ಗೃಹಲಕ್ಷ್ಮಿ ಹಣ ಕೂಡಿಟ್ಟು ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ
ಬೆಳಗಾವಿ, ಆಗಸ್ಟ್ 25: ರಾಜ್ಯ ಕಾಂಗ್ರೆಸ್ ಜಾರಿಗೆ ತಂದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯು ಮಹಿಳೆಯರ ಪಾಲಿಗೆ ವರದಾನ ಎಂದು ಕರೆಯಲಾಗುತ್ತಿದೆ. ಕಳೆದ ವರ್ಷ ಕಾಂಗ್ರೆಸ್ ಪಕ್ಕ ಅಧಿಕಾರಕ್ಕೇರಿದ ನಂತರ ಆಶ್ವಾಸನೆಯಂತೆ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂಪಾಯಿ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ ಮಾಡುತ್ತಿದೆ. ಇದು ಅದೆಷ್ಟೋ ಬಡ ಮಹಿಳೆಯರ ಬದುಕಿಗೆ ಆಸರೆಯಾಗಿರುವ ನಿದರ್ಶನಗಳೂ ಇವೆ.
ಇದೀಗ ಇದೇ ಗೃಹಲಕ್ಷ್ಮಿ ಯೋಜನೆಯಿಂದ ಕೂಡಿಟ್ಟ ಹಣದಿಂದ ವೃದ್ಧೆಯೊಬ್ಬರು ತಮ್ಮ ಊರಿನ ಮಹಿಳೆಯರಿಗೆ ಹೋಳಿಗೆ ಊಟ ಉಣಡಬಡಿಸಿ ಬಾಯಿ ಸಿಹಿ ಮಾಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿ ಎನ್ನುವ ಗ್ರಾಮದ ಅಕ್ಕಾತಾಯಿ ಲಂಗೋಟಿ ಎನ್ನುವ ವೃದ್ಧೆ ತನಗೆ ಬಂದಿದ್ದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಗ್ರಾಮದ ಮಹಿಳೆಯರಿಗೆ ಹೋಳಿಗೆ ರುಚಿ ತೋರಿಸಿದ್ದಾರೆ. ಇದರಿಂದ ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡುತ್ತಿರುವ ಗೃಹಲಕ್ಷ್ಮಿ ಹಣದಿಂದ ನಮಗೆಲ್ಲ ಬಹಳ ಅನುಕೂಲವಾಗುತ್ತಿದೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ಈ ಕಾರಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಿಕೊಂಡು, ನಮ್ಮ ಊರಿನವರಿಗೆ ಸಿಹಿ ಊಟ ಹಾಕಿಸಿದ್ದೇನೆ ಎಂದು ಅಜ್ಜಿ ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕೆಲಸವನ್ನೂ ಅಜ್ಜಿ ಮಾಡಿದ್ದಾರೆ. ಗ್ರಾಮಸ್ಥರೆಲ್ಲ ಅಕ್ಕಾತಾಯಿ ಅವರ ಮನೆಗೆ ಆಗಮಿಸಿ, ರುಚಿ ರುಚಿಯಾದ ಹೋಳಿಗೆ ಸವಿದು ಹರಸಿದ್ದಾರೆ.
ನನಗೆ ಗೃಹಲಕ್ಷ್ಮಿ ಯೋಜನೆಯಿಂದ ಹತ್ತು ಕಂತಿನ ಹಣ ಖಾತೆಗೆ ಜಮೆ ಆಗಿದೆ. ಈ ಯೋಜನೆಯಿಂದ ನನ್ನಂತಹ ಅನೇಕ ಬಡವರಿಗೆ ತುಂಬಾ ಅನುಕೂಲವಾಗಿದೆ. ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇದೇ ರೀತಿ ಗೃಹಲಕ್ಷ್ಮಿ ಯೋಜನೆಯು ಅನೇಕರ ಬದುಕಿಗೆ ನೆರವಾಗಿದ್ದು, ಈ ಹಣದ ಎರಡು ಕಂತಿನ ಹಣದಿಂದ ಮಹಿಳೆಯೊಬ್ಬರು ಕುರಿ ಮರಿಯನ್ನು ಖರೀದಿಸಿ, ಅದಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ನಾಮರಕಣ ಮಾಡಿದ್ದರು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದ ವಿಜಯಪುರದ ವಿದ್ಯಾರ್ಥಿ ವೇದಾಂತ್ ನವಿ ಕೂಡ ಗೃಹಲಕ್ಷ್ಮಿ ಹಣ ನನ್ನ ಓದಿಗೆ ಸಹಾಯವಾಯ್ತು ಎಂದು ಸಂತಸ ವ್ಯಕ್ತಪಡಿಸಿದ್ದರು. ಕೆಲವರು ತಮ್ಮ ಮಕ್ಕಳಿಗೆ ಈ ಹಣದಿಂದ ಸೈಕಲ್ ಕೊಡಿಸಿರುವ ಉದಾಹರಣೆಗಳೂ ಇವೆ.
ಹಾವೇರಿ ಜಿಲ್ಲೆಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿ ಪ್ರತಿ ತಿಂಗಳ ಹಣವನ್ನು ಕೂಡಿಟ್ಟು ತಮ್ಮ ಇಷ್ಟದ ಮೊಬೈಲ್ ಖರೀದಿಸಿ, ಸಿದ್ದರಾಮಯ್ಯ ಅವರ ಫೋಟೋವನ್ನು ವಾಲ್ ಪೇಪರ್‌ನಲ್ಲಿರಿ ಸಂಭ್ರಮಿಸಿದ್ದರು.

ಗೃಹಲಕ್ಷ್ಮಿ ಯೋಜನೆ ಬಡವರ ಮನೆಯ ಹಸಿವು ನೀಗಿಸುತ್ತಿರುವುದು ಮಾತ್ರವಲ್ಲ, ನಾಡಿನ ಲಕ್ಷಾಂತರ ತಾಯಂದಿರು, ಅಕ್ಕತಂಗಿಯರ ಕನಸುಗಳನ್ನು ನನಸಾಗಿಸಿದೆ. ಕೆಲವರು ಟಿ.ವಿ ಖರೀದಿಸಿದರೆ, ಮತ್ತೆ ಕೆಲವರು ಮೊಬೈಲ್, ಫ್ರಿಡ್ಜ್, ಬಟ್ಟೆಬರೆ ಹೀಗೆ ತಿಂಗಳ ಹಣ ಕೂಡಿಟ್ಟು ಇಷ್ಟದ ವಸ್ತುಗಳ ಖರೀದಿಸುತ್ತಿದ್ದಾರೆ.
ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಕಾಲಕ್ಕೆ ಖಾತೆಗಳಿಗೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಶೀಘ್ರವೇ ಈ ತೊಡಕು ನಿವಾರಿಸಿ ಎಂದಿನಂತೆ ಹಣ ಬಿಡುಗಡೆ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.












Click it and Unblock the Notifications