ಸರ್ಕಾರಕ್ಕೆ ಎರಡು ವರ್ಷ: ಮನೆ ಮನೆಯ ಬೆಳಕಾದ 'ಗೃಹಜ್ಯೋತಿ'
ಬೆಂಗಳೂರು, ಮೇ 26: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸಿದೆ. ಕಾಂಗ್ರೆಸ್ ಸರ್ಕಾರ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ 'ಗೃಹಜ್ಯೋತಿ' ಸಹ ಒಂದು. ಈ ಯೋಜನೆಯಡಿ ಪ್ರತಿ ಗೃಹ ಬಳಕೆದಾರರು ಗರಿಷ್ಠ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ಯೋಜನೆಯು 2023ರ ಜುಲೈ ತಿಂಗಳ ವಿದ್ಯುತ್ ಬಳಕೆಗೆ ಅನ್ವಯವಾಗಿದ್ದು, ಆಗಸ್ಟ್ 1 ಹಾಗೂ ನಂತರದ ಮಾಪಕ ಓದುವ ದಿನಾಂಕದಿಂದ ಅನುಷ್ಠಾನಗೊಂಡಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 'ಗೃಹಜ್ಯೋತಿ' ಯೋಜನೆ ಕತ್ತಲೆಯನ್ನು ದೂರ ಮಾಡಿದೆ. ಇಂಧನ ಇಲಾಖೆ ಮೂಲಕ ಜಾರಿ ಮಾಡಲಾದ ಯೋಜನೆ ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಮನೆ ಬೆಳಗುವುದು ಮಾತ್ರವಲ್ಲ, ವಿದ್ಯುತ್ ಬಿಲ್ ಹೊರೆ ಕಡಿಮೆ ಮಾಡಿದೆ.

ಗೃಹಜ್ಯೋತಿ ಯೋಜನೆಯು ಎರಡು ವರ್ಷ ಪೂರ್ಣಗೊಳಿಸುವತ್ತ ಹೆಜ್ಜೆ ಹಾಕುತ್ತಿದೆ. ಜಿಲ್ಲೆಯಲ್ಲಿ ಯೋಜನೆಗೆ ಅಭೂತ ಪೂರ್ವ ಸ್ಪಂದನೆ ಸಿಕ್ಕಿದೆ. ಜಿಲ್ಲೆಯಾದ್ಯಂತ ಅತ್ಯಂತ ಜನಪ್ರಿಯ ಯೋಜನೆ ಇದಾಗಿದೆ. ಫಲಾನುಭವಿಗಳು ನೋಂದಣಿ ಮಾಡಿಕೊಂಡು ಈ ಸೌಲಭ್ಯದ ಸದುಪಯೋಗ ಪಡೆದುಕೊಂಡಿದ್ದಾರೆ.
ಗೃಹಜ್ಯೋತಿ ಇದೀಗ ರಾಜ್ಯಾದ್ಯಂತ ಜನರ ಮನೆ-ಮನಗಳನ್ನು ಬೆಳಗುವ ಮೂಲಕ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟುಮಾಡಿದೆ. ಯೋಜನೆಗೆ ನೋಂದಣಿ ಕಾರ್ಯಕ್ಕೆ 2023ರ ಜೂನ್ 18ರಂದು ಅಧಿಕೃತವಾಗಿ ಚಾಲನೆ ಸಿಕ್ಕಿತ್ತು. ರಾಜ್ಯದಲ್ಲಿ ಯೋಜನೆಯಡಿ 200 ಯೂನಿಟ್‍ವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಕರ್ನಾಟಕದಾದ್ಯಂತ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಣಿ ನಡೆಯುತ್ತಿದೆ. ಫಲಾನುಭವಿಗಳು ತಮ್ಮ ಮೊಬೈಲ್‍ನಲ್ಲಿಯೇ ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸರಳಗೊಳಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 4,19,7722 ಗೃಹಪಯೋಗಿ ಗ್ರಾಹಕರಿದ್ದು, ಅದರಲ್ಲಿ ಒಟ್ಟು 3,75,160 ಗ್ರಾಹಕರು ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳಾಗಿದ್ದಾರೆ. 3,75,160 ಗ್ರಾಹಕರ ವಿದ್ಯುತ್ ಬಳಕೆ ಸಹಾಯಧನ ಮೊತ್ತ 15.13 ಕೋಟಿ ರೂ. ಗಳಷ್ಟು ಕಳೆದ ಏಪ್ರಿಲ್-2025ರ ಮಾಹೆಯಲ್ಲಿ ಸರ್ಕಾರದಿಂದ ಬಿಡುಗಡೆಯಾಗಿದ್ದು, ಈ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ 3,75,160 ಗ್ರಾಹಕರ ಸಹಾಯಧನ ಮೊತ್ತ ಒಟ್ಟು 292.75 ಕೋಟಿ ರೂ. ಗಳಷ್ಟು ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.
ಗೃಹಜ್ಯೋತಿ ಯೋಜನೆ ಫಲಾನುಭವಿ ಬಿ. ನಾಗರತ್ನಮ್ಮ, ವಾಲ್ಮೀಕಿ ನಗರ, ಜಾಫರ್ ಶರೀಫ್ ಲೇಔಟ್, ಚಳ್ಳಕೆರೆ ಮಾತನಾಡಿ, "ನಮ್ಮ ಮನೆಗೆ ಉಚಿತವಾಗಿ ವಿದ್ಯುತ್ ನೀಡುವಂತಹ ಗೃಹಜ್ಯೋತಿ ಯೋಜನೆ ಜಾರಿಗೆ ಬಂದಾಗಿನಿಂದ, ನಿಜಕ್ಕೂ ನಮಗೆ ಖುಷಿಯಾಗಿದೆ. ನಮ್ಮ ಮನೆಯ ನಿರ್ವಹಣೆಯಲ್ಲಿ ಗೃಹಜ್ಯೋತಿ ಯೋಜನೆ ಪ್ರಮುಖ ಪಾತ್ರ ವಹಿಸಿದೆ ಎಂದೇ ಹೇಳಲು ಬಯಸುತ್ತೇನೆ. ಮನೆಯಲ್ಲಿ ಕಷ್ಟ ಇರಲಿ, ಏನೇ ಇರಲಿ, ಪ್ರತಿ ತಿಂಗಳು ನಾವು ಕರೆಂಟ್ ಬಿಲ್ಲು ಕಟ್ಟಲೇ ಬೇಕಿತ್ತು. ಇಲ್ಲದೇ ಹೋದರೆ, ಸಂಪರ್ಕ ಕಡಿತ ಜೊತೆಗೆ, ದಂಡವು ಬೀಳುತ್ತಿತ್ತು. ಮನೆಯಲ್ಲಿ ಓದುವ ಮಕ್ಕಳಿಗೆ ರಾತ್ರಿ ಹೊತ್ತು ಕರೆಂಟ್ ಬೇಕೇ ಬೇಕು. ಗೃಹಜ್ಯೋತಿ ಯೋಜನೆ ಜಾರಿಗೆ ಬಂದ ಬಳಿಕ, ನಮಗೆ ಸಾಕಷ್ಟು ಹಣ ಉಳಿತಾಯ ಆಗುತ್ತಿದ್ದು, ಇದೇ ಹಣವನ್ನು ಇಟ್ಟುಕೊಂಡು, ಮನೆಯ ನಿರ್ವಹಣೆಗೆ ಬೇಕಿರುವ ತರಕಾರಿ, ಹಾಲು, ಮೊಸರು ಖರೀದಿಸುತ್ತಿದ್ದೇವೆ" ಎಂದರು.












Click it and Unblock the Notifications