ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗ್ಬೇಕು ಎಂಬ ಕೂಗು: ಸಿದ್ದರಾಮಯ್ಯ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 15: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಕೂಗು ಕೇಳಿ ಬಂದಿದೆ. ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಿಧಾನಮಂಡಲದಲ್ಲಿ ಶುಕ್ರವಾರ ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,ಪ್ರತ್ಯೇಕ ರಾಜ್ಯದ ಬೇಡಿಕೆ ಸಲ್ಲದು ಹಾಗೂ ಅದು ತಾರತಮ್ಯ ನಿವಾರಣೆಗೆ ಪರಿಹಾರವೂ ಅಲ್ಲ. ಪ್ರತ್ಯೇಕ ಕರ್ನಾಟಕಕ್ಕೆ ಒತ್ತಾಯ ಮಾಡುವುದು ಏಕೀಕರಣಕ್ಕೆ ಹೋರಾಡಿ, ಪ್ರಾಣ ತ್ಯಾಗ ಮಾಡಿದವರಿಗೆ ನಾವು ಮಾಡುವ ಅವಮಾನವಾಗಿದೆ. ಏಕೀಕರಣಕ್ಕಾಗಿ ಬಹಳ ಜನ ಹೋರಾಡಿದ್ದಾರೆ, ಭಾಷಾವಾರು ಪ್ರಾಂತ್ರ್ಯ ರಚನೆಯಾಗಲೂವಾಗಲು ಹೋರಾಟ ಮಾಡಿದವರಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹೈದರಾಬಾದ್ ಕರ್ನಾಟಕಕ್ಕೆ 371 ಗೆ ತಿದ್ದುಪಡಿ ಆಗಿ 371 ಜೆ ಪರಿಚ್ಛೇದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ವೈಜನಾಥ್ ಪಾಟೀಲ್ ಮುಂತಾದವರು ಹೋರಾಡಿದರು. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2014 ಮತ್ತು 2017 ರಲ್ಲಿ ಉತ್ತರ ಕರ್ನಾಟಕದದ ಬಗ್ಗೆ ಚರ್ಚೆಯಾಗಿತ್ತು. ಒಮ್ಮೆ ಈ ಬಗ್ಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಉತ್ತರ ನೀಡಿದ್ದೆ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.
ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ಖರ್ಚಾಗಿ ಅಭಿವೃದ್ಧಿಯಾಗಬೇಕು. ಕಿತ್ತೂರು ಕರ್ನಾಟದ 5 ತಾಲ್ಲೂಕುಗಳು ಸೇರಿದಂತೆ ಅತಿ ಹಿಂದುಳಿದ ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೂ ಅನುದಾನ ಕೊಡಲಾಗುವುದುಕಲ್ಯಾಣ ಕರ್ನಾಟಕಕ್ಕೆ 2013-14 ರಿಂದ ಈವರೆಗೆ 14877.36 ಕೋಟಿ ರೂ.ಗಳು ಮೀಸಲಿಡಲಾಗಿದೆ. ಬಿಡುಗಡೆಯಾಗಿದ್ದು 10280 ಕೋಟಿ ರೂ. ಹಾಗೂ 8330 ಕೋಟಿ ರೂ. ವೆಚ್ಚವಾಗಿದೆ. ಮುಂದಿನ ವರ್ಷದಿಂದ 5000 ಕೋಟಿ ರೂ.ಗಳನ್ನು ಕಲ್ಯಾಣ ಕರ್ನಾಟಕಕ್ಕೆ ನೀಡಲಾಗುವುದು. ಮುಂಬೈ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳಿಗೂ ಅನುದಾನ ನೀಡಲಾಗುವುದು ಎಂದರು.
ನೀರಾವರಿ ಯೋಜನೆಗಳಿಗೆ ಅನುದಾನ: ಸರ್ವಪಕ್ಷ ನಿಯೋಗ
ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಮತ್ತು ತೀರುವಳಿಗಳನ್ನು ಪಡೆಯಲು ಸರ್ವ ಪಕ್ಷ ನಿಯೋಗ ಕೊಂಡೊಯ್ಯಲು ಸರ್ಕಾರ ಸಿದ್ಧವಿದೆ. ಕೇಂದ್ರ ಮೇಲೆ ಒತ್ತಡ ಹಾಕಿ ತೀರುವಳಿಗಳನ್ನು ಕೊಡಿಸಿದರೆ ತಕ್ಷಣವೇ ಕಾಮಗಾರಿಗಳ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಮಂಡಲದಲ್ಲಿ ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ನೀರಾವರಿ ಕೃಷ್ಣಾ ಭಾಗ್ಯ ಜಲ ನಿಗಮ 3 ನೇ ಹಂತದಲ್ಲಿ 130 ಟಿಎಂಸಿ ನೀರು ಬಳಸಬೇಕು ಎಂಬ ಆದೇಶವಿದ್ದರೂ, ಅಫಿಡವಿಟ್ ಹಾಕಿಲ್ಲ. 2 ನೇ ಟ್ರಿಬ್ಯುನಲ್ ಬ್ರಿಜೇಶ್ ಕುಮಾರ್ ವರದಿ ಕೊಟ್ಟು 13 ವರ್ಷಗಳಾಯಿತು. 13 ವರ್ಷಗಳಿಂದ ಗೆಜೆಟ್ ಅಧಿಸೂಚನೆ ಆಗಿಲ್ಲ. ಇದು ಆಗದೇ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್ ಗೆ ಏರಿಸಲಾಗುವುದಿಲ್ಲ.
ಈ ಬಗ್ಗೆ ಒತ್ತಾಯಿಸಲು ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ. ಆದರೆ ಪ್ರಧಾನಿಗಳು ಭೇಟಿಗೆ ಅವಕಾಶವನ್ನೇ ನೀಡುವುದಿಲ್ಲ. ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಅರಣ್ಯ ಮತ್ತು ಪರಿಸರದ ತೀರುವಳಿಯಾಗಬೇಕು. ಅವರು ಕೊಟ್ಟ ತಕ್ಷಣ ನಾವು ಕೆಲಸ ಪ್ರಾರಂಭ ಮಾಡುತ್ತೇವೆ. ಮಹದಾಯಿ, ಕೃಷ್ಣಾ ಮೇಲ್ದಂಡೆಗೂ ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ ಎಂದರು.
ಕೃಷ್ನಾ ಮೇಲ್ದಂಡೆಗೆ 21 ಕೋಟಿ ರೂ.ಗಳ ಪರಿಷ್ಕøತ ಅಂದಾಜು ಪಟ್ಟಿ. 5300 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಣೆಯಾಗಿದೆ. ಇವತ್ತಿನವರೆಗೆ ಒಂದು ರೂ.ಬಿಡುಗಡೆ ಯಾಗಿಲ್ಲ. ಆದರೆ ಮತ್ತೊಂದೆಡೆ ಕೇಂದ್ರ ಹಣಕಾಸು ಮಂತ್ರಿಗಳು ಕರ್ನಾಟಕಕ್ಕೆ ಯಾವುದೇ ಅನುದಾನ ಬಾಕಿ ಇಲ್ಲ ಎನ್ನುತ್ತಾರೆ. ನಾವು ಅಧಿಸೂಚನೆ ಆಗುವವರೆಗೆ ಪುನರ್ವಸತಿ ಮತ್ತು ಪುನಶ್ಚೇತನ ಕಾರ್ಯವನ್ನು ಕೈಗೊಳ್ಳುತ್ತೇವೆ. ನಾವು ಅತಿ, ಅತ್ಯಂತ, ಹಿಂದುಳಿದ ತಾಲ್ಲೂಕುಗಳನ್ನು ಅಭಿವೃದ್ಧಿ ಮಾಡಲು ಬದ್ಧರಿದ್ದೇವೆ ಎಂದರು.
ಮೇಕೆ ದಾಟು 2018 ರಲ್ಲಿ ಸುಪ್ರೀಂ ಕೋರ್ಟ್ ನಿರ್ಧಾರ ಸಾಮಾನ್ಯ ವರ್ಷಗಳಲ್ಲಿ 177. 25 ಟಿಎಂಸಿ ತಮಿಳುನಾಡಿಗೆ ಕೊಡಬೇಕು ಎಂದು ತೀರ್ಪು ನೀಡಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಎರಡೂ ರಾಜ್ಯಗಳೂ ನೀರು ಹಂಚಿಕೊಳ್ಳಬೇಕು ಎಂದು ತಿಳಿಸಿದೆ. ಮೇಕೆದಾಟು ಯೋಜನೆಯು ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಮಾಡುವ ಸಲುವಾಗಿ ರೂಪಿಸಿರುವ ಯೋಜನೆ. ಅಣೆಕಟ್ಟು, ಬ್ಯಾಲೆಲ್ಸಿಂಗ್ ರಿಸರ್ವಾಯರ್ ಕರ್ನಾಟಕದ ವ್ಯಾಪ್ತಿಯಲ್ಲಿಯೇ ನಿರ್ಮಿಸುವುದು. ಇದರಿಂದ ತಮಿಳುನಾಡಿಗೆ ಏನೂ ಹಾನಿಯಿಲ್ಲ. ಬದಲಿಗೆ ಅನುಕೂಲವಾಗುತ್ತದೆ. ತಮಿಳುನಾಡು, ಕೇರಳ, ಆಂಧ್ರದ ಜೊತೆ ಮಾತುಕತೆ ವಿಫಲವಾಗಿ ನ್ಯಾಯಮಂಡಳಿಯು 193 ಟಿಎಂಸಿ ನೀರು ಕೊಡಬೇಕು ಎಂದು ತೀರ್ಪು ನೀಡಿತ್ತು. ನಂತರ 177.25 ಟಿಎಂಸಿ ಯನ್ನು ತಮಿಳುನಾಡಿಗೆ ಬಿಡಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ವಿವರಿಸಿದರು.












Click it and Unblock the Notifications