Gold smuggling case: ರನ್ಯಾ ರಾವ್ ಮದುವೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್: ಫೋಟೊ ಭಾರೀ ವೈರಲ್
ವಿದೇಶದಿಂದ ಅಕ್ರಮ ಚಿನ್ನ ಸಾಗಾಟ ಕೇಸ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರ ಬಂಧನವಾಗಿದೆ. ಇದು ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಚಿವರಿಗೂ ರನ್ಯಾ ರಾವ್‌ಗೂ ನಂಟಿದೆ ಎಂಬ ವಿಚಾರ ತನಿಖೆ ವೇಳೆ ಹೊರಬಿದ್ದಿದೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿಯು ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ರನ್ಯಾ ರಾವ್ ಅವರ ಮದುವೆ ಫೋಟೋ ವೈರಲ್ ಆಗಿದೆ. ರನ್ಯಾ ರಾವ್ ಮದುವೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೂಡ ಇರುವುದು ಅಚ್ಚರಿ ಮೂಡಿಸಿದೆ.
ಹೌದು ಗೋಲ್ಡ್ ಸ್ಮಗ್ಲಿಂಗ್ ಕೇಸ್ ಆರೋಪಿಯಾಗಿರುವ ನಟಿ ರನ್ಯಾ ರಾವ್ ಅವರ ಮದುವೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಿ.ಪರಮೇಶ್ವರ್ ಅವರು ಕೂಡ ಭಾಗಿಯಾಗಿದ್ದರು ಎನ್ನಲಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕರ್ನಾಟಕ ಬಿಜೆಪಿ ಕೂಡ ಈ ಫೋಟೋ ಹಂಚಿಕೊಂಡು ತರಾಟೆಗೆ ತೆಗೆದುಕೊಂಡಿದೆ. ಈ ಫೋಟೊದೊಂದಿಗೆ ʼಗೋಲ್ಡ್ ಸ್ಮಗ್ಲರ್ ರನ್ಯಾ ಜೊತೆ ನಂಟಿರುವ ಸಚಿವರು ಯಾರು ಎಂಬುದನ್ನು ಬಹಿರಂಗಪಡಿಸುವಿರಾ ಕಾಂಗ್ರೆಸ್? ಎಂದು ವ್ಯಂಗ್ಯವಾಡಿದೆ. ಆದರೆ ಮತ್ತೊಂದೆಡೆ ನಟಿಯ ಮದುವೆಯಲ್ಲಿ ಸಿಎಂ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಇರುವ ಫೋಟೋ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.

ರನ್ಯಾ ರಾವ್ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಯಿಸಿ, ನಟಿ ರನ್ಯಾ ರಾವ್ ಅವರು ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯದ ದುರ್ಬಳಕೆ ಮಾಡಿಕೊಂಡು ಚಿನ್ನದ ಅಕ್ರಮ ಸಾಗಾಣಿಕೆ ನಡೆಸಿರುವುದು ವರದಿಯಾಗಿದೆ. ಈ ಪ್ರಕರಣದಲ್ಲಿ ರನ್ಯಾ ರಾವ್ ಅವರ ತಂದೆ, ಐಪಿಎಸ್ ಅಧಿಕಾರಿಯೂ ಆಗಿರುವ ರಾಮಚಂದ್ರ ರಾವ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವರನ್ನು ನೇಮಿಸಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಈ ಫೋಟೋ ವೈರಲ್ ಆಗಿದೆ.

ಈ ಕೇಸ್ ಬಗ್ಗೆ ಜಿ.ಪರಮೇಶ್ವರ್ ಕೂಡ ಮಾತನಾಡಿದ್ದರು. ಈ ಕೇಸ್ ತನಿಖೆ ಆಗಲಿ ನೋಡೋಣ. ಇದರಲ್ಲಿ ಯಾರಾದರೂ ಇದ್ದರೆ ತನಿಖೆಯಲ್ಲಿ ಗೊತ್ತಾಗಲಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಸಿಬಿಐ ತನಿಖೆ ಮಾಡುತ್ತಿದ್ದು, ನಮ್ಮ ಪೊಲೀಸರಿಗೆ ಯಾವುದೇ ಮಾಹಿತಿ ಕೊಡಲ್ಲ. ರಾಜ್ಯ ಪೊಲೀಸರಿಗೆ ಈ ಕೇಸ್ ಬಗ್ಗೆ ಏನೂ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಈಗ ರನ್ಯಾ ರಾವ್ ಮದುವೆ ಫೋಟೋದಲ್ಲಿ ಜಿ.ಪರಮೇಶ್ವರ್ ಅವರು ಕೂಡ ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ನಟಿ ರನ್ಯಾ ರಾವ್ ಕೇಸ್‌ನಲ್ಲಿ ಇಬ್ಬರು ಸಚಿವರ ಹೆಸರು ಕೂಡ ಥಳುಕು ಹಾಕಿಕೊಂಡಿದೆ. ಒಬ್ಬ ಸಚಿವರು ರನ್ಯಾ ರಾವ್‌ಗೆ 10 ವರ್ಷಗಳಿಂದ ಪರಿಚಯ ಇದ್ದಾರೆ. ಹಾಗೂ ಮತ್ತೊಬ್ಬ ಸಚಿವ ರನ್ಯಾಗೆ ನೆಕ್ಲೆಸ್ ಗಿಫ್ಟ್ ಕೊಟ್ಟಿದ್ದಾರೆ. ಇಬ್ಬರೂ ಸಚಿವರು ನಟಿಗೆ ಆಪ್ತರು ಎನ್ನಲಾಗಿದೆ. ಈ ಆಯಾಮದಲ್ಲೂ ಡಿಆರ್‌ಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಈ ಕೇಸ್ ಸದ್ಯ ರಾಜಕೀಯ ಅಂಗಳ ತಲುಪಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ.












Click it and Unblock the Notifications