ರಾಜ್ಯಪಾಲರ ಭಾಷಣ: "ನಮ್ಮ ಸರ್ಕಾರದ ಸಾಧನೆಯ ಶ್ವೇತಪತ್ರ"
ಕರ್ನಾಟಕದಲ್ಲಿ ರಾಜ್ಯಪಾಲರ ಭಾಷಣದ ಕುರಿತು ಚರ್ಚೆ ನಡೆಯುತ್ತಿದೆ. ರಾಜ್ಯಪಾಲರ ಭಾಷಣದ ವಿಚಾರವಾಗಿ ಪರ - ವಿರೋಧ ಚರ್ಚೆಗಳು ನಡೆದಿವೆ. ಈ ರೀತಿ ಇರುವಾಗಲೇ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣವು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ವಸತಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಕೋಟ್ಯಂತರ ಬಡ ಕುಟುಂಬಗಳಿಗೆ ತಲುಪುತ್ತಿರುವ ಬಗ್ಗೆ ಅಂಕಿ -ಅಂಶ ಸಮೇತ ವಿವರಿಸಿ ಮುಂದೆಯೂ ಅನುಷ್ಠಾನ ಖಾತರಿ ನೀಡಲಾಗಿದೆ. ಯೋಜನೆಗಳು ಮುಂದುವರಿಯುವುದಿಲ್ಲ ಎಂದು ಸುಳ್ಳು ಹಬ್ಬಿಸುತ್ತಿರುವ ಪ್ರತಿಪಕ್ಷ ಬಿಜೆಪಿಯವರಿಗೆ ಉತ್ತರ ನೀಡಲಾಗಿದೆ ಎಂದು ಹೇಳಿದ್ದಾರೆ.

ಕೈಗಾರಿಕೆ, ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವುದು ಹಾಗೂ ಕರ್ನಾಟಕದ ಅಭಿವೃದ್ಧಿ ಮಾದರಿಯನ್ನು ವಿಶ್ವವೇ ಕೊಂಡಾಡುತ್ತಿರುವ ಬಗ್ಗೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ನೀಡಲಾಗಿರುವ ಕೊಡುಗೆ ಬಗ್ಗೆಯೂ ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರಿದು ವಸತಿ ಇಲಾಖೆಯಲ್ಲಿ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ 1.18,359 ಮನೆಗಳ ವಿತರಣೆಗೆ ಕ್ರಮ ಕೈಗೊಂಡಿದ್ದು. ಫಲಾನುಭವಿಗಳ ಪಾಲಿನ ವಂತಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಸರ್ಕಾರವೇ ಭರಿಸುವ ತೀರ್ಮಾನ ಕೈಗೊಂಡು ಮೊದಲ ಹಂತದಲ್ಲಿ 36,789 ಮನೆ ಹಂಚಿಕೆ ಮಾಡಿ ಸದ್ಯದಲ್ಲೇ ಎರಡನೇ ಹಂತದಲ್ಲಿ 39, 843 ಮನೆ ವಿತರಣೆಗೆ ಸಿದ್ಧತೆ ಮಾಡಿರುವುದು. 1,66,867 ಬಡ ಕುಟುಂಬಗಳಿಗೆ ಸ್ಲಂ ಬೋರ್ಡ್ ನಿಂದ ಹಕ್ಕುಪತ್ರ ವಿತರಿಸಿರುವುದು ಸರ್ಕಾರದ ಸಾಧನೆ ಆಗಿದೆ. ಒಟ್ಟಾರೆ ರಾಜ್ಯಪಾಲರ ಭಾಷಣವು ನಮ್ಮ ಸರ್ಕಾರದ ಸಾಧನೆಯ ಶ್ವೇತಪತ್ರ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ರಾಜ್ಯಪಾಲರ ಭಾಷಣ ಸರ್ಕಾರದ ದೂರದೃಷ್ಟಿ ಅನಾವರಣ: ಎಂ.ಬಿ ಪಾಟೀಲ
ಬಜೆಟ್ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಮಾಡಿರುವ ಭಾಷಣದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ರಾಜ್ಯದ ಅಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆಯ ಬಗ್ಗೆ ಹೊಂದಿರುವ ದೂರದೃಷ್ಟಿ ವ್ಯಕ್ತವಾಗಿದೆ ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಕ್ವಿನ್ ಸಿಟಿ, ವಿಮಾನ ನಿಲ್ದಾಣಗಳ ನಿರ್ಮಾಣ, ಏರ್-ಸ್ಟ್ರಿಪ್ ಅಭಿವೃದ್ಧಿ, ಸಿಗ್ನೇಚರ್ ಪಾರ್ಕ್ ಮುಂತಾದ ಮಹತ್ವದ ಯೋಜನೆಗಳ ಬಗ್ಗೆ ಹೊಂದಿರುವ ಬದ್ಧತೆ ಯನ್ನು ರಾಜ್ಯಪಾಲರ ಭಾಷಣದಲ್ಲಿ ಕಾಣಬಹುದು ಎಂದಿದ್ದಾರೆ.
ಸರ್ಕಾರವು ಸಮಗ್ರ ಕೈಗಾರಿಕಾ ಪ್ರಗತಿಗೆ ಸಂಕಲ್ಪ ಮಾಡಿದ್ದು, ಮೂಲಸೌಕರ್ಯ ಅಭಿವೃದ್ಧಿಗೂ ಅದ್ಯತೆ ನೀಡುತ್ತಿದೆ. ಇವುಗಳ ಜತೆಗೆ ತೋಟಗಾರಿಕೆ ವಲಯದ ವಿಸ್ತರಣೆ, ಹೊಸ ತಳಿಗಳ ಸಂಶೋಧನೆ ಮೂಲಕ ರೈತ ಸಮುದಾಯದ ಏಳ್ಗೆಯತ್ತಲೂ ಚಿತ್ತ ನೆಟ್ಟಿದೆ. ಇದು ನಮ್ಮ ಸಮತೋಲನದ ದೃಷ್ಟಿಯನ್ನು ಸಂಕೇತಿಸುತ್ತದೆ ಎಂದಿದ್ದಾರೆ.
ಸರ್ಕಾರವು ಐದು ಗ್ಯಾರಂಟಿ ಯೋಜನೆಗಳ ಮೂಲಕ ನಾಡಿನ ಜನರಿಗೆ ಭದ್ರತೆಯ ಭಾವನೆ ಒದಗಿಸಿದೆ. ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿಯ ಅನುಷ್ಠಾನ ಎರಡಕ್ಕೂ ಸಿದ್ದರಾಮಯ್ಯ ಒತ್ತು ನೀಡುತ್ತಿರುವುದು ಗಮನಾರ್ಹವಾಗಿದೆ ಎಂದು ಪಾಟೀಲ ನುಡಿದಿದ್ದಾರೆ.












Click it and Unblock the Notifications