Govt Employees: 3 ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ: ಷಡಾಕ್ಷರಿ ಎಚ್ಚರಿಕೆ
ಬೆಂಗಳೂರು, ಜುಲೈ 09: ರಾಜ್ಯ ಸರ್ಕಾರ 3 ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಅನಿವಾರ್ಯವಾಗಿ ಮೂರನೇ ಹಂತವಾಗಿ ಜುಲೈ ಕೊನೆಯ ವಾರದಿಂದ ಅನಿರ್ದಿಷ್ಟಾವಧಿ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೇಳಿದ್ದಾರೆ.
ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸಬೇಕು, ಎನ್.ಪಿ.ಎಸ್ (NPS) ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು, ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸು ವರದಿಯಲ್ಲಿನ ಫಿಟ್‌ಮೆಂಟ್ ಸೌಲಭ್ಯವನ್ನು ಜಾರಿ ಮಾಡಬೇಕು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಮರುಚಾಲನೆ ನೀಡಬೇಕು ಮುಂತಾದ ನೌಕರರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಅನುಷ್ಠಾನಕ್ಕೆ ತರುವಂತೆ ಷಡಾಕ್ಷರಿ ಅವರುಆಗ್ರಹಿಸಿದ್ದಾರೆ.

ಹೋರಾಟದ ಮೊದಲ ಹಂತವಾಗಿ ಜುಲೈ 14ರವರೆಗೆ ಶಾಸಕರು, ಸಚಿವರು, ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗೆ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳ ಕುರಿತು ಆಯಾ ತಾಲ್ಲೂಕು-ಜಿಲ್ಲಾ ಶಾಖೆಗಳು ನೌಕರರು ಪದಾಧಿಕಾರಿಗಳು- ವೃಂದ ಸಂಘಗಳೊಂದಿಗೆ ಮನವಿ ಪತ್ರ ಸಲ್ಲಿಸುತ್ತಾರೆ. ಎರಡನೇ ಹಂತವಾಗಿ ಜುಲೈ 3ನೇ ವಾರದಲ್ಲಿ ರಾಜ್ಯ ಕಾರ್ಯಕಾರಿ ಹಾಗೂ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳ ಸಭೆಯನ್ನು ಕರೆದು ಹೋರಾಟದ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ.
ಜುಲೈ 28ರೊಳಗೆ ಸಂಘದ ಪ್ರಮುಖ ಮೂರು ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇದ್ದಲ್ಲಿ ಅನಿವಾರ್ಯವಾಗಿ ಮೂರನೇ ಹಂತವಾಗಿ ಜುಲೈ ಕೊನೆಯ ವಾರದಿಂದ ಅನಿರ್ದಿಷ್ಟಾವಧಿ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ತಿಳಿಸಿದ್ದಾರೆ.
ಭಾನುವಾರ ಚಿಕ್ಕಮಗಳೂರಿನಲ್ಲಿ ನಡೆದ ಸಂಘದ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ 3 ಪ್ರಮುಖ ಬೇಡಿಕೆಗಳ ಸಂಬಂಧ ಹಂತ ಹಂತವಾಗಿ ಹೋರಾಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತ್ತು.
ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು
1) ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸುವುದು: ರಾಜ್ಯ 7ನೇ ವೇತನ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸು ವರದಿಯಲ್ಲಿನ ಫಿಟ್‌ಮೆಂಟ್ ಸೌಲಭ್ಯವನ್ನು ಯಥಾವತ್ತಾಗಿ 01-07-2022ರಿಂದ ಅನ್ವಯವಾಗುವಂತೆ ವೇತನ ನಿಗದಿಪಡಿಸಿ, ದಿ: 01-04-2024 ರಿಂದ ಆರ್ಥಿಕ ಸೌಲಭ್ಯವನ್ನು ನೀಡಿ ಸರ್ಕಾರಿ ಆದೇಶ ಹೊರಡಿಸುವುದು.
2) ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು: ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಪಂಜಾಬ್, ರಾಜಸ್ಥಾನ, ಚತ್ತೀಸ್ ಘಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು.
3) ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ "ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ" (ಕೆ.ಎ.ಎಸ್.ಎಸ್)ಯನ್ನು ಜಾರಿಗೆ ತರಲು ಈ ಹಿಂದಿನ ರಾಜ್ಯ ಸರ್ಕಾರವು 2021-22ರ ಆಯವ್ಯದಲ್ಲಿ ಘೋಷಿಸಿತ್ತು. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆದು ದಿನಾಂಕ: 05-09-2022 ರಂದು ಸರ್ಕಾರಿ ಆದೇಶ ಹೊರಡಿಸಿರುತ್ತದೆ.
ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ಯೋಜನೆಯ ಅನುಷ್ಟಾನಾಧಿಕಾರಿಗಳು ತಾಂತ್ರಿಕ ಹಾಗೂ ಇನ್ನಿತರೆ ಕಾರಣಗಳನ್ನು ನೀಡಿ ಈ ಯೋಜನೆಯನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದು, ಚಿಕಿತ್ಸೆ ಪಡೆಯಲು ನೌಕರರಿಗೆ ಆರ್ಥಿಕ ಹೊರೆಯಾಗುತ್ತಿರುವುದರಿಂದ ಶೀಘ್ರವಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವುದು.












Click it and Unblock the Notifications