Government Employees; ಹಳೆ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಕೆ, ಷರತ್ತುಗಳು
ಬೆಂಗಳೂರು, ಮೇ. 03 : ಕರ್ನಾಟಕದ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು 30/6/2024 ಕೊನೆಯ ದಿನವಾಗಿದೆ. ಆದ್ದರಿಂದ ಅರ್ಜಿ ಸಲ್ಲಿಕೆಗೆ ಇರುವ ಷರತ್ತುಗಳ ಕುರಿತು ವಿಶೇಷ ರಾಜ್ಯ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ. ಒಂದು ಬಾರಿ ಮಾತ್ರ ಹೊಸ ಪಿಂಚಣಿ ಯೋಜನೆಯಿಂದ ಹಳೆ ಪಿಂಚಣಿ ಯೋಜನೆಗೆ ವರ್ಗಾವಣೆಗೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.
ದಿನಾಂಕ 01/04/2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು 24/01/2024ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸಲು ಸರ್ಕಾರಿ ನೌಕರರಿಂದ ಅಭಿಮತ ಪಡೆದು ಕ್ರಮ ಕೈಗೊಳ್ಳುವ ಸಂಬಂಧ ಈ ಷರತ್ತುಗಳನ್ನು ನೀಡಿ ಸೂಚನೆ ನೀಡಲಾಗಿದೆ.

ಹಳೆ ಪಿಂಚಣಿ ಯೋಜನೆಗೆ ಒಳಪಡಲು ಷರತ್ತುಗಳು ಹೀಗಿವೆ
1. ದಿನಾಂಕ 01-04-2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಸರ್ಕಾರಿ ನೌಕರರು ಹಿಂದಿನ ಪಿಂಚಣಿ ಯೋಜನೆಗೆ ಒಳಪಡಿಸಲು ಇಚ್ಛಿಸಿದಲ್ಲಿ ತಮ್ಮ ಅಭಿಮತವನ್ನು ನಿಗದಿತ ನಮೂನೆಯಲ್ಲಿ ದಿನಾಂಕ 30-06-2024 ರೊಳಗೆ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಅರ್ಜಿ ಸಲ್ಲಿಸತಕ್ಕದ್ದು.
2. ಈ ಆಯ್ಕೆಯನ್ನು ಒಂದು ಬಾರಿಗೆ ಮಾತ್ರ ಚಲಾಯಿಸಲು ಅವಕಾಶವಿರುತ್ತದೆ. ಒಂದು ಬಾರಿ ಮಾಡಿಕೊಂಡ ಆಯ್ಕೆಯನ್ನು ಬದಲಾಯಿಸಲು ಮತ್ತೆ ಅವಕಾಶವಿಲ್ಲ.

3. ಒಂದು ಆಯ್ಕೆಯನ್ನು ಮಾಡಿದ ಅರ್ಹ ಸರ್ಕಾರಿ ನೌಕರರು ನಿಗದಿತ ದಿನಾಂಕದೊಳಗೆ ತಮ್ಮ ಆಯ್ಕೆಯನ್ನು ಚಲಾಯಿಸದೇ ಇದ್ದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಹೊಸ ಪಿಂಚಣಿ ಯೋಜನೆ) ಮುಂದುವರೆಯುತ್ತಾರೆ.
4. ನೌಕರರ ಆಯ್ಕೆಗೆ ಅನುಸಾರವಾಗಿ ಅವರು ಹಿಂದಿನ ಡಿಫೈನ್ ಪಿಂಚಣಿ ಯೋಜನೆ ಒಳಪಡಲು ನಿಗದಿತ ಅರ್ಹತೆಯನ್ನು ಹೊಂದಿರುವುದನ್ನು ಸಕ್ಷಮ ನೇಮಕಾತಿ ಪ್ರಾಧಿಕಾರವು ಖಚಿತಪಡಿಸಿಕೊಳ್ಳಬೇಕು. ಬಳಿಕ ದಿನಾಂಕ 31.07.2024 ರ ಒಳಗಾಗಿ ಅಂತಹ ನೌಕರರನ್ನು ಹಿಂದಿನ ಡಿಫೈನ್ ಪಿಂಚಣಿ ಯೋಜನೆಗೊಳಪಡಿಸಲು ಶಿಫಾರಸ್ಸಿನೊಂದಿಗೆ ಇಲಾಖಾ ಮುಖ್ಯಸ್ಥರಿಗೆ ಪ್ರಸ್ಥಾವನೆಯನ್ನು ಸಲ್ಲಿಸಬೇಕು.
5. ಇಲಾಖಾ ಮುಖ್ಯಸ್ಥರು ತಮ್ಮ ಅಧೀನದ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಹಿಂದಿನ ಡಿಫೈನ್ ಪಿಂಚಣಿ ಯೋಜನೆಗೆ ಒಳಪಡಲು ಅರ್ಹ ನೌಕರರ ಪಟ್ಟಿಯನ್ನು ದಿನಾಂಕ 31-08-2024ರೊಳಗೆ ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಸಲ್ಲಿಸಬೇಕು.
6. ದಿನಾಂಕ 01-04-2006 ರ ಪೂರ್ವದಲ್ಲಿನ ರಾಜ್ಯ ಸಿವಿಲ್ ಸೇವೆಯಲ್ಲಿನ ಖಾಲಿ ಹುದ್ದೆಗಳಿಗೆ ಹೊರಡಿಸಲಾದ ನೇಮಕಾತಿ ಅಧಿಸೂಚನೆ ಅನ್ವಯ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ತದನಂತರ ಸಮುಚಿತ ಮಾರ್ಗದಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ನೇಮಕಾತಿ ಹೊಂದಿದ ಅರ್ಹ ಸರ್ಕಾರಿ ನೌಕರರು ಹಿಂದಿನ ಡಿಫೈನ್ದನ್ ಪಿಂಚಣಿ ಯೋಜನೆ ಸೌಲಭ ಪಡೆದುಕೊಳ್ಳಲು ಇಚ್ಚಿಸಿದಲ್ಲಿ ಮನವಿಯನ್ನು ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ದಿನಾಂಕ:30-06- 2024 ರೊಳಗಾಗಿ ಸಲ್ಲಿಸತಕ್ಕದ್ದು.
7. ನೇಮಕಾತಿ ಪ್ರಾಧಿಕಾರವು ಅಂತಹ ಸರ್ಕಾರಿ ನೌಕರನು ಸಮುಚಿತ ಮಾರ್ಗದಲ್ಲಿ ಅರ್ಜಿ ಸಲ್ಲಿಸಿ ಅನ್ಯ ಇಲಾಖೆಗೆ ಆಯ್ಕೆಯಾದ ಹುದ್ದೆಗೆ ವರದಿ ಮಾಡಿಕೊಳ್ಳುವ ಸಲುವಾಗಿ ಬಿಡುಗಡೆ ಹೊಂದಿರುವುದನ್ನು ಹಾಗೂ ಹಿಂದಿನ ಡಿಫೈನ್ ಪಿಂಚಣಿ ಯೋಜನೆ ಅರ್ಹತೆ ಹೊಂದಿರುವುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮಕೈಗೊಳ್ಳಬೇಕು. ಆದುದರಿಂದ ಇಚ್ಛೆಯುಳ್ಳ ಅರ್ಹ ಅಧಿಕಾರಿಗಳು ಅಂತಿಮ ದಿನಾಂಕದೊಳಗೆ ಅನುಬಂಧದ ನಮೂನೆಯಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಗಿದೆ.












Click it and Unblock the Notifications