಯ ಬಿಲ್ (ಜುಲೈನ ಫಲಾನುಭವಿ) ಪಡೆಯಲಿದ್ದಾರೆ.
ಎಸ್ಕಾಂಗಳು ಯಾವ-ಯಾವ ಪ್ರದೇಶದಲ್ಲಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಕಡಿಮೆಯಾಗಿವೆ ಎಂದು ಮಾಹಿತಿ ಸಂಗ್ರಹ ಮಾಡಲಿವೆ. ಅಲ್ಲದೇ ಕಡಿಮೆ ಅರ್ಜಿ ಸಲ್ಲಿಕೆಯಾಗಿದ್ದರೆ, ಒಂದು ವೇಳೆ ಜನರು ಅರ್ಜಿ ಸಲ್ಲಿಸದಿದ್ದರೆ ಸಲ್ಲಿಸುವಂತೆ ಮನವಿ ಮಾಡಲಿವೆ. ಅಲ್ಲದೇ ಸಿಬ್ಬಂದಿ ಸ್ಥಳದಲ್ಲಿಯೇ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಈ ಅಭಿಯಾನಕ್ಕಾಗಿ ಈಗಾಗಲೇ ಯೋಜನೆ ತಯಾರು ಮಾಡಲಾಗುತ್ತಿದೆ.
ಜನರು 'ಗೃಹಜ್ಯೋತಿ' ಯೋಜನೆ ಫಲಾನುಭವಿಯಾಗಲು ಅರ್ಜಿ ಸಲ್ಲಿಕೆ ಮಾಡುವುದು ಮಾತ್ರವಲ್ಲ, ಹಿಂದಿನ ಎಲ್ಲಾ ವಿದ್ಯುತ್ ಬಿಲ್ ಬಾಕಿ ಇರದಂತೆ ಪಾವತಿ ಮಾಡಿರಬೇಕು. ಬಾಕಿ ಬಿಲ್ ಪಾವತಿಗೆ ಸೆಪ್ಟೆಂಬರ್ ತನಕ ಇಂಧನ ಇಲಾಖೆ ಗಡುವು ನೀಡಿದೆ.
'ಗೃಹಜ್ಯೋತಿ' ಯೋಜನೆ ಫಲಾನುಭವಿಯಾಗಲು ಅರ್ಜಿ ಸಲ್ಲಿಕೆ ಮಾಡಲು ಯಾವುದೇ ಗಡುವು ಇಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ. ಆಗಸ್ಟ್‌ನಲ್ಲಿ ಶೂನ್ಯ ಬಿಲ್ ಪಡೆಯಬೇಕಾದರೆ ಜುಲೈ 27ರೊಳಗೆ ಅರ್ಜಿ ಸಲ್ಲಿಕೆ ಮಾಡಿರಬೇಕು. ಇಲ್ಲವಾದರೆ ಪೂರ್ಣ ಬಿಲ್ ಕಟ್ಟಬೇಕು. ಜನರು ಜುಲೈ 27ರ ನಂತರ ಅರ್ಜಿ ಸಲ್ಲಿಕೆ ಮಾಡಿದರೆ ಆಗಸ್ಟ್ ಫಲಾನುಭವಿಯಾಗಲಿದ್ದು, ಸೆಪ್ಟೆಂಬರ್‌ನಲ್ಲಿ ಶೂನ್ಯ ಬಿಲ್ ಪಡೆಯಲಿದ್ದಾರೆ.












Click it and Unblock the Notifications