Green Gram Price: ಹೆಸರುಕಾಳಿಗೆ ಬಂಪರ್ ದರ: ಮೂರು ವರ್ಷಗಳಲ್ಲಿ ಗರಿಷ್ಠ ಧಾರಣೆ
ಹೆಸರು ಕಾಳು ಬೆಳೆದ ರೈತರೀಗ ಸಂತಸಗೊಂಡಿದ್ದಾರೆ. ಹೌದು, ಹೆಸರು ಕಾಳಿನ ಬೆಲೆ ಸದ್ಯ ಭಾರಿ ಹೆಚ್ಚಳವಾಗಿದ್ದು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಧಾರಣೆಗೆ ಮಾರಾಟವಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಹೆಸರುಕಾಳಿನ ಕನಿಷ್ಠ ದರ 2000 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 12455 ರೂಪಾಯಿ ಆಗಿತ್ತು.
ಬಾಗಲಕೋಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರು ಮುಗಿಬಿದ್ದು ಹೆಸರುಕಾಳನ್ನು ಖರೀದಿ ಮಾಡುತ್ತಿದ್ದಾರೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆಗಸ್ಟ್ ಮೊದಲ ವಾರದಿಂದ ಹೆಸರುಕಾಳು ಆವಕ ಶುರುವಾಗಿದ್ದು, ಆರಂಭದಲ್ಲಿ 8 ಸಾವಿರ ರೂಪಾಯಿ ಇದ್ದ ಹೆಸರುಕಾಳು ಬೆಲೆ ಈಗ 12455 ರೂಪಾಯಿಗೆ ಹೆಚ್ಚಳವಾಗಿದೆ.

ಎರಡು ವರ್ಷಗಳಿಂದ ಹೆಸರು ಕಾಳು ಧಾರಣೆ ಪ್ರತಿ ಕ್ವಿಂಟಲ್‌ಗೆ 4500 ಸಾವಿರದಿಂದ 7500 ರೂಪಾಯಿವರೆಗೆ ಇತ್ತು. ಎರಡು ವರ್ಷ ಅಧಿಕವಾಗಿ ಹೆಸರು ಕಾಳು ಮಾರುಕಟ್ಟೆಗೆ ಬಂದ ಕಾರಣ ದರ ಕುಸಿತವಾಗಿತ್ತು.
ಕೈಕೊಟ್ಟ ಮುಂಗಾರು ಕಡಿಮೆಯಾದ ಬಿತ್ತನೆ
ಈ ವರ್ಷ ಮುಂಗಾರು ಕೈಕೊಟ್ಟ ಕಾರಣ ಬಿತ್ತನೆ ಮಾಡುವ ಪ್ರಮಾಣ ಕೂಡ ಕಡಿಮೆಯಾಗಿದೆ. ವಾಡಿಕೆಯಂತೆ ಸುಮಾರು 20,250 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಕಾಳು ಬಿತ್ತನೆಯಾಗಬೇಕು, ಈ ಬಾರಿ ಕೇವಲ 6,840 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಬಿತ್ತನೆ ಕಡಿಮೆಯಾಗಿದ್ದು, ಇದರಿಂದ ಇಳುವರಿ ಕಡಿಮೆಯಾಗಿದ್ದು, ದರ ಕೂಡ ಹೆಚ್ಚಾಗಿದೆ ಎಂದು ಬಾಗಲಕೋಟೆ ಎಪಿಎಂಸಿ ಕಾರ್ಯದರ್ಶಿ ವಿ.ಡಿ. ಪಾಟೀಲ್ ಹೇಳಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ.
ಕಳೆದ ವರ್ಷ ಮಾರುಕಟ್ಟೆಗೆ 1,42,140 ಕ್ವಿಂಟಲ್ ಹೆಸರು ಕಾಳು ಮಾರುಕಟ್ಟೆಗೆ ಬಂದಿತ್ತು. ಆದರೆ ಈ ಬಾರಿ 13,207 ಕ್ವಿಂಟಾಲ್ ಹೆಸರುಕಾಳು ಮಾತ್ರ ಮಾರುಕಟ್ಟೆಗೆ ಬಂದಿದೆ. ಹೆಸರುಕಾಳಿಗೆ 8558 ರೂಪಾಯಿ ಬೆಂಬಲ ಬೆಲೆ ಇದ್ದು, ಮಾರುಕಟ್ಟೆಯಲ್ಲಿ ಅದಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಹೆಸರುಕಾಳು ಬೆಲೆ
ಬಾಗಲಕೋಟೆ ಮಾರುಕಟ್ಟೆಯಲ್ಲಿ ಹೆಸರು ಕಾಳು ಬೆಲೆ ಕನಿಷ್ಠ 2000 ರೂಪಾಯಿ ಗರಿಷ್ಠ 12455 ರೂಪಾಯಿ ಇದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಹೆಸರುಕಾಳು ಬೆಲೆ ಕನಿಷ್ಠ 9300 ರೂಪಾಯಿ ಇದ್ದರೆ ಗರಿಷ್ಠ ಧಾರಣೆ 12500 ರೂಪಾಯಿ ಆಗಿತ್ತು.
ಬಸವಕಲ್ಯಾಣ ಮಾರುಕಟ್ಟೆಯಲ್ಲಿ ಕನಿಷ್ಠ ಧಾರಣೆ 9500 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 10580 ರೂಪಾಯಿ ಆಗಿತ್ತು. ಬೀದರ್ ಮಾರುಕಟ್ಟೆಯಲ್ಲಿ ಕನಿಷ್ಠ ಧಾರಣೆ 8500 ರೂಪಾಯಿ, ಗರಿಷ್ಠ ಧಾರಣೆ 12025 ರೂಪಾಯಿ ಇತ್ತು. ಗದಗ ಮಾರುಕಟ್ಟೆಯಲ್ಲಿ 8570 ರೂಪಾಯಿ ಕನಿಷ್ಠ ಧಾರಣೆ ಇದ್ದರೆ, ಗರಿಷ್ಠ ಧಾರಣೆ 13029 ರೂಪಾಯಿಗೆ ಮಾರಾಟವಾಗಿದೆ. ಲಕ್ಷ್ಮೇಶ್ವರ ಮಾರುಕಟ್ಟೆಯಲ್ಲಿ ಕನಿಷ್ಠ ಧಾರಣೆ 6125 ರೂಪಾಯಿ ಇದ್ದರೆ ಗರಿಷ್ಠ ಧಾರಣೆ 13800 ರೂಪಾಯಿ ಆಗಿತ್ತು.












Click it and Unblock the Notifications