ಸರಕಾರದಿಂದ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಅಧ್ಯಕ್ಷರು ನೇಮಕ, ಮೃತರಿಗೂ ಚಾನ್ಸ್!
ಬೆಂಗಳೂರು ಆಗಸ್ಟ್ 24: ರಾಜ್ಯ ಸರಕಾರದಿಂದ ರಚಿಸಲ್ಪಟ್ಟಿರುವ ದ.ರಾ. ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ ಸೇರಿದಂತೆ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳ ಅಧ್ಯಕ್ಷರು ಹಾಗೂ ಸದಸ್ಯರ ಅವಧಿ ಮುಕ್ತಾಯವಾದ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ನೂತನ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ.
ಟ್ರಸ್ಟ್, ಪ್ರತಿಷ್ಠಾನಗಳ ನೇಮಕಾತಿಯಾದ ಅಧ್ಯಕ್ಷರು ಹಾಗೂ ಸದಸ್ಯರನ್ನು ಘೋಷಣೆ ಮಾಡುವುದರಲ್ಲಿ ಸರಕಾರ ಎಡವಟ್ಟು ಮಾಡಿಕೊಂಡಿದೆ. ಕೆಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಲೇಖಕ ನರೇಂದ್ರ ರೈ ದೇರ್ಲರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ, ಆದರೆ 2021ರ ಡಿಸೆಂಬರ್ನಲ್ಲಿ ನಿಧನರಾಗಿರುವ ತೇಜಸ್ವಿ ಪತ್ನಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿರನ್ನು ಮಹಿಳಾ ಸದಸ್ಯರಾಗಿ ಸೇರಿಸಿ ಎಡವಟ್ಟು ಮಾಡಿದೆ.
ಇನ್ನು ಈ ಪ್ರತಿಷ್ಠಾನದಲ್ಲಿ ಪ್ರಭುಲಿಂಗ ಶಾಸ್ತ್ರಿ, ದೀಪಕ್ ದೊಡ್ಡಯ್ಯ, ಶಿವಾನಂದ ಕಳವೆ, ವಿನೋದ್ ಕುಮಾರ್ ನಾಯ್ಕ್, ಲಕ್ಷ್ಮಿ ನಾರಾಯಣ ಕಜಗದ್ದೆ, ಮಾರ್ಷಲ್ ಶರಾಮ್ ಅವರುಗಳು ಸದಸ್ಯರಾಗಿ ನೇಮಕವಾಗಿದ್ದಾರೆ.

ನೇಮಕಾತಿಗೆ ಒಪ್ಪದ ಚಕ್ರವರ್ತಿ ಸೂಲಿಬೆಲೆ
ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾಗಿ ಚಕ್ರವರ್ತಿ ಸೂಲಿಬೆಲೆ ರನ್ನು ನೇಮಕ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರದ ನೇಮಕಾತಿಯನ್ನು ಸೂಲಿಬೆಲೆ ತಿರಸ್ಕರಿಸಿ, ನೇಮಕಾತಿ ಸ್ಥಾನ ಮರಳಿಸಿದ್ದಾರೆ. ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳದೇ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
"ಗಳಗನಾಥರ ಕುರಿತಂತೆ ಅಪಾರ ಗೌರವ ಹೊಂದಿರುವ ನನಗೆ, ನನ್ನನ್ನು ಗಳಗನಾಥ ಮತ್ತು ರಾಜ ಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ಅಚ್ಚರಿಯೂ ಮತ್ತು ಸಂತಸವೂ ಆಯ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಸಮಯ ಕೊಡುವಷ್ಟು ಪುರಸೊತ್ತಿಲ್ಲದಿರುವುದರಿಂದ ಅತ್ಯಂತ ವಿನೀತನಾಗಿಯೇ ಈ ಗೌರವವನ್ನು ಮರಳಿಸಬೇಕಾಗಿ ಬಂದಿದೆ. ಗಳಗನಾಥರ ಕುರಿತಂತೆ ನನ್ನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪ್ರೀತ್ಯಾದರಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳು ನನ್ನ ದೃಷ್ಟಿಯಲ್ಲಿದ್ದಾರೆ. ಸಂಬಂಧಪಟ್ಟವರಿಗೆ ಅದನ್ನು ತಿಳಿಸುವೆ. ಸೂಕ್ತವೆನಿಸಿದರೆ ಅವರನ್ನು ಆಯ್ಕೆ ಮಾಡಬಹುದು".
ಗಳಗನಾಥರ ಕನ್ನಡ ಸೇವೆಗೆ ನಾವೆಷ್ಟು ಋಣಿಯಾದರೂ ಕಡಿಮೆಯೇ. ಅವರ ಕೆಲಸ ಮಾಡುವ ಈ ಅವಕಾಶ ಸ್ವೀಕರಿಸಲಾಗದಿರುವುದಕ್ಕೆ ಖಂಡಿತವಾಗಿಯೂ ಖೇದವಿದೆ. ನನ್ನನ್ನು ಸೂಕ್ತವೆಂದು ಆಯ್ಕೆ ಮಾಡಿದವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
21 ಟ್ರಸ್ಟ್ /ಪ್ರತಿಷ್ಠಾನದ ಅಧ್ಯಕ್ಷರು, ಸದಸ್ಯರ ನೇಮಕ ಪಟ್ಟಿ
1. ಡಾ. ದ.ರಾ. ಬೇಂದ್ರೆ ಸ್ಮಾರಕ ಟ್ರಸ್ಟ್ ಧಾರವಾಡ - ಮನೋಜ ಪಾಟೀಲ ಧಾರವಾಡ
2. ಡಾ. ಪು.ತಿ. ನ. ಟ್ರಸ್ಟ್ ಬೆಂಗಳೂರು -ಡಾ. ಎಚ್.ಎಸ್. ವೆಂಕಟೇಶ ಮೂರ್ತಿ
3.ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಟ್ರಸ್ಟ್ ಧಾರವಾಡ - ನಾಗರಾಜ ಹವಾಲದಾರ
4. ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೋಲಾರ - ಡಾ. ವತ್ಸಲಾ ಮೋಹನ್
5. ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಉಡುಪಿ - ಆನಂದ ಸಿ. ಕುಂದರ್
6. ಡಾ. ವಿ.ಕೃ. ಗೋಕಾಕ್ ಪ್ರತಿಷ್ಠಾನ ಹಾವೇರಿ- ಅನಿಲ ಗೋಕಾಕ್
7. ಬಸವರಾಜ ರಾಜಗುರು ಸ್ಮಾರಕ ಟ್ರಸ್ಟ್ ಧಾರವಾಡ- ಶ್ರೀಪಾದ ಹೆಗಡೆ ಧಾರವಾಡ
8. ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್- ಡಾ. ಶ್ರೀನಿವಾಸ ಪಾಡಿಗಾರ
9. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಬೆಳಗಾವಿ- ಡಾ. ಕವಿತಾ ಕುಸಗಲ್
10. ಮೈಲಾರ ಮಹಾದೇವಪ್ಪ ಸ್ಮಾರಕ ಟ್ರಸ್ಟ್ ಹಾವೇರಿ- ಸುಧೀರ್ ಸಿಂಹ ಘೋರ್ಪಡೆ
11. ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ - ಡಾ. ಗುರುಪಾದ ಮರಿಗುದ್ದಿ
12. ಡಿ.ವಿ. ಹಾಲಭಾವಿ ಸ್ಮಾರಕ ಟ್ರಸ್ಟ್ ಧಾರವಾಡ- ಪಿ.ಎಸ್. ಕಡೆಮನಿ
13. ಡಿ.ವಿ.ಜಿ. ಪ್ರತಿಷ್ಠಾನ ಕೋಲಾರ- ಎಸ್. ದಿವಾಕರ
14. ಪಿ.ಬಿ. ಧುತ್ತರಗಿ ಪ್ರತಿಷ್ಠಾನ ಬಾಗಲಕೋಟೆ- ಶಿವಪ್ಪ ಭರಮಪ್ಪ ಅದರಗುಂಚಿ
15. ಗಳಗನಾಥ ಮತ್ತು ನಾ.ಶ್ರೀ ರಾಜಪುರೋಹಿತ ಪ್ರತಿಷ್ಠಾನ ಹಾವೇರಿ- ಚಕ್ರವರ್ತಿ ಸೂಲಿಬೆಲೆ
16. ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಮಂಡ್ಯ- ಡಾ. ಬಿ.ವಿ. ರಾಜಾರಾಮ್
17. ಡಾ. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು- ಡಾ. ಬಸವರಾಜ ಕಲ್ಗುಡಿ
18. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಚಿಕ್ಕಮಗಳೂರು- ನರೇಂದ್ರ ರೈ ದೇರ್ಲ
19. ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ- ಸರಸ್ವತಿ ಚಿಮ್ಮಲಗಿ
20. ರನ್ನ ಪ್ರತಿಷ್ಠಾನ ಬಾಗಲಕೋಟೆ- ಡಾ. ನೀಲಗಿರಿ ತಳವಾರ್
21. ಗುಬ್ಬಿ ವೀರಣ್ಣ ಟ್ರಸ್ಟ್ ತುಮಕೂರು- ಡಾ. ಭೀಮಸೇನ್ ಗಂಗಾವತಿ.












Click it and Unblock the Notifications