ಯೋಗಗುರು ಬಿಕೆಎಸ್ ಐಯ್ಯಂಗಾರ್‌ಗೆ ಗೂಗಲ್ ಡೂಡಲ್ ನಮನ

By: ರವೀಂದ್ರ ಭಟ್
Subscribe to Oneindia Kannada

ಕೋಲಾರ, ಡಿಸೆಂಬರ್ 14 : ಯೋಗ ಒಂದು ಜೀವನ ವಿಧಾನ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟ ಕನ್ನಡಿಗ ಬಿ.ಕೆ.ಎಸ್.ಐಯ್ಯಂಗಾರ್ ಅವರಿಗೆ ಗೂಗಲ್ ನಮನ ಸಲ್ಲಿಸುತ್ತಿದೆ. ವಿಶೇಷ ಡೂಡಲ್‌ ರಚಿಸುವ ಮೂಲಕ ಡಿಸೆಂಬರ್ 14ರಂದು ಐಯ್ಯಂಗಾರ್ ಅವರ ಜನ್ಮದಿನವನ್ನು ನೆನಪಿಸುತ್ತಿದೆ.

ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್ ಅವರು 1918ರ ಡಿಸೆಂಬರ್ 14ರಂದು ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದಲ್ಲಿ ಜನಿಸಿದರು. 2014ರ ಆಗಸ್ಟ್ 20ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. [ಬಿಕೆಎಸ್ ಐಯ್ಯಂಗಾರ್ ವಿಧಿವಶ]

bks iyengar

ಐಯ್ಯಂಗಾರ್ ಅವರ ತಂದೆ ಕೃಷ್ಣಮಾಚಾರ್ ಅವರು ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿದ್ದರು. 9 ವರ್ಷದ ಬಾಲಕನಾಗಿದ್ದಾಗ ತಂದೆಯನ್ನು ಕಳೆದುಕೊಂಡ ಐಯ್ಯಂಗಾರ್ ಕಡುಬಡತನದಲ್ಲಿ ಸಂಬಂಧಿಕರ ಮನೆಯಲ್ಲಿ ಬೆಳೆದರು. ಬಾಲ್ಯದಲ್ಲಿ ತಮ್ಮ ದೇಹ ಅನೇಕ ರೋಗಗಳ ತವರು ಮನೆಯಾಗಿತ್ತು ಎಂದು ಐಯ್ಯಂಗಾರ್ ಅವರೇ ಬರೆದಿದ್ದಾರೆ. [ಬಿಕೆಎಸ್ ಐಯ್ಯಂಗಾರ್ - ಒಂದು ನೆನಪು]

ಯೋಗಕ್ಕೆ ಜೀವನ ಮೀಸಲು : ತಮ್ಮ 16ನೇ ವಯಸ್ಸಿನಲ್ಲಿ ಟಿ.ಕೃಷ್ಣಮಾಚಾರ್‌ ಅವರಿಂದ ಯೋಗ ಕಲಿಯತೊಡಗಿದ ಮೇಲೆ ಬಿಕೆಎಸ್‌ ಐಯ್ಯಂಗಾರ್ ಅವರ ಬದುಕು ಬದಲಾಯಿತು. 2 ವರ್ಷ ಯೋಗ ಕಲಿತ ಮೇಲೆ ಗುರುಗಳು ಇವರನ್ನು ಪುಣೆಗೆ ಕಳುಹಿಸಿಕೊಟ್ಟರು. ನಂತರ ತಮ್ಮ ಜೀವನವನ್ನು ಯೋಗಕ್ಕೆ ಮೀಸಲಾಗಿಟ್ಟ ಬಿಕೆಎಸ್ ಐಯ್ಯಂಗಾರ್ ಅವರು, ಯಾರು ಬೇಕಾದರೂ ಯೋಗ ಕಲಿಯಬಹುದು, ಯೋಗಕ್ಕೆ ಜಾತಿ, ಲಿಂಗ, ವಯಸ್ಸು, ರಾಷ್ಟ್ರೀಯತೆಗಳ ಚೌಕಟ್ಟಿಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟರು.

 iyengar

ಪ್ರತಿದಿನ ಮುಂಜಾನೆ 4 ಗಂಟೆಗೆ ಏಳುತ್ತಿದ್ದ ಬಿಕೆಎಸ್ ಐಯ್ಯಂಗಾರ್ ಅವರು, ಒಂದೂವರೆ ಗಂಟೆ ಪ್ರಾಣಾಯಾಮ ಮಾಡುತ್ತಿದ್ದರು. ಬಳಿಕ ಯೋಗ ತರಗತಿಗಳನ್ನು ಹೇಳಿಕೊಡುತ್ತಿದ್ದರು. ಅದು ಇಲ್ಲದಿದ್ದರೆ ಒಂಬತ್ತೂವರೆ ತನಕ ಯೋಗಾಭ್ಯಾಸ ಮಾಡುತ್ತಿದ್ದರು. ಯೋಗದ ಜೊತೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಐಯ್ಯಂಗಾರ್ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.

ಪುಸ್ತಕಗಳನ್ನು ಬರೆದರು : ಯೋಗವನ್ನು ಪ್ರಪಂಚದಾದ್ಯಂತ ಪರಿಚಯಿಸಿದ ಬಿಕೆಎಸ್ ಐಯ್ಯಂಗಾರ್ ಅವರು, ಯೋಗದ ಕುರಿತು ಹಲವಾರು ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ಅರಿವು ಮೂಡಿಸಿದರು. 1966ರಲ್ಲಿ ಐಯ್ಯಂಗಾರ್ ಅವರು ಬರೆದ ಪ್ರಥಮ ಪುಸ್ತಕ 'Light on Yoga' ಹದಿನೇಳು ಭಾಷೆಗಳಲ್ಲಿ ತರ್ಜುಮೆಗೊಂಡಿದೆ.

kolar

ಬಿಕೆಎಸ್ ಐಯ್ಯಂಗಾರ್ ಅವರ ಸಾಧನೆಗೆ ದೇಶವಿದೇಶದಿಂದ ಹಲವು ಗೌರವಗಳು ದೊರೆತಿವೆ. ಭಾರತ ಸರ್ಕಾರ 2014ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಐಯ್ಯಂಗಾರ್ ಅವರನ್ನು ಗೌರವಿಸಿದೆ. ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದ ಐಯ್ಯಂಗಾರ್ ಅವರು 96ನೇ ವಯಸ್ಸಿನಲ್ಲಿ ಪುಣೆಯ ಪ್ರಯಾಗ್ ಆಸ್ಪತ್ರೆಯಲ್ಲಿ ವಿಧಿವಶರಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Google celebrating Yoga guru Bellur Krishnamachar Sundararaja Iyengar’s birth anniversary with a creative doodle which shows various Yoga asanas devised by him. Bellur Krishnamachar Sundararaja Iyengar, popularly known as BKS Iyengar was born on December 14, 1918 in Bellur in Kolar district, Karnataka. BKS Iyengar is considered as one of the well known yoga teachers across the world.
Please Wait while comments are loading...