ಎರಡು ವರ್ಷಗಳಲ್ಲಿ 30 ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆ: ಎಂಬಿ ಪಾಟೀಲ್
ವಿಜಯಪುರ, ಆಗಸ್ಟ್ 15: ಜಿಲ್ಲೆಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ 1,850 ಕೋಟಿ ರೂ. ವೆಚ್ಚದಲ್ಲಿ 30 ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಮೂಲಕ ಜಿಲ್ಲೆಯ 2.75 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತು ಏಳು ಗಂಟೆಗಳ ಕಾಳ ಗುಣಮಟ್ಟದ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಭರವಸೆ ನೀಡಿದರು.
ಜಿಲ್ಲೆಯ ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅವರು ಮಂಗಳವಾರ 77ನೇ ಸ್ವಾತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಮೂಲಕ 400 ಕೆವಿ ಸಾಮರ್ಥ್ಯದ ಒಂದು, 220 ಕೆವಿ ಸಾಮರ್ಥ್ಯದ 2 ಮತ್ತು ತಲಾ 100 ಕಿಲೋವ್ಯಾಟ್ ಸಾಮರ್ಥ್ಯದ 27 ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು.

ಇನ್ನೂ ಶಾಶ್ವತ ನೀರಾವರಿ ಸೌಲಭ್ಯ ಇಲ್ಲದೇ ಇರುವ ಕೃಷಿಗಾಗಿ ಪಂಪ್‌ಸೆಟ್ ನೆಚ್ಚಿಕೊಂಡಿರುವ ರೈತವರ್ಗಕ್ಕೆ ತುಂಬಾ ಅನುಕೂಲವಾಗಲಿದೆ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.
4,022 ಕಿಮೀ ಉದ್ದದ ಕೊಳವೆ ಕಾಮಗಾರಿ ಪ್ರಗತಿ
ಬಹುಗ್ರಾಮ ಜಲಧಾರೆ ಯೋಜನೆಯಡಿ ಕೃಷ್ಣಾ ನದಿ ಮೂಲಕ ಪ್ರತಿದಿನವೂ 214 ಎಂಎಲ್‌ಡಿ ನೀರನ್ನು ಶುದ್ಧೀಕರಿಸಿ ಪೂರೈಸಲಾಗುವುದು. ಇದಕ್ಕಾಗಿ 4,022 ಕಿ.ಮೀ. ಉದ್ದದ ಕೊಳವೆ ಅಳವಡಿಸುವ ಕೆಲಸ ಈಗ ಪ್ರಗತಿಯಲ್ಲಿದೆ. ಇದಕ್ಕಾಗಿ 3,454 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಇದರಿಂದ ಚಡಚಣ, ಇಂಡಿ, ಮನಗೂಳಿ, ನಿಡಗುಂದಿ, ಕೊಲ್ಹಾರ, ನಾಲತವಾಡ, ಮುದ್ದೇಬಿಹಾಳ, ತಾಳಿಕೋಟೆ, ದೇವರಹಿಪ್ಪರಗಿ, ಆಲಮೇಲ, ಸಿಂದಗಿ, ಬಬಲೇಶ್ವರ ಮತ್ತು ತಿಕೋಟಾಗಳಿಗೆ ನೀರು ಪೂರೈಸಲಾಗುವುದು. ಈ ಮೂಲಕ ಒಟ್ಟು 1,045 ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದರು ವಿವರಿಸಿದರು.
ಕೊಲ್ಹಾರದಿಂದ ವಿಜಯಪುರಕ್ಕೆ ನೀರು ಪೂರೈಸಲು 10.74 ಕಿ.ಮೀ ಉದ್ದದಲ್ಲಿ ಉತ್ಕೃಷ್ಟ ದರ್ಜೆಯ ಪೈಪ್ ಅಳವಡಿಸಲಾಗುವುದು. ಇದಕ್ಕೆ 52 ಕೋಟಿ ರೂ. ವೆಚ್ಚವಾಗಲಿದೆ. ಆದಷ್ಟು ಶೀಘ್ರವೇ ಇದನ್ನು ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗುವುದು.
24 ಗಂಟೆ ಜಿಲ್ಲೆ ಜನರಿಗೆ ಕುಡಿಯುವ ನೀರು
ವಿಜಯಪುರ ನಗರಕ್ಕೆ ಮುಂದಿನ 50 ವರ್ಷಗಳ ಅಗತ್ಯವನ್ನು ಗಮನದಲ್ಲಿ ಇಟ್ಟುಕೊಂಡು, ದಿನದ ಇಪ್ಪತ್ನಾಲ್ಕು ಗಂಟೆಯೂ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದು ಹೇಳಿದರು.
ಶತಮಾನಗಳಷ್ಟು ಹಳೆಯ ಬೂತನಾಳ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿಗೆ ಕೃಷ್ಣಾ ನದಿಯಿಂದ ನೀರು ಹರಿಸಿ, ನಗರದ ಏಳು ವಾರ್ಡುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಿದ್ದೇವೆ. ಇದಕ್ಕಾಗಿ ಮುಳವಾಡ ಏತ ನೀರಾವರಿ ಯೋಜನೆ ಮತ್ತು ತಿಡಗುಂದಿ ಶಾಖಾ ಕಾಲುವೆಯಿಂದ ಸಂಪರ್ಕ ಕಲ್ಪಿಸಿ, ನೀರಿನ ಅಭಾವವಾಗದಂತೆ ಮುಂಜಾಗ್ರತೆ ವಹಿಸಲಿದ್ದೇವೆ ಎಂದು ಭರವಸೆ ನೀಡಿದರು.

ಈ 3 ಮೂಲ ಸೌಲಭ್ಯಕ್ಕೆ ಆದ್ಯತೆ
ನೀರು, ಹಸುರೀಕರಣ ಮತ್ತು ಶಿಕ್ಷಣ ನನ್ನ ಆದ್ಯತೆಯ ಮಂತ್ರಗಳಾಗಿವೆ. ಈ ಮೂರು ಕ್ಷೇತ್ರಗಳಲ್ಲಿ ರಚನಾತ್ಮಕ ಯೋಜನೆಗಳನ್ನು ರೂಪಿಸಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಐದು ಸ್ಥಾನಗಳಲ್ಲಿ ಪ್ರತಿಷ್ಠಾಪನೆಯಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದೇ ರೀತಿಯಲ್ಲಿ ಮಮದಾಪುರ ಕೆರೆಯ ಸಮೀಪ 1,526 ಎಕರೆಯಲ್ಲಿ 2 ಲಕ್ಷಕ್ಕೂ ಹೆಚ್ಚು ನಾನಾ ಪ್ರಭೇದಗಳ ಗಿಡಮರಗಳನ್ನು ಬೆಳೆಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸದರಿ ರಾಜ್ಯ ಬಜೆಟ್‌ನಲ್ಲಿ ವಿಜಯಪುರಕ್ಕೆ ಉತ್ಪಾದನಾ ಆಧಾರಿತ ಕೈಗಾರಿಕಾ ಕ್ಲಸ್ಟರನ್ನು ಘೋಷಿಸಲಾಗಿದೆ. ಇದಕ್ಕೆ ಪೂರಕವಾಗಿ ವಿಮಾನ ನಿಲ್ದಾಣದ ಕಾಮಗಾರಿಗಳಿಗೆ ವೇಗ ಒದಗಿಸಲಾಗಿದೆ. ಮುಂದಿನ ವರ್ಷದ ಏಪ್ರಿಲ್ ಹೊತ್ತಿಗೆ ಇದು ಉದ್ಘಾಟನೆಗೆ ಸಜ್ಜಾಗುವಂತೆ ನೋಡಿಕೊಳ್ಳಲಾಗುವುದು. ಇದು ಕೈಗೂಡಿದರೆ ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಮತ್ತು ಪ್ರವಾಸೋದ್ಯಮ ಎರಡೂ ಚೆನ್ನಾಗಿ ಬೆಳೆಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹೂಡಿಕೆ ಹೆಚ್ಚಾಗಿ ಉದ್ಯೋಗ ಸೃಷ್ಟಿ ಸಾಧ್ಯತೆ
ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡತೊಡಗಿದರೆ ಇಲ್ಲಿ ರಫ್ತು ಚಟುವಟಿಕೆಗಳು ಗರಿಗೆದರಲಿವೆ. ಇದರಿಂದ ಮುಂಬೈ, ಗೋವಾ, ಹೈದರಾಬಾದ್ ಮುಂತಾದ ನಗರಗಳು ಮತ್ತಷ್ಟು ನಿಕಟವಾಗಲಿದೆ. ಇಲ್ಲಿಗೆ ಹೆಚ್ಚಿನ ಉದ್ಯಮಗಳು ಬಂದು ಹೂಡಿಕೆ ಮಾಡುವುದರಿಂದ, ಸ್ಥಳೀಯರಿಗೆ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಲಿವೆ.
ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಮೂಲಯೋಜನೆಯನ್ನು ಪರಿಷ್ಕರಿಸಿ ನೈಟ್ ಲ್ಯಾಂಡಿಂಗ್‌ಗೆ ಕೂಡ ಅವಕಾಶ ಕಲ್ಪಿಸಲಾಗಿದೆ. ಒಟ್ಟು 400 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣವು ಇದೇ ತಿಂಗಳ 31ರಿಂದ ಕಾರ್ಯಾರಂಭ ಮಾಡಲಿದೆ ಎಂದು ಪಾಟೀಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರು, ಶಾಸಕರು, ಶಾಲಾ ತಂಡಗಳು ಭಾಗವಹಿಸಿದ್ದವು.












Click it and Unblock the Notifications