Government Employee; ಫೆಬ್ರವರಿಯಲ್ಲಿ ಸರ್ಕಾರಿ ನೌಕರರ ಮುಷ್ಕರ
ಬೆಂಗಳೂರು, ಜನವರಿ 01; ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಸರ್ಕಾರಿ ನೌಕರರು ಸರ್ಕಾರದ ಗಮನವನ್ನು ಸೆಳೆಯಲು ಅಖಿಲ ಭಾರತ ಮಟ್ಟದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಷ್ಟ್ರೀಯ ಕೌನ್ಸಿಲ್ ಸಭೆಯು ಡಿಸೆಂಬರ್ 28 ರಿಂದ 30ರ ತನಕ ಯಶಸ್ವಿಯಾಗಿ ನಡೆಯಿತು. ಈ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಈ ಕೌನ್ಸಿಲ್ ಸಭೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (AKSGEF) (ರಿ.) ದ ಪರವಾಗಿ ಹೆಚ್. ಎಸ್. ಜೈ ಕುಮಾರ್ ರಾಜ್ಯಾಧ್ಯಕ್ಷರು, ಎನ್. ಶೋಭಾಲೋಕನಾಗಣ್ಣ ಕಾರ್ಯಾಧ್ಯಕ್ಷರು ಮುಂತಾದವರು ಪಾಲ್ಗೊಂಡಿದ್ದರು.
ಈ ಕೌನ್ಸಿಲ್ ಸಭೆಯ ಬಳಿಕ Akhila Karnataka State Government Employees Federation ಫೇಸ್‌ಬುಕ್ ಪುಟದಲ್ಲಿ ದೇಶಾದ್ಯಂತ ಸರ್ಕಾರಿ ನೌಕರರು ಮುಷ್ಕರ ನಡೆಸುವ ಕುರಿತು ಪೋಸ್ಟ್ ಹಾಕಲಾಗಿದೆ.
ಫೇಸ್‌ಬುಕ್ ಪೋಸ್ಟ್; ಫೇಸ್‌ಬುಕ್ ಪೋಸ್ಟ್‌ನಲ್ಲಿ ಕೋಲ್ಕತ್ತಾದಲ್ಲಿ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಷ್ಟ್ರೀಯ ಕೌನ್ಸಿಲ್ ಸಭೆಯು ಡಿಸೆಂಬರ್ 28-30, 2023ರವರೆಗೆ ಯಶಸ್ವಿಯಾಗಿ ನಡೆಯಿತು.
ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಾಧ್ಯಕ್ಷರಾದ ಹೆಚ್. ಎಸ್. ಜೈಕುಮಾರ್, ಕಾರ್ಯಾಧ್ಯಕ್ಷರಾದ ಶೋಭಾ ಲೋಕನಾಗಣ್ಣ, ಎನ್. ಇ. ಸಿ ಸದಸ್ಯರಾದ ರಂಗನಾಥ್ ಹವಾಲ್ದಾರ್ ಹಾಗೂ ಮಂಡ್ಯ ಒಕ್ಕೂಟ ಘಟಕದ ಪದಾಧಿಕಾರಿಗಳಾದ ರೇಣುಕಾರವರು ಮಾತನಾಡಿದರು. ಅಲ್ಲದೇ ಖಜಾಂಚಿಯವರಾದ ವೇದಾವತಿ ಸೇರಿದಂತೆ ಒಟ್ಟು 11 ಪ್ರತಿನಿಧಿಗಳು ಭಾಗವಹಿಸಿದ್ದರು.
ದೇಶಾದ್ಯಂತ ಒಟ್ಟು 580 ಪ್ರತಿನಿಧಿಗಳು, 25 ರಾಜ್ಯ ಸಂಘಟನೆಗಳನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ನೌಕರ ವಿರೋಧಿ ಮತ್ತು ಜನ ವಿರೋಧಿ ನೀತಿಗಳ ವಿರುದ್ದ ಕೈಗೊಳ್ಳಬೇಕಾದ ಹೋರಾಟಗಳ ಬಗ್ಗೆ ಚರ್ಚಿಸಲಾಯಿತು.
ಎನ್.ಪಿ.ಎಸ್/ ಪಿ.ಎಫ್.ಆರ್.ಡಿ.ಎ ಕಾಯಿದೆ ರದ್ದತಿ, 7ನೇ ವೇತನ ಆಯೋಗ ಜಾರಿ, ಖಾಲಿ ಹುದ್ದೆ ಭರ್ತಿ, ಗುತ್ತಿಗೆ/ ಹೊರ ಗುತ್ತಿಗೆ/ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಖಾಯಮ್ಮಾತಿ ಇನ್ನಿತರ ಬೇಡಿಕೆ ಗಳಿಗಾಗಿ ಒತ್ತಾಯಿಸಿ 2024 ಫೆಬ್ರುವರಿ 2ನೇ ವಾರದಲ್ಲಿ ಅಖಿಲ ಭಾರತ ಮುಷ್ಕರ ನಡೆಸಲು ತೀರ್ಮಾನಿಸಲಾಯಿತು ಎಂದು ಮಾಹಿತಿ ನೀಡಲಾಗಿದೆ.
ಆಯೋಗದ ಅವಧಿ ವಿಸ್ತರಣೆ, ಒಕ್ಕೂಟ ಖಂಡನೆ; ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಿದ್ದನ್ನು ನವೆಂಬರ್ ತಿಂಗಳಿನಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಖಂಡಿಸಿತ್ತು. ಸರ್ಕಾರ ನವೆಂಬರ್‌ನಲ್ಲಿ ಆಯೋಗ ವರದಿಯನ್ನು ಸಲ್ಲಿಸಲು ಅನುಕೂಲವಾಗುವಂತೆ, ಆಯೋಗದ ಕಾಲಾವಧಿಯನ್ನು ದಿನಾಂಕ 15/3/2024ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಸರ್ಕಾರವು 7ನೇ ವೇತನ ಆಯೋಗದ ಅವಧಿಯನ್ನು 2ನೇ ಬಾರಿಗೆ ವಿಸ್ತರಿಸಿರುವುದನ್ನು ಖಂಡಿಸುತ್ತದೆ ಎಂದು ಹೇಳಿತ್ತು. ಸದರಿ ಆದೇಶವನ್ನು ಹಿಂಪಡೆದು ನೌಕರರಿಗೆ ನ್ಯಾಯಬದ್ದವಾಗಿ ದೊರೆಯಬೇಕಾದ ಶೇ. 40ರಷ್ಟು ವೇತನ ಪರಿಷ್ಕರಣೆಯನ್ನು ಕೂಡಲೇ ನೀಡಿ ಆದೇಶ ಹೊರಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತದೆ. ಇಲ್ಲದಿದ್ದಲ್ಲಿ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಿ ನೌಕರರು ಬೃಹತ್ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆಂದು ಒಕ್ಕೂಟವು ಹೇಳಬಯಸುತ್ತದೆ ಎಂದು ಎಚ್ಚರಿಸಿತ್ತು.
ಸರ್ಕಾರವು 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ಎರಡನೇ ಬಾರಿಗೆ 6 ತಿಂಗಳ ಕಾಲ ದಿನಾಂಕ 15/03/2024ರವರೆಗೆ ವಿಸ್ತರಿಸಿರುವುದು ನೌಕರರಲ್ಲಿ ತೀವ್ರ ನಿರಾಶೆ ಮತ್ತು ಆಕ್ರೋಶ ಮೂಡಿಸಿದೆ. ವಾಸ್ತವವಾಗಿ ರಾಜ್ಯ ಸರ್ಕಾರಿ ನೌಕರರಿಗೆ 2022ರ ಜುಲೈನಿಂದಲೇ 7ನೇ ವೇತನ ಪರಿಷ್ಕರಿಸಿ ಜಾರಿಯಾಗಬೇಕಿದ್ದಿತು. ಆದರೆ, ಹಿಂದಿನ ಬಿಜೆಪಿ ಸರ್ಕಾರವು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನೌಕರರ ಮುಷ್ಕರದ ಒತ್ತಡದ ಹಿನ್ನೆಲೆಯಲ್ಲಿ ಶೇ. 17ರಷ್ಟು ಮಧ್ಯಂತರ ಪರಿಹಾರ ಘೋಷಿಸಿ ಜಾರಿಕೊಂಡಿತು. ನಂತರ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರವು 7ನೇ ವೇತನ ಆಯೋಗದ ಅವಧಿಯನ್ನು 6 ತಿಂಗಳ ಕಾಲ ವಿಸ್ತರಿಸಿತ್ತು ಎಂದು ಪ್ರಕಟಣೆಯಲ್ಲಿ ಹೇಳಿತ್ತು.
ಒಕ್ಕೂಟ ಸರ್ಕಾರಗಳ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳನ್ನು ಜನರಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸರ್ಕಾರಿ ನೌಕರರನ್ನು ಕಡೆಗಣಿಸುವುದು ಅಭಿವೃದ್ಧಿಯನ್ನೇ ಕಡೆಗಣಿಸಿದಂತೆ. ದೇಶದಲ್ಲಿಯೇ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿರುವ ಕೇರಳ ರಾಜ್ಯವು ತನ್ನ ನೌಕರರಿಗೆ ದೇಶಕ್ಕೇ ಮಾದರಿಯಾದ ವೇತನ ಸೌಲಭ್ಯಗಳನ್ನು ನೀಡುತ್ತಿದೆ ಎನ್ನುವುದನ್ನು ಗಮನಿಸಬೇಕು. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿರುವುದು ಸರ್ಕಾರಿ ವಲಯ ಎಂಬುದನ್ನು ಮರೆಯಬಾರದು ಎಂದು ತಿಳಿಸಿತ್ತು.












Click it and Unblock the Notifications