Govt Employee; ಕಂಪ್ಯೂಟರ್ ಪರೀಕ್ಷೆ ಪ್ರೋತ್ಸಾಹ ಧನಕ್ಕೆ ಷರತ್ತುಗಳು
ಬೆಂಗಳೂರು, ಜನವರಿ 29: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳುವುದು, ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
ಕಾಲೇಜು ಶಿಕ್ಷಣ ಇಲಾಖೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತಿರ್ಣರಾದವರಿಗೆ ಪ್ರೋತ್ಸಾಹ ಧನ ನೀಡಲು ಅನುದಾನ ಬಿಡುಗಡೆ ಮಾಡುವ ಬಗ್ಗೆ ಆದೇಶ ಹೊರಡಿಸಿದೆ. ಅಲ್ಲದೇ ಪ್ರೋತ್ಸಾಹ ಧನ ನೀಡಲು ಇರುವ ಷರತ್ತುಗಳನ್ನು ಸಹ ಉಲ್ಲೇಖ ಮಾಡಿದೆ.

ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರದ ಆದೇಶದಲ್ಲಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ಜಾರಿಗೆ ಬಂದ ದಿನಾಂಕ 22/03/2012ರ ಪೂರ್ವದಲ್ಲಿ ನೇಮಕಾತಿ ಹೊಂದಿರುವ ಹಾಗೂ ದಿನಾಂಕ 17/04/2021ರೊಳಗೆ ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರು ಹಾಜರುಪಡಿಸುವ ಡಿಜಿಟಲ್ ಸಹಿ ಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರವನ್ನು ಪರಿಶೀಲಿಸಿ ಉತ್ತೀರ್ಣರಾದ ದಿನಾಂಕವನ್ನು ಖಚಿತಪಡಿಸಿಕೊಂಡು ಪ್ರೋತ್ಸಾಹ ಧನ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ಸರ್ಕಾರದ ಅನುದಾನ ಬಿಡುಗಡೆ ಆದೇಶದಲ್ಲಿ ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತಿರ್ಣರಾದವರಿಗೆ ಪ್ರೋತ್ಸಾಹ ಧನವನ್ನು ಪಾವತಿಸಲು 2023-24ನೇ ಸಾಲಿನ ಆಯವ್ಯದಲ್ಲಿ ಮೊದಲನೇ ಕಂತಿನಲ್ಲಿ ಅನುದಾನ ಬಿಡುಗಡೆ ಮಾಡಲು ಆದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ದಿನಾಂಕ 22/03/2012ರಂದು ಸೇವೆಯಲ್ಲಿದ್ದು, ದಿನಾಂಕ 17/04/2021ರೊಳಗೆ ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರುಗಳಗೆ ಪ್ರೋತ್ಸಾಹ ಧನವನ್ನು ಪಾವತಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಸೂಚಿಸಲಾಗಿದೆ. ಈ ಷರತ್ತುಗಳನ್ವಯದಂತೆ ಅನುದಾನ ಬಿಡುಗಡೆ ಮಾಡಿ ಬಳಕೆ ಮಾಡಲು ಅನುಮತಿ ನೀಡಿದೆ.
ಷರತ್ತುಗಳು
* ಸರ್ಕಾರದ/ ಇಲಾಖೆಯ ಆದೇಶಗಳು ನಿಯಮಾವಳಿಗಳನ್ವಯ ವೇತನ ಪಡೆಯಲು ಅರ್ಹರಿದ್ದಲ್ಲಿ ಮಾತ್ರ ಪ್ರೋತ್ಸಾಹ ಧನವನ್ನು ಪಾವತಿಗೆ ಕ್ರಮವಹಿಸುವುದು.
* ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯ ಡಿಡಿಓಗಳು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರು ಹಾಜರುಪಡಿಸುವ ಡಿಜಿಟಲ್ ಸಹಿ ಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರವನ್ನು ಪರಿಶೀಲಿಸಿ ಉತ್ತೀರ್ಣರಾದ ದಿನಾಂಕವನ್ನು ಮತ್ತೊಮ್ಮೆ ಖಚಿತಪಡಿಸಿಕೊಂಡು ಅರ್ಹ ಸೇವಾನಿರತ ಸರ್ಕಾರಿ ನೌಕರರುಗಳಿಗೆ ಪ್ರೋತ್ಸಾಹ ಧನವನ್ನು ಪಾವತಿಸಲು ಕ್ರಮವಹಿಸುವುದು.
* ಕೇಂದ್ರ ಕಛೇರಿಗೆ ಮಾಹಿತಿ ಸಲ್ಲಿಸದ ಕಾಲೇಜುಗಳಿಗೆ ಹಾಗೂ ಅಪೂರ್ಣ ಮಾಹಿತಿ ಸಲ್ಲಿಸಿರುವ ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಸಂಬಂಧ ಪಟ್ಟ ಕಾಲೇಜುಗಳ ಪ್ರಾಂಶುಪಾಲರುಗಳು ತುರ್ತಾಗಿ, ಖುದ್ದಾಗಿ/ SPEED POST ಮುಖಾಂತರ ಮಾಹಿತಿ ಸಲ್ಲಿಸುವುದು. ಅರ್ಹ ನೌಕರರುಗಳಗೆ ಪಾವತಿಯಾಗದೇ ದೂರು ಸ್ವೀಕೃತವಾದಲ್ಲಿ ಸಂಬಂಧಪಟ್ಟ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.
* ಬಿಡುಗಡೆಯಾದ ಅನುದಾನದಲ್ಲಿ ವೇತನವನ್ನು ತಡಮಾಡದೇ, ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಲು ಸರ್ಕಾರ ನಿಗದಿ ಪಡಿಸಿರುವ ಅಂತಿಮ ದಿನಾಂಕದ ಒಳಗಾಗಿ ವೇತನ ಪಾವತಿಸಲು ಕ್ರಮವಹಿಸುವುದು.
* ಆರ್ಥಿಕ ಮಿತವ್ಯಯ ಆದೇಶ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಹೊರಡಿಸುವ ಸರ್ಕಾರದ ಇಲಾಖೆಯ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವುದು. ಯಾವ ಉದ್ದೇಶಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಅನುದಾನ ಬಳಸತಕ್ಕದ್ದು.
* 62 ಬಿ ವರದಿ ಮತ್ತು ಈ ಪತ್ರಕ್ಕೆ ಲಗತ್ತಿಸಿರುವ ನಮೂನೆಯಂತೆ ಬಳಕೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಅನರ್ಹರಿಗೆ ಅನುದಾನ ತಪ್ಪಾಗಿ ಪಾವತಿಯಾಗಿರುವುದು ಕಂಡು ಬಂದಲ್ಲ ಅಥವಾ ಸಲ್ಲಿಕೆಯಾಗದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿ/ ಸಿಬ್ಬಂದಿಗಳನ್ನು ಹೊಣೆಗಾರರನ್ನಾಗಿಸಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.
* ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರ ಪ್ರೋತ್ಸಾಹ ಧನ ಪಾವತಿ ನಂತರ ಕಡ್ಡಾಯವಾಗಿ ಮೂಲ ಸೇವಾ ಪುಸ್ತಕಕ್ಕೆ ನಮೂದಿಸಲು ಕ್ರಮವಹಿಸಲು ಸೂಚಿಸಲಾಗಿದೆ.












Click it and Unblock the Notifications