ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ: ಸರ್ಕಾರಕ್ಕೆ ಗ್ರೀನ್‌ಪೀಸ್ ಇಂಡಿಯಾ ನೀಡಿದ ಸಲಹೆಗಳೇನು?

ಬೆಂಗಳೂರು, ಮೇ 29: ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಲ್ಲಿ ಪರಿಣಾಮಕಾರಿತ್ವ, ಸಮರ್ಥತೆ ಮತ್ತು ಯೋಜನೆಯು ಎಲ್ಲರಿಗೂ ತಲುಪುವಂತೆ ಮಾಡುವ ಶಿಫಾರಸ್ಸುಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆ ಪತ್ರ ಬರೆದಿದೆ.

ಮೊದಲನೆಯದಾಗಿ, ಉಚಿತ ಪ್ರಯಾಣ ಯೋಜನೆಯನ್ನು ಘೋಷಿಸಿದ್ದಕ್ಕಾಗಿ ಗ್ರೀನ್‌ಪೀಸ್ ಇಂಡಿಯಾ ಪರವಾಗಿ ನಾವು ನಿಮಗೆ ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಚುನಾವಣೆಯ ಮೊದಲು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಮತ್ತು ನಂತರ ಹೊಸದಾಗಿ ರಚನೆಯಾದ ನಿಮ್ಮ ಸರ್ಕಾರದಿಂದ, ಉಚಿತ ಪ್ರಯಾಣದ ಯೋಜನೆಯ ಅನುಷ್ಠಾನವು ರಾಜ್ಯ, ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಇಲ್ಲಿನ ಮಹಿಳೆಯರ ಪಾಲಿಗೆ ನೀವು ಇಡುತ್ತಿರುವ ದಿಟ್ಟ ಹೆಜ್ಜೆಯಾಗಿದೆ.

Greenpeace India Some Recommends To Karnataka Government About Free Bus Travel For Women

ಮಹಿಳೆಯರಿಗೆ ನೀಡಲಾದ ಉಚಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಆರ್ಥಿಕ ದೃಷ್ಟಿಯಿಂದಲೂ ಹಲವು ಸಕಾರಾತ್ಮಕ ಅಂಶಗಳನ್ನು ಹೊಂದಿದೆ. ಇದು ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳಾ ಕಾರ್ಮಿಕ ಬಲದ ಉತ್ತಮ ಭಾಗವಹಿಸುವಿಕೆ, ಎಲ್ಲರಿಗೂ ಸುರಕ್ಷಿತ ಮತ್ತು ಒಳಗೊಳ್ಳುವಿಕೆಯ ವಾತಾವರಣ ಇತ್ಯಾದಿಗಳನ್ನು ವಿವಿಧ ಹಂತಗಳಲ್ಲಿ ಸದೃಢವಾಗಿ ಪ್ರತಿಫಲಿಸುತ್ತದೆ.

ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯು ಪಂಜಾಬ್, ತಮಿಳುನಾಡು ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಈಗಾಗಲೇ ಪ್ರಯತ್ನಿಸಿದ ಮತ್ತು ಪರೀಕ್ಷಿಸಲ್ಪಟ್ಟ ಪರಿಹಾರವಾಗಿದೆ. ಇದರ ಅನುಷ್ಠಾನದ ನಂತರ ಫಲಾನುಭವಿಗಳ ಮಾಸಿಕ ಆದಾಯ, ಕಲಿಕೆ ಹಾಗು ಸಂಪರ್ಕಗಳ ಅಭಿವೃದ್ಧಿಗೆ ಸಂಚಾರ ಮತ್ತು ಸಾಮಾಜಿಕ ಅವಕಾಶಗಳು ಗಮನಾರ್ಹವಾಗಿ ಏರಿದವು. ಆದ್ದರಿಂದ, ಈ ಉಪಕ್ರಮವು ದೂರದರ್ಶಿತ್ವ ಹೊಂದಿದ್ದು , ಈ ನಿಟ್ಟಿನಲ್ಲಿ ನೂತನ ಸರ್ಕಾರವು ಇಡುತ್ತಿರುವ ಮೊದಲ ಹೆಜ್ಜೆಯು ಅಭಿನಂದನೀಯವಾಗಿದೆ.

ಈ ಮಾದರಿಯನ್ನು ಅನುಸರಿಸಿದ ರಾಜ್ಯಗಳ ನೀತಿಗಳಿಂದ ಸ್ಫೂರ್ತಿ ಪಡೆದಂತೆ, ಆ ರಾಜ್ಯಗಳು ಎದುರಿಸಿದ ಸವಾಲುಗಳು ಮತ್ತು ನ್ಯೂನತೆಗಳಿಂದಲೂ ನಾವು ಪಾಠ ಕಲಿಯಬೇಕಿದೆ. ಇತ್ತೀಚಿಗೆ ದೆಹಲಿಯ ಕೆಲವು ಡಿಟಿಸಿ ಬಸ್ ಚಾಲಕರು ಉದ್ದೇಶಪೂರ್ವಕವಾಗಿ ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿರಾಕರಿಸಿದ ಘಟನೆಗಳು ಆಘಾತಕಾರಿಯಾಗಿವೆ.

Greenpeace India Some Recommends To Karnataka Government About Free Bus Travel For Women

ಇದು ಈ ಯೋಜನೆಯ ಸರಿಯಾದ ಅನುಷ್ಠಾನದ ಕೊರತೆ ಮತ್ತು ಯಾವುದೇ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು ಜಾರಿಯಲ್ಲಿ ಇಲ್ಲದಿರುವಿಕೆಯನ್ನು ಸೂಚಿಸುತ್ತದೆ. ಇದಲ್ಲದೇ, ರಾಜ್ಯದ ಹಲವೆಡೆ, ಕೆಲವು ಬಸ್‌ಗಳಲ್ಲಿ ಅನೌಪಚಾರಿಕವಾಗಿ ತ್ಯಾಜ್ಯ ಸಂಗ್ರಹದಲ್ಲಿ ತೊಡಗಿಸಿಕೊಂಡಿರುವವರಿಗೆ ಮೇಲು ಕೀಳು ಎಂಬ ಜಾತಿ ತಾರತಮ್ಯ ಕಾರಣಗಳಿಗಾಗಿ ಪ್ರಯಾಣಿಸುವ ಅವಕಾಶವನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ. ಹಾಗಾಗಿ, ಉಚಿತ ಪ್ರಯಾಣದ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಮತ್ತು ಆ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಲು, ಆರಂಭದಿಂದಲೇ ಅಂತಹ ಸಂಭವನೀಯ ಲೋಪದೋಷಗಳನ್ನು ಪರಿಹರಿಸುವುದು ಮುಖ್ಯವಾಗಿದೆ.

ಈ ಹಿನ್ನಲೆಯಲ್ಲಿ ಗ್ರೀನ್‌ಪೀಸ್ ಇಂಡಿಯಾ, ಉಚಿತ ಪ್ರಯಾಣದ ಯೋಜನೆಯನ್ನು ಹೆಚ್ಚು ಪರಿಣಾಮಕಾರಿ, ಸದೃಢ ಮತ್ತು ಎಲ್ಲರನ್ನು ಒಳಗೊಳ್ಳುವಂತೆ ಮಾಡಲು ಕೆಲವು ಶಿಫಾರಸ್ಸುಗಳನ್ನು ಮುಂದಿಡುತ್ತದೆ.

1. ಮಹಿಳೆಯರಿಗೆ ಉಚಿತ ಬಸ್ಸುಗಳು ಹೆಚ್ಚು ಸುಲಭವಾಗಿ, ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ದೊರೆಯುವಂತೆ ಮಾಡುವುದು.

ಸಾರ್ವಜನಿಕ ಸ್ಥಳಗಳು ಮತ್ತು ಸಾರಿಗೆ ಪ್ರತಿಯೊಬ್ಬರಿಗೂ ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲು, ಮಹಿಳೆಯರೊಂದಿಗೆ, ಲೈಂಗಿಕ ಅಲ್ಪ ಸಂಖ್ಯಾತ ಸಮುದಾಯಕ್ಕೂ ಉಚಿತ ಬಸ್ ಸೌಲಭ್ಯ ಲಭ್ಯವಿರಬೇಕು.

-ಬಸ್‌ಗಳಲ್ಲಿ ಮಹಿಳೆಯರು ಮತ್ತು ವೃದ್ಧರಿಗೆ ಮಾತ್ರವಲ್ಲದೆ ಲೈಂಗಿಕ ಅಲ್ಪಸಂಖ್ಯಾತರಿಗೂ ಮೀಸಲು ಸೀಟುಗಳಿರಬೇಕು. ಸುರಕ್ಷತಾ ಸಹಾಯವಾಣಿ ಸಂಖ್ಯೆಗಳನ್ನು ಬಸ್ಸುಗಳು ಮತ್ತು ಬಸ್ಸು ತಂಗುದಾಣ, ನಿಲ್ದಾಣಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು.

-ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನೇ ಬಸ್ ಕಂಡಕ್ಟರ್‌ಗಳು, ಡ್ರೈವರ್‌ಗಳು ಮತ್ತು ಇತರ ವಿಭಾಗದ ಸಿಬ್ಬಂದಿಗಳಾಗಿ ನೇಮಿಸಿಕೊಳ್ಳಲು ಪ್ರಯತ್ನಿಸಬೇಕು. ಜೊತೆಗೆ ಮಹಿಳೆಯರಿಗೆ ಬೆಂಬಲವಾಗಿರುವಂತಹ ಕೆಲಸದ ವಾತಾವರಣವನ್ನು ಖಚಿತಪಡಿಸಿಕೊಳ್ಳಬೇಕು.

-ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಒತ್ತಡ ಮುಕ್ತ ಪ್ರಯಾಣದ ಅನುಭವ ದೊರಕುವಂತೆ ಮಾಡಲು ಪ್ರತಿ ಗಂಟೆಗೊಮ್ಮೆ ವಿಶೇಷ ಮಹಿಳಾ ಬಸ್ಸುಗಳನ್ನು ನಿಗದಿಪಡಿಸಬೇಕು.

-ಎಲ್ಲಾ ಬಸ್ ನಿಲ್ದಾಣಗಳಲ್ಲಿ ಶೌಚಾಲಯಗಳು, ಸರಿಯಾದ ಬೆಳಕು, ಸಾರ್ವಜನಿಕ ಪ್ರಕಟಣೆ, ಮಾಹಿತಿ ಪ್ರದರ್ಶನ ವ್ಯವಸ್ಥೆ ಮುಂತಾದ ಸೌಕರ್ಯಗಳನ್ನು ಅಳವಡಿಸಬೇಕು. ಇದರಿಂದ ಅದು ಬಸ್ಸು ಬಳಕೆದಾರರಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾತಾವರಣ ಸೃಷ್ಟಿಸುತ್ತದೆ.

-ಬಸ್ ಪ್ರಯಾಣಿಕರಿಗೆ ಪರಿಣಾಮಕಾರಿಯಾದ 24/7 (ದಿನದ 24 ಗಂಟೆಗಳ ಸೇವೆಯ) ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಒದಗಿಸುವುದು. ಯಾವುದೇ ಪೂರ್ವ ನೋಂದಣಿ ಅಥವಾ ಗುರುತು ಚೀಟಿ ಆಧರಿಸದೆ, ಬಸ್‌ಗೆ ಏರುವಾಗ, ಉಚಿತವಾದ ಸುಲಭವಾದ ಬಸ್ ಟಿಕೆಟಿಂಗ್ ವ್ಯವಸ್ಥೆಯನ್ನು ಲಭ್ಯವಾಗುವಂತೆ ಮಾಡಬೇಕು. ಇದು ವಲಸಿಗರು ಮತ್ತು ಸ್ಥಳೀಯ ನಿವಾಸಿಗಳಲ್ಲದವರೂ ಸೇರಿದಂತೆ ಕರ್ನಾಟಕದ ಎಲ್ಲಾ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುವುದನ್ನು ಖಾತರಿ ಪಡಿಸುತ್ತದೆ.

2. ಬಿಎಂಟಿಸಿ ಬಸ್ಸುಗಳ ಸಂಖ್ಯೆಯನ್ನು 14,000ಕ್ಕೆ ಹೆಚ್ಚಿಸಿ

-ನಾಗರಿಕರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಲಭ್ಯತೆ ಮತ್ತು ಅದಕ್ಕೆ ಪ್ರವೇಶವನ್ನು ಹೆಚ್ಚಿಸುವುದು. 2023 ರ ಅಂತ್ಯದ ವೇಳೆಗೆ ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು ತಕ್ಷಣವೇ 10,000 ಕ್ಕೆ ಮತ್ತು 5 ವರ್ಷಗಳಲ್ಲಿ 14,000 ಕ್ಕೆ ಹೆಚ್ಚಿಸಬೇಕು.

ಹೊಸದಾಗಿ ಖರೀದಿಸುವ 90 ಶೇಕಡಾ ಬಸ್ಸುಗಳು ಸೌರಶಕ್ತಿ ಮತ್ತು ವಿದ್ಯುತ್ ಚಾಲಿತವಾಗಿದ್ದು, ಎಲ್ಲರ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಕಡಿಮೆ ಹೊಗೆ ಸೂಸುವ ಹಾಗೂ ಸುಲಭವಾಗಿ ಹತ್ತಬಲ್ಲ ಮೆಟ್ಟಿಲುಗಳನ್ನು ಒಳಗೊಂಡ ಮಾದರಿಯದ್ದಾಗಿರಬೇಕು.

- ಬೆಂಗಳೂರಿನಲ್ಲ್ಲಿ ಒಂದರಲ್ಲೇ ಕನಿಷ್ಠ 5000 ಹೊಸ ಮಿನಿ ಬಸ್‌ಗಳನ್ನು ವಿಶೇಷವಾಗಿ ಒಳಗಿನ ರಸ್ತೆಗಳು ಮತ್ತು ಎರಡನೇ ಹಂತದ ರಸ್ತೆಗಳಲ್ಲಿ ನಿಯೋಜಿಸಬೇಕು. ಮಿನಿ ಬಸ್‌ಗಳು ಎಲ್ಲರಿಗೂ ಮೊದಲ ಮತ್ತು ಕೊನೆಯ ನಿಲ್ದಾಣದ ಸಂಪರ್ಕವನ್ನು ಒದಗಿಸುತ್ತದೆ.

- ಸಾರ್ವಜನಿಕ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲು ಸರಕಾರವು ರಾಜ್ಯದ ಇತರ ಸಾರಿಗೆ ನಿಗಮಗಳಿಗೆ ಹಣಕಾಸಿನ ಹಂಚಿಕೆಯನ್ನು ಹೆಚ್ಚಿಸಬೇಕು.

3. ಬೆಂಗಳೂರಿನಲ್ಲಿ 11 ಬಸ್ ಲೇನ್‌ಗಳನ್ನು ನಿರ್ಮಿಸುವುದು

- ನಗರದ ಸಾರಿಗೆ ದಟ್ಟಣೆಯನ್ನು ಕಡಿಮೆ ಮಾಡಲು, ಸಮಯಕ್ಕೆ ಸರಿಯಾಗಿ ಸಂಚರಿಸುವ ವಿಶ್ವಾಸಾರ್ಹ ಬಸ್ಸು ಪ್ರಯಾಣವನ್ನು ಒದಗಿಸಲು ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಬೆಂಗಳೂರಿನ 11 ರಸ್ತೆಗಳಲ್ಲಿ ಬಸ್ಸುಗಳಿಗೆ ಮಾತ್ರ ಮೀಸಲಾದ ಬಸ್ ಲೇನ್‌ಗಳನ್ನು ಸ್ಥಾಪಿಸಬೇಕು.

- ರಾಜ್ಯದ ಸಾರ್ವಜನಿಕ ಬಸ್ ಸಾರಿಗೆ ಜಾಲವನ್ನು ಹೆಚ್ಚು ಸದೃಢಗೊಳಿಸಲು ಕರ್ನಾಟಕದ ಇತರ ಪ್ರದೇಶಗಳಲ್ಲಿ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ಸ್ (BRTS) ಸ್ಥಾಪಿಸಬೇಕು.

ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಅಗತ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗುತ್ತಿದೆ. ಆದರೆ ನಗರ ಸಾರಿಗೆಯಲ್ಲಿನ ಹೂಡಿಕೆಗಳು ಹೆಚ್ಚಾಗಿ ಲಿಂಗ ಸೂಕ್ಷ್ಮ ಸಂವೇದೀ ವಿಷಯಗಳನ್ನು ನಿರ್ಲಕ್ಷಿಸುತ್ತವೆ ಮತ್ತು ಸಂಪರ್ಕ ಸಾರಿಗೆ ಹಾಗು ಲಿಂಗ ಸೂಕ್ಷ್ಮ ಸಂವೇದನೆಗಳ ನಡುವಿನ ಸಂಬಂಧಗಳ ಬಗ್ಗೆ ಕಡಿಮೆ ಅರಿವು ಹೊಂದಿದೆ. ನಗರ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ, ಸೌಕರ್ಯ, ಅನುಕೂಲತೆ ಮತ್ತು ಕೈಗೆಟುಕುವ ದರಕ್ಕೆ ಒತ್ತು ನೀಡದೆ ಹೋದರೆ, ಸುಸ್ಥಿರ ನಗರ ಅಭಿವೃದ್ಧಿಯು ಸಾಧಿಸಲು ಸಾಧ್ಯವಿಲ್ಲದಂತಾಗುತ್ತದೆ. ಮಹಿಳೆಯರಿಗಾಗಿ ನಗರವನ್ನು ನಿರ್ಮಿಸುವುದು ಎಂದರೆ ಮೂಲಭೂತವಾಗಿ ಎಲ್ಲರಿಗೂ ನಗರವನ್ನು ನಿರ್ಮಿಸುವುದಾಗಿದೆ. ನಿಮ್ಮ ಸರ್ಕಾರವು ಈ ಶಿಫಾರಸ್ಸುಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸ್ತ್ರೀಪರ ಮತ್ತು ಎಲ್ಲರಿಗೂ ಸಮಾನವಾದ ನಗರವನ್ನು ನಿರ್ಮಿಸಲು ಅಡಿಪಾಯ ಹಾಕುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಗ್ರೀನ್‌ಪೀಸ್ ಇಂಡಿಯಾ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+