ಕರ್ನಾಟಕ ಬಂದ್‌ಗೆ ಮಂಡ್ಯ, ಹಾಸನ, ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ
ಮಂಡ್ಯ, ಸೆಪ್ಟೆಂಬರ್ 29: ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಬಿಡುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾವೇರಿ ಹೋರಾಟ ಹಿನ್ನೆಲೆ ಕರ್ನಾಟಕ ಬಂದ್‌ಗೆ ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಮೂರು ಜಿಲ್ಲೆಗಳಲ್ಲಿ ಹೆಚ್ಚಿನ ಅಂಗಡಿಗಳ ಮಾಲೀಕರು ಮತ್ತು ವ್ಯಾಪಾರ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಮುಚ್ಚಲಾಗಿತ್ತು. ಬೆಳಿಗ್ಗೆ ಅಂಗಡಿಗಳನ್ನು ತೆರೆದಿದ್ದ ಕೆಲವರಿಗೆ ವಿವಿಧ ಸಂಘಟನೆಗಳ ಸದಸ್ಯರು ತಮ್ಮ ತಮ್ಮ ಪಟ್ಟಣಗಳು ಮತ್ತು ಜಿಲ್ಲೆಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮುಚ್ಚುವಂತೆ ಮನವಿ ಮಾಡಿಕೊಂಡರು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಹಲವಾರು ಜಿಲ್ಲೆ, ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಜನರಿಗೆ ಅಗತ್ಯವಾಗಿ ಬೇಕಾಗಿರುವ ಮೆಡಿಕಲ್ ಶಾಪ್‌ಗಳು, ಚಿಕಿತ್ಸಾಲಯಗಳು ಮತ್ತು ಅಗತ್ಯ ಸೇವೆಗಳು ಕಾರ್ಯನಿರ್ವಹಿಸಿದವು.
ಹೋರಾಟದ ಕೇಂದ್ರ ಸ್ಥಾನವಾದ ಮಂಡ್ಯದಲ್ಲಿ ಕಸ್ತೂರಿ ಜನಪರ ವೇದಿಕೆಯ ಸದಸ್ಯರು ಜಯಚಾಮರಾಜ ವೃತ್ತದಲ್ಲಿ ಕಾವೇರಿಗಾಗಿ ರಕ್ತ ಕೊಡುತ್ತೇವೆ ಆದರೆ ನೀರು ಕೊಡಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಭಿತ್ತಿಪತ್ರಗಳಿಗೆ ಕೈ ಕಡಿದು ರಕ್ತದ ಹನಿಗಳನ್ನು ಚಿಮುಕಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇಯನ್ನು ಮಧ್ಯಾಹ್ನದ ವೇಳೆಗೆ ತಡೆಯಲು ಕೆಲವು ರೈತರು ಮುಂದಾಗಿದ್ದರು. ಅಲ್ಲದೆ ರೈಲುಗಳನ್ನು ತಡೆಯಲು ಹಳಿಗಳತ್ತ ಧಾವಿಸಿದ್ದರು. ಹೆದ್ದಾರಿಯಲ್ಲಿ ಚಲಿಸುವ ವಾಹನಗಳು ಮತ್ತು ರೈಲು ಸೇವೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಮಂಡ್ಯ ಜಿಲ್ಲೆಯ ಕೆಲವು ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.
ಬಂದ್ ಹಿನ್ನೆಲೆ ಶ್ರೀರಂಗಪಟ್ಟಣದ ಕೆಆರ್ ಎಸ್ ಅಣೆಕಟ್ಟೆ ಬಳಿ, ಮಂಡ್ಯ ಜಿಲ್ಲೆಯಾದ್ಯಂತ ಹಾಗೂ ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲೂ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಮಿಳು ಸಂಘಟನೆಗಳ ಒಕ್ಕೂಟವು ಸಹ ಬಂದ್‌ಗೆ ಬೆಂಬಲ ನೀಡಿರುವುದು ವಿಶೇಷವಾಗಿತ್ತು.
ಶುಕ್ರವಾರ ಬೆಳಗ್ಗೆ ದೇವರಾಜ ಅರಸು ರಸ್ತೆಯಲ್ಲಿರುವ ಪ್ರತಿಯೊಂದು ಅಂಗಡಿ ಮುಗ್ಗಟ್ಟು, ಮಾಲ್‌ಗಳು ಮತ್ತು ರಸ್ತೆ ಬದಿ ವ್ಯಾಪಾರಿಗಳು ಬಂದ್ ಮಾಡಿ ಬೆಂಬಲ ನೀಡಿದರು. ನಗರದ ಹೃದಯಭಾಗದಲ್ಲಿರುವ ಕೆ.ಆರ್.ಸರ್ಕಲ್ ಹಾಗೂ ಅರಸು ರಸ್ತೆ ವಾಹನಗಳ ಓಡಾಟ ಇಲ್ಲದೆ ಬಣಗುಡುತ್ತಿತ್ತು. ಅಲ್ಲದೆ ರೈತ ಸಂಘದವರು, ಕನ್ನಡ ಹೋರಾಟಗಾರರು ಮೆರವಣಿಗೆ ಮಾಡಿ ಡಿಸಿಗೆ ಮನವಿ ಸಲ್ಲಿಸಿದರು.












Click it and Unblock the Notifications