ಪಂಚಾಯಿತಿ ಫಲಿತಾಂಶ : ಯಾರು, ಏನು ಹೇಳಿದರು?
ಬೆಂಗಳೂರು, ಜೂ. 06 : ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟು 5,735 ಗ್ರಾಮ ಪಂಚಾಯಿತಿಗಳ 84,854 ಸ್ಥಾನಗಳಿಗೆ ನಡೆದ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಹೊರಬಿದ್ದಿದೆ. ಫಲಿತಾಂಶದ ಸ್ಪಷ್ಟ ಅಧಿಸೂಚನೆ ಹೊರಬಿದ್ದ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟವಾಗಲಿದೆ.
ಕರ್ನಾಟಕ ಸರ್ಕಾರ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಅಧ್ಯಕ್ಷ-ಉಪಾಧ್ಯಕ್ಷರ ಅವಧಿ 5 ವರ್ಷಗಳಾಗಲಿದೆ. ಹಿಂದಿನ ಕಾಯ್ದೆ ಪ್ರಕಾರ 20 ತಿಂಗಳಿಗೊಮ್ಮೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು ಬದಲಿಸಬಹುದಾಗಿತ್ತು. ಆದರೆ, ಈಗ ಅಧಿಕಾರವಹಿಸಿಕೊಂಡವರು 5 ವರ್ಷ ಕೆಲಸ ಮಾಡಬಹುದಾಗಿದೆ. [ಪಂಚಾಯಿತಿ ಫಲಿತಾಂಶದ ವಿಶೇಷತೆಗಳು]
ಜೂನ್ 20ರೊಳಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ಪ್ರಕಟಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ ಹೇಳಿದ್ದಾರೆ. ಸಣ್ಣಪುಟ್ಟ ಜಿಲ್ಲೆಗಳ ಮೀಸಲು ನಿಗದಿ ಜೂ.15-16ರೊಳಗೆ ಪ್ರಕಟಗೊಳ್ಳಲಿದೆ. ಜೂ.20ರೊಳಗೆ ಎಲ್ಲ ಪಂಚಾಯಿತಿಗಳ ಮೀಸಲು ಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. [ಪಂಚಾಯಿತಿ ಫೈಟ್ : ಯಾರ್ ಗೆದ್ರು, ಯಾರ್ ಸೋತ್ರು?]
ಪಂಚಾಯಿತಿ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರದ ಆಡಳಿತ ಮತ್ತು ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಜನರು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ. ಫಲಿತಾಂಶದ ಬಗ್ಗೆ ಯಾರು ಏನು ಹೇಳಿದರು ನೋಡೋಣ ಬನ್ನಿ....

ಸರ್ಕಾರದ ಕಾರ್ಯವನ್ನು ಮೆಚ್ಚಿದ್ದಾರೆ
ಸರ್ಕಾರದ ಜನಪರ ಕಾರ್ಯಗಳನ್ನು ಮೆಚ್ಚಿ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಜನರು ಮತನೀಡಿದ್ದಾರೆ. ಕಾಂಗ್ರೆಸ್ ಬೆಂಬಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮತದಾರರು ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ
ಎಲ್ಲಾ ಜಿಲ್ಲೆಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮತದಾರರ ತೀರ್ಪಿನಿಂದಾಗಿ ಕಾಂಗ್ರೆಸ್ ಪಕ್ಷದ ಶಕ್ತಿ ಹೆಚ್ಚಾಗಿದೆ. ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಹೇಳಿದ್ದಾರೆ.

ದುರಾಡಳಿತಕ್ಕೆ ಉತ್ತರ ಕೊಟ್ಟಿದ್ದಾರೆ
ಪಂಚಾಯಿತಿ ಫಲಿತಾಂಶದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರದ ದುರಾಡಳಿತಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ
ಪಂಚಾಯಿತಿ ಚುನಾವಣೆಯಲ್ಲಿ ಶೇ60ರಷ್ಟು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಗ್ರಾಮೀಣ ಭಾಗದ ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಬೇಕು.

ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ
ಕೇವಲ ಎರಡು ವರ್ಷಗಳಲ್ಲಿ ಜನರು ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಬಿಜೆಪಿಗೆ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳು ಬಂದಿವೆ. ಫಲಿತಾಂಶ ನೋಡಿದ ಕಾಂಗ್ರೆಸ್ ಸರ್ಕಾರ ತಾವು ಹೇಗೆ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಅರಿಯಲಿ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications