Property: ಇಸಿ, ಆಸ್ತಿ ನೋಂದಣಿ ಸಮಸ್ಯೆಗೆ ಸರ್ಕಾರದಿಂದ ಅಪ್ಡೇಟ್
Property: ರಾಜ್ಯದಲ್ಲಿ ಆಸ್ತಿಗಳ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಹಲವು ಸುಧಾರಣೆಯ ಕ್ರಮಗಳನ್ನು ಜಾರಿ ಮಾಡುತ್ತಿದೆ. ಆದರೆ, ಅದರ ಅನುಷ್ಠಾನದಲ್ಲಿ ಭಾರೀ ಎಡವಟ್ಟುಗಳು ಆಗುತ್ತಿವೆ. ಋುಣಮುಕ್ತ ಪ್ರಮಾಣಪತ್ರ (ಇಸಿ) ಪಡೆಯಲು, ಆಸ್ತಿ ನೋಂದಣಿ ಹಾಗೂ ಇ - ಖಾತಾ ವಿಚಾರದಲ್ಲಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಆಗದೆ ಆಸ್ತಿದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಂಬಂಧ ಕೊನೆಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಂದಾಯ ವಿಭಾಗ ಹಾಗೂ ನೋಂದಣಿ ಮತ್ತು ಮುದ್ರಾಂಕದ ಬಗ್ಗೆ ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಆಸ್ತಿದಾರರು ಹಾಗೂ ಆಸ್ತಿ ಮಾರಾಟ ಮತ್ತು ಖರೀದಿ ಮಾಡಬೇಕು ಎನ್ನುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಋುಣಮುಕ್ತ ಪ್ರಮಾಣಪತ್ರ (ಇಸಿ) ಪಡೆಯುವುದು ಹಾಗೂ ಆಸ್ತಿ ನೋಂದಣಿ ಮಾಡುವುದು.
ಸರ್ಕಾರ ಅಭಿವೃದ್ಧಿಪಡಿಸಿರುವ ವೆಬ್‌ಸೈಟ್‌ಗಳಲ್ಲಿನ ತಾಂತ್ರಿಕ ಸಮಸ್ಯೆ ಹಾಗೂ ಸರ್ವರ್‌ಡೌನ್ ಸಮಸ್ಯೆಗಳು ಸಾರ್ವಜನಿಕರನ್ನು ಇನ್ನಿಲ್ಲದಂತೆ ಹೈರಾಣಾಗಿಸಿದೆ. ಜನ ಇಸಿ ಹಾಗೂ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದನ್ನು ಪರಿಹರಿಸಲು ಕಂದಾಯ ಇಲಾಖೆ ಮುಂದಾಗಿರುವುದಾಗಿ ಹಾಗೂ ಇದಕ್ಕೆ ಶೀಘ್ರ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿಯೂ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.

ಐಟಿ ರಾಜಧಾನಿಯಲ್ಲೇ ಸಮಸ್ಯೆ: ಬೆಂಗಳೂರು ಐಟಿ ರಾಜಧಾನಿ ಹಾಗೂ ಸಿಲಿಕಾನ್ ಸಿಟಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಬೆಂಗಳೂರಿನಲ್ಲಿಯೇ ಈ ರೀತಿಯ ಸಮಸ್ಯೆಗಳು ಆದರೆ ಹೇಗೆ ಎಂದು ಸಾರ್ವಜನಿಕರು ಕೃಷ್ಣ ಬೈರೇಗೌಡ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ತಾಂತ್ರಿಕವಾಗಿ ಸಾಕಷ್ಟು ಮುಂದುವರಿದಿರುವ ಬೆಂಗಳೂರಿನಲ್ಲೇ ಈ ರೀತಿಯ ಸಮಸ್ಯೆ ಎದುರಾದರೆ ಹೇಗೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಇ - ಖಾತಾ ಕಡ್ಡಾಯ ಮಾಡಿರುವುದರಿಂದಲೂ ಸಮಸ್ಯೆ ಆಗಿದೆ ಎಂದು ಕೆಲವರು ಹೇಳಿದ್ದಾರೆ.
ಸಚಿವ ಕೃಷ್ಣ ಬೈರೇಗೌಡ ಹೇಳಿದ್ದೇನು ?
ಕರ್ನಾಟಕದಲ್ಲಿ ಋುಣಮುಕ್ತ ಪ್ರಮಾಣಪತ್ರ (ಇಸಿ) ಪಡೆಯಲು ಹಾಗೂ ಆಸ್ತಿ ನೋಂದಣಿ ಪ್ರಕ್ರಿಯೆಗಳಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳಿಗೆ ನಾವು ವಿಷಾದಿಸುತ್ತೇವೆ. ನಮ್ಮ ಇ - ಆಡಳಿತ ವಿಭಾಗವು ಸಮಸ್ಯೆಗಳನ್ನು ಪರಿಹರಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಐಟಿ ವ್ಯವಸ್ಥೆಯ ತಾಂತ್ರಿಕ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಸವಾಲಿನಲ್ಲಿ ಜಯಿಸಲು ಹೆಚ್ಚು ಸಮಯ ಕೆಲಸ ಮಾಡುತ್ತಿದ್ದೇವೆ ಎಂದೂ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರವು ಆಸ್ತಿ ನೋಂದಣಿ ಹಾಗೂ ಇ - ಖಾತಾಗೆ ಸಂಬಂಧಿಸಿದಂತೆ ಹಲವು ಸುಧಾರಣಾ ಕ್ರಮಗಳನ್ನು ಜಾರಿ ಮಾಡುತ್ತಿದೆ. ಆದರೆ ಅದರ ಅನುಷ್ಠಾನದಲ್ಲಿ ಹಲವು ಗೊಂದಲಗಳು ಮುಂದುವರಿದಿವೆ. ಮೊದಲನೆಯದಾಗಿ ಬೆಂಗಳೂರಿನಲ್ಲಿ ಇ - ಖಾತಾ ಜಾರಿ ಮಾಡಲಾಯಿತು.
ಬೆಂಗಳೂರಿನ ಇ - ಖಾತಾ ಮಾದರಿಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುತ್ತಿದೆ. ಆದರೆ, ಈ ರೀತಿ ವಿಸ್ತರಿಸುವಾಗ ಪ್ರಾಯೋಗಿಕವಾಗಿ ಇ ಖಾತಾ ಜಾರಿ ಮಾಡಿದ ಬೆಂಗಳೂರಿನಲ್ಲಿಯೇ ಇ - ಖಾತಾ ನೀಡುವುದು ಇನ್ನೂ ಮುಗಿದಿಲ್ಲ.
ಕಾವೇರಿ ತಂತ್ರಾಂಶದಲ್ಲಿ ಸಮಸ್ಯೆ: ಕಾವೇರಿ ತಂತ್ರಾಂಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು. ಆಸ್ತಿದಾರರು ಆಸ್ತಿ ನೋಂದಣಿ ಮಾಡುವುದಕ್ಕೆ ಪರದಾಡುವ ಪರಿಸ್ಥಿತಿ ಇದೆ. ಈ ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ ಲಕ್ಷಾಂತರ ಜನ ಇದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ.












Click it and Unblock the Notifications