Government Employee: ಕರ್ನಾಟಕದ ಸರ್ಕಾರಿ ನೌಕರರಿಗೆ ವೇತನ ವಿಳಂಬ ಆಗುತ್ತಿದೆಯೇ ?
ಕರ್ನಾಟಕದಲ್ಲಿ ಸರ್ಕಾರಿ ನೌಕರರ ವೇತನ ವಿಳಂಬವಾಗುತ್ತಿದೆಯೇ. ಹೌದು ಈ ರೀತಿಯೊಂದು ಪ್ರಶ್ನೆ ಇದೀಗ ಎದುರಾಗಿದೆ. ಅದಕ್ಕೆ ಮುಖ್ಯ ಕಾರಣ ರಾಜ್ಯದ ಸರ್ಕಾರಿ ವೇತನ ವ್ಯವಸ್ಥೆಯ ಬಗ್ಗೆ ಸಚಿವರೊಬ್ಬರು ನೀಡಿರುವ ಹೇಳಿಕೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಮೇಲೆ ಸರ್ಕಾರದ ಆರ್ಥಿಕತೆಗೆ ತುಸು ಭಾರವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳಷ್ಟೇ ಆಡಳಿತ ಪಕ್ಷದ ನಾಯಕರು ಸಹ ಅಸಮಾಧಾನ ವ್ಯಕ್ತಪಡಿಸಿರುವುದು ಹಾಗೂ ಈಚೆಗೆ ಸರ್ಕಾರಿ ನೌಕರರ ವೇತನದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಹೇಳಿಕೆ ಇದೀಗ ಸರ್ಕಾರಿ ನೌಕರರ ವೇತನ ವಿಳಂಬವಾಗುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗುವುದಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಲ್ಲಿನ ಗೊಂದಲ ಇದೀಗ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಸಮೀಪಿಸುತ್ತಿದ್ದರೂ ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಐದು ಪ್ರಮುಖ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅಲ್ಲದೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಯಶಸ್ವಿಯೂ ಆಯಿತು.

ಆದರೆ, ಈ ಯೋಜನೆಗಳಲ್ಲಿನ ಗೊಂದಲವನ್ನು ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದೇ ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳಲ್ಲಿ ಸಣ್ಣ ಪುಟ್ಟ ಗೊಂದಲಗಳು ಇಂದಿಗೂ ಮುಂದುವರಿದಿರುವುದು. ಅಲ್ಲದೇ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದ್ದು, ಈ ಯೋಜನೆಯ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ಕೇಳಿ ಬರುತ್ತಲ್ಲೇ ಇದೆ.
ಸರ್ಕಾರಿ ನೌಕರರ ವೇತನ ವಿಳಂಬ ನಿಜವೇ ?
ರಾಜ್ಯದಲ್ಲಿ ಸರ್ಕಾರಿ ನೌಕರರ ವೇತನ ವಿಳಂಬವಾಗುತ್ತಿದೆಯೇ, ಪ್ರತಿ ತಿಂಗಳೂ ನಿಗದಿತ ದಿನದಂದು ಸರ್ಕಾರಿ ನೌಕರರ ವೇತನ ಅವರ ಖಾತೆಗೆ ಜಮೆ ಆಗುತ್ತಿಲ್ಲವೇ. ಈ ರೀತಿಯೊಂದು ಪ್ರಶ್ನೆ ಮೂಡುವುದಕ್ಕೆ ಮುಖ್ಯ ಕಾರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆ.ಈಚೆಗೆ ಗೃಹಲಕ್ಷ್ಮಿ ಯೋಜನೆ ಯಾಕೆ ಸರಿಯಾಗಿ ಪ್ರತಿ ತಿಂಗಳು ಬರ್ತಿಲ್ಲ. ಈ ವಿಳಂಬ ನೀತಿಗೆ ಕಾರಣವೇನು ಎಂದು ಪ್ರಶ್ನೆ ಮಾಡಿದ ಪತ್ರಕರ್ತರಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ಈ ರೀತಿ ಆಗುತ್ತದೆ ಎಂದು ಅವರು ಹೇಳಿದ್ದರು.
ಮುಂದುವರಿದು ಸರ್ಕಾರಿ ಸಂಸ್ಥೆಗಳಲ್ಲಿ ಒಂದು ತಿಂಗಳು ಸಂಬಳ ಕೊಟ್ಟರೆ, ಕೆಲವೊಮ್ಮೆ ಮೂರು ತಿಂಗಳಿಗೊಮ್ಮೆ ಕೊಡಲಾಗುತ್ತೆ. ಇಲ್ಲದಿದ್ದರೆ ಇನ್ನೂ ಕೆಲವೊಮ್ಮೆ ಎರಡ್ಮೂರು ತಿಂಗಳಿಗೊಮ್ಮೆ ಕೊಡೊದು ಸಹ ಇದೆ. ಸರ್ಕಾರದಲ್ಲಿ ಖಂಡಿತವಾಗಿಯೂ ಈ ರೀತಿ ಎಲ್ಲಾ ನಡಿತಿರುತ್ತೆ. ಕೆಲವೊಮ್ಮೆ ಎರಡೆರಡು ತಿಂಗಳು ತಡವಾಗೋದು ಇದೆ. ಈ ವಿಷಯಗಳು ನಿಮಗೂ ಗೊತ್ತಿರುತ್ತೆ.
ಎಲ್ಲಾ ನನ್ನಿಂದ ಸುಮ್ಮನೆ ಯಾಕೆ ಹೇಳಿಸ್ತೀರಿ ಎಂದಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಿರ್ದಿಷ್ಟವಾಗಿ ಯಾರಿಗೆ ಈ ರೀತಿ ಆಗುತ್ತದೆ ಎಂದು ಹೇಳಿಲ್ಲ. ಸರ್ಕಾರಿ ನೌಕರರಿಗೂ ಅಥವಾ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವುವರಿಗೋ ಇಲ್ಲ ತಾತ್ಕಾಲಿಕ ಸಿಬ್ಬಂದಿಗೊ ಎನ್ನುವುದು ಸ್ಪಷ್ಟಪಡಿಸಿಲ್ಲ.
ಆದರೆ, ಸರ್ಕಾರದಲ್ಲಿ ಯಾವುದೇ ನೌಕರರಿಗಾದರೂ ವಿಳಂಬವಾಗಿ ಸಂಬಳವಾಗುತ್ತಿದ್ದರೆ ಅದು ಅನ್ಯಾಯ ಹಾಗೂ ಕಾರ್ಮಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೇ ಸರಿ. ಸರ್ಕಾರವೇ ತನ್ನ ಸಿಬ್ಬಂದಿಗೆ ತಿಂಗಳಿಗೆ ಸರಿಯಾಗಿ ವೇತನ ನೀಡದೆ ಇದ್ದರೆ, ಖಾಸಗಿ ಕಂಪನಿಗಳನ್ನು ಪ್ರಶ್ನಿಸುವ ಯಾವ ನೈತಿಕತೆ ಉಳಿಸಿಕೊಂಡಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆಯು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.












Click it and Unblock the Notifications