ವೈದ್ಯರ ಸಮಸ್ಯೆಗಳಿಗೆ ರಾಜೀನಾಮೆ ಪರಿಹಾರವಲ್ಲ

Posted By:
Subscribe to Oneindia Kannada

ಬೆಂಗಳೂರು, ಅ.25 : ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ. ಜನಸಾಮಾನ್ಯರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಭರವಸೆ ನೀಡಿದ್ದಾರೆ. ಸಮಸ್ಯೆಗಳಿಗೆ ರಾಜೀನಾಮೆ ಪರಿಹಾರವಲ್ಲ ಎಂದು ಖಾದರ್ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಖಾದರ್, ಜನಸಾಮಾನ್ಯರಿಗೆ ರೋಗಿಗಳಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಜನರ ಬಗ್ಗೆ ಕಾಳಜಿ ಇರುವ ವೈದ್ಯಾಧಿಕಾರಿಗಳು ಅವರಿಗೆ ತೊಂದರೆಯಾಗುವಂತೆ ನಡೆದುಕೊಳ್ಳಲಾರರು ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು. ['ದಂತಭಾಗ್ಯ' ಯೋಜನೆಗೆ ನವೆಂಬರ್‌ನಲ್ಲಿ ಚಾಲನೆ]

U.T.Khader

ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಬೇಡಿಕೆಗಳ ಕುರಿತು ಮಾಹಿತಿ ನೀಡಿದ ಸಚಿವರು, ವೈದ್ಯರ ವೇತನ ಪರಿಷ್ಕರಣೆ, ಸಮರ್ಪಕ ಔಷಧ ಪೂರೈಕೆ, ವೇತನ-ಭತ್ಯೆ ಸಕಾಲದಲ್ಲಿ ನೀಡುವುದಕ್ಕೆ ಸರ್ಕಾರದ ಸಹಮತಿ ಇದೆ ಎಂದು ಹೇಳಿದರು. ಇಲಾಖೆಯಲ್ಲಿ ಖಾಲಿ ಇರುವ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಮತ್ತು ಇತರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಯಲ್ಲೇ ಉಳಿಸಿಕೊಳ್ಳುವಂತೆ ಸಂಘವು ಬೇಡಿಕೆ ಇಟ್ಟಿದೆ. ಆದರೆ, ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಕೆಲವು ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಣೆ ನೀಡಿದರು.

ನೇಮಕ ಪ್ರಕ್ರಿಯೆ ಆರಂಭ : ಹೈದರಾಬಾದ್ ಕರ್ನಾಟಕದ ಮೀಸಲಾತಿ ನಿಗದಿ ಪ್ರಕ್ರಿಯೆಯಿಂದಾಗಿ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ನೇಮಕ ನಡೆಸಲು ಸಾಧ್ಯವಾಗಿರಲಿಲ್ಲ. ಅದರಲ್ಲಿ ಗುಂಪು ಎ ಮತ್ತು ಬಿ ಯ ವೈದ್ಯರ ನೇಮಕಕ್ಕೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಉಳಿದಂತೆ ಇಲಾಖೆಯಲ್ಲಿ ನೇಮಕಾತಿ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇಲಾಖೆಯಲ್ಲಿ 983 ತಜ್ಞ ವೈದ್ಯರು ಹಾಗೂ 2,118 ಅರೆ ವೈದ್ಯಕೀಯ ಸಿಬ್ಬಂದಿ, 331 ಎಂಬಿಬಿಎಸ್ ವೈದ್ಯರು, 87 ದಂತ ವೈದ್ಯರು, 318 ಚಾಲಕರನ್ನು ನೇಮಕ ಮಾಡಲಾಗುತ್ತಿದೆ ಎಂದರು. ವೈದ್ಯಾಧಿಕಾರಿಗಳ ವೇತನ ಪರಿಷ್ಕರಣೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆರ್ಥಿಕ ಇಲಾಖೆ ಹಾಗೂ ಸಚಿವ ಸಂಪುಟ ಒಪ್ಪಿಗೆ ದೊರೆಯಬೇಕಾಗಿದೆ ಎಂದು ಖಾದರ್ ಹೇಳಿದರು.

ಹಣಕಾಸು ಇಲಾಖೆ ಒಪ್ಪಿಗೆ ದೊರಕಿದರೆ ಎಂಬಿಬಿಎಸ್ ವೈದ್ಯರ ವೇತನ 75,768 ರೂ.ಗಳಿಗೆ ಹಾಗೂ ತಜ್ಞ ವೈದ್ಯರ ವೇತನ 93,853 ರೂ.ಗಳ ವರೆಗೆ ಹೆಚ್ಚಳವಾಗಲಿದೆ. ಇದು ವೈದ್ಯಕೀಯ ಕಾಲೇಜುಗಳ ವೈದ್ಯರ ವೇತನಕ್ಕಿಂತ ಸ್ವಲ್ಪ ಹೆಚ್ಚಾಗಲಿದೆ ಎಂದರು ಸಚಿವರು ವಿವರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Health Minister U.T.Khader said, government was open to discussion with the doctors, and that most of the demands had been discussed earlier. A proposal to increase the salaries of doctors was forwarded to the Finance Department last month.
Please Wait while comments are loading...