ಗೃಹ ಜ್ಯೋತಿ ಯೋಜನೆ ನೋಂದಣಿ: ನಕಲಿ ಆ್ಯಪ್, ಪೋರ್ಟಲ್‌ಗಳ ಮೂಲಕ ನಿಮ್ಮ ಡೇಟಾ ಕಳ್ಳತನ- ಪೋಲಿಸರ ಎಚ್ಚರಿಕೆ, ಇಲ್ಲಿದೆ ಮಾಹಿತಿ
ಬೆಂಗಳೂರು, ಜುಲೈ 03: ಕರ್ನಾಟಕ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಜನರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್ ಅರ್ಜಿಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಗೃಹ ಜ್ಯೋತಿ ಯೋಜನೆ ನೋಂದಣಿಗಾಗಿ ಅನಧಿಕೃತ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಹೆಚ್ಚಾಗುತ್ತಿವೆ. ಈ ಕುರಿತು ಬೆಂಗಳೂರು ಪೊಲೀಸರ ಸೈಬರ್ ಕ್ರೈಂ ವಿಭಾಗವು ಜನರಿಗೆ ಎಚ್ಚರಿಕೆ ನೀಡಿದೆ.
ಅನಧಿಕೃತ ಅಪ್ಲಿಕೇಶನ್‌ಗಳು ಮತ್ತು ನಕಲಿ ವೆಬ್‌ಸೈಟ್‌ಗಳ ಮೂಲಕ ಸೈಬರ್ ಅಪರಾಧಿಗಳು ಅರ್ಜಿದಾರರ ಡೇಟಾವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದ ನಂತರ ಸೈಬರ್ ಕ್ರೈಮ್ ವಿಭಾಗವು ಎಚ್ಚರಿಕೆ ನೀಡಿದೆ.

ಈ ಕುರಿತು ಮಾತನಾಡಿರುವ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಎಸ್ ಡಿ ಶರಣಪ್ಪ, 'ನೋಂದಣಿ ಪ್ರಕ್ರಿಯೆಗಾಗಿ ಸರ್ಕಾರ ಯಾವುದೇ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿಲ್ಲ. ಆದರೆ ಜನರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಬಾಹ್ಯ ಲಿಂಕ್‌ಗಳನ್ನು ಬಳಸಬಾರದು' ಎಂದು ಅವರು ಹೇಳಿದರು.
'ಬಾಹ್ಯ ಪೋರ್ಟಲ್ ಮೂಲಕ ನೋಂದಣಿ ಕುರಿತು ನಾವು ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ. ಆದರೆ ಕೆಲವು ನಕಲಿ ಪೋರ್ಟಲ್‌ಗಳು ಮತ್ತು ಅಪ್ಲಿಕೇಶನ್‌ಗಳು ಆನ್‌ಲೈನ್‌ನಲ್ಲಿ ಓಡಾಡುತ್ತಿವೆ. ಈ ಕುರಿತು ಸಾರ್ವಜನಿಕರು ಜಾಗರೂಕರಾಗಿರಬೇಕು. ಇದರಿಂದ ನಿಮ್ಮ ಡೇಟಾ ಕಳ್ಳತನವಾಗಬಹುದು' ಎಂದು ತಿಳಿಸಿದರು.
ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ಐದು ಯೋಜನೆಗಳಲ್ಲಿ, ಮನೆಗಳಿಗೆ 200 ಯೂನಿಟ್‌ಗಳ ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿಗೆ ಲಕ್ಷಾಂತರ ಅರ್ಜಿಗಳು ಬಂದಿವೆ.

ಭಾನುವಾರದ ವರೆಗೆ, 92,50,157 ಕುಟುಂಬಗಳು ಯೋಜನೆಯ ಲಾಭ ಪಡೆಯಲು ನೋಂದಾಯಿಸಿಕೊಂಡಿವೆ. ಅವರಲ್ಲಿ 38,01,649 ಜನರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ( ಬೆಸ್ಕಾಂ ) ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಬೆಂಗಳೂರು ಮಹಾ ನಗರದಲ್ಲಿ ಹೆಚ್ಚು ನೋಂದಣಿಯಾಗಿದೆ.
ಉಚಿತ ವಿದ್ಯುತ್ ಯೋಜನೆಗೆ ನೋಂದಣಿ ಮಾಡಲು ತಾಂತ್ರಿಕ ದೋಷಗಳು ಎದುರಾಗಬಹುದು. ಇದರಿಂದ ಮಧ್ಯವರ್ತಿಗಳು ನೋಂದಣಿಗೆ ಸಹಾಯ ಮಾಡಲು ಮುಂದಾಗುತ್ತಿದ್ದಾರೆ. ಈ ಮೂಲಕ ಹೆಚ್ಚುವರಿ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಕುರಿತು ಟ್ವೀಟ್ ಮಾಡಿದ್ದರು. ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಯೋಜನೆಗೆ ಅರ್ಜಿ ಸಲ್ಲಿಸಬಹುದು, ಜನರು ವಂಚನೆಗೆ ಒಳಗಾಗಬಾರದು ಎಂದು ಕೇಳಿಕೊಂಡಿದ್ದರು.












Click it and Unblock the Notifications