Breaking; ದುಂದು ವೆಚ್ಚ ಕಡಿವಾಣಕ್ಕೆ ಸಿಎಂ ದಿಟ್ಟ ಹೆಜ್ಜೆ
ಬೆಂಗಳೂರು, ಮೇ 08; ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ.
ರಾಜ್ಯದಲ್ಲಿ ವಿವಿಧ ಸರಕು ಮತ್ತು ಸೇವೆ ಪಡೆಯಲು ಕರೆಯುವ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯನ್ನು ರಚನೆ ಮಾಡಲಾಗಿದೆ.
ಡಿಸೆಂಬರ್‌ನಲ್ಲಿ ಸರ್ಕಾರ ಹೊರಡಿಸಿದ ಆದೇಶದಂತೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ರತ್ನಕಲಾ ಅಧ್ಯಕ್ಷತೆಯಲ್ಲಿ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜಲ ಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಬಿ. ಜಿ. ಗುರುಪಾದಸ್ವಾಮಿ (ಎಂಜಿನಿಯರಿಂಗ್ ಪರಿಣತ) ಹಾಗೂ ರಾಜ್ಯ ಲೆಕ್ಕಪತ್ರ ಇಲಾಖೆಯ ನಿವೃತ್ತ ನಿರ್ದೇಶಕ ಕೆ. ನಂದಕುಮಾರ್ (ಹಣಕಾಸು ವಿಷಯ ಪರಿಣತ) ಈ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಈ ಸಮಿತಿಯು ಈಗಾಗಲೇ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳಂತೆ 50 ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ ಟೆಂಡರ್‌ಗಳು ಪಾರದರ್ಶಕ, ನ್ಯಾಯಸಮ್ಮತವಾಗಿರುವ ಕುರಿತು ಪರಿಶೀಲನೆ ನಡೆಸಲಿದೆ. ಯೋಜನೆಯನ್ನು ರೂಪಿಸಲಾಗಿರುವ ರೀತಿ, ಅದಕ್ಕೆ ತಗುಲುವ ವೆಚ್ಚದ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ.
ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "50 ಕೋಟಿಗಿಂತ ಹೆಚ್ಚಿನ ಮೊತ್ತದ ಟೆಂಡರ್‌ಗಳ ಪರಿಶೀಲನೆಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು, ಆರ್ಥಿ ತಜ್ಞರು, ಇಲಾಖೆಯ ತಾಂತ್ರಿಕ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುತ್ತದೆ" ಎಂದು ಹೇಳಿದ್ದರು.
ಈ ಉನ್ನತ ಮಟ್ಟದ ಸಮಿತಿಯನ್ನು ಕೆಟಿಪಿಟಿ ಕಾಯ್ದೆಯ ಅನ್ವಯ ರಚನೆ ಮಾಡಲಾಗಿದೆ. ಕಾಮಗಾರಿ ಅಂದಾಜು ಮೊತ್ತ, ಟೆಂಡರ್ ನಿಯಮಗಳು ಇವುಗಳನ್ನು ಸಮಿತಿ ಪರಿಶೀಲನೆ ಮಾಡಿದ ಬಳಿಕ ಕಾಮಗಾರಿ ಆರಂಭವಾಗಬೇಕಿದೆ.












Click it and Unblock the Notifications