Gold: ಲಕ್ಕುಂಡಿ ನಿಧಿ ಪ್ರಕರಣ: ಮಹತ್ವದ ಮಾಹಿತಿ ಹಂಚಿಕೊಂಡ ಜಿಲ್ಲಾಧಿಕಾರಿ
ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಈಚೆಗೆ ಪತ್ತೆಯಾದ ನಿಧಿ (ಚಿನ್ನಾಭರಣ) ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆಯ ಅಧಿಕಾರಿ ನೀಡಿರುವ ಹೇಳಿಕೆಯು ಗೊಂದಲಕ್ಕೆ ಕಾರಣವಾಗಿತ್ತು. ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿ ಅಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಹೇಳಿದ್ದರು. ಈ ಬಗ್ಗೆ ಗದಗ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಅವರು ಇದು ನಿಧಿ ಅಲ್ಲ ಎಂದು ಬಾಯ್ತಪ್ಪಿನಿಂದ ಹೇಳಿಕೆ ನೀಡಿದ್ದಾರೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು, ಸೃಷ್ಟಿಯಾದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಇನ್ನು ಲಕ್ಕುಂಡಿಯಲ್ಲಿ ಸಿಕ್ಕಿರುವ ಆಭರಣಗಳು 100 ವರ್ಷಕ್ಕೂ ಹಳೆಯ ಆಭರಣಗಳಾಗಿವೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯುತ್ತಿದ್ದು, ಅಧ್ಯಯನ ಮುಗಿದ ಮೇಲೆ ಅದು ಯಾವ ಕಾಲದ್ದು, ಎಷ್ಟು ಹಳೆಯದ್ದು ಎನ್ನುವ ಮತ್ತಷ್ಟು ನಿಖರವಾದ ಮಾಹಿತಿ ಸಿಗಲಿದೆ. ರಾಜ್ಯ ಪುರಾತತ್ವ ಇಲಾಖೆಯ ತಜ್ಞರಾದ ಸ್ಮಿತಾ ರೆಡ್ಡಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಅವರು ನಡೆಸುವ ತನಿಖೆಯಿಂದ ಇನ್ನಷ್ಟು ಮಾಹಿತಿ ಲಭ್ಯವಾಗಲಿವೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ತಿಳಿಸಿದ್ದಾರೆ.
ಕುಟುಂಬಸ್ಥರಿಗೆ ಪರ್ಯಾಯ ವ್ಯವಸ್ಥೆ
ಪ್ರಮಾಣಿಕತೆ ಮೆರೆದ ಕುಟುಂಬಸ್ಥರಿಗೆ ಇರುವುದಕ್ಕೆ ಮನೆಯೂ ಇಲ್ಲದೆ ಸಮಸ್ಯೆ ಆಗಿತ್ತು. ಈ ಪ್ರದೇಶವನ್ನು ನಿಷಿದ್ಧ ಪ್ರದೇಶ ಎಂದು ಘೋಷಿಸಲಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆಯೂ ಜಿಲ್ಲಾಧಿಕಾರಿ ಮಾತನಾಡಿದ್ದಾರೆ. ರಿತ್ತಿ ಕುಟುಂಬಸ್ಥರು ಚಿನ್ನವನ್ನು ಜಿಲ್ಲಾಡಳಿತಕ್ಕೆ ನೀಡುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ. ಸರ್ಕಾರದ ಜತೆಗೆ ಚರ್ಚೆ ನಡೆಸಿ ಕುಟುಂಬಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಹೇಳಿದ್ದಾರೆ.
ಮನೆ ನಿರ್ಮಾಣಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಈಗ ನಿಧಿ ಸಿಕ್ಕಿರುವ ಸ್ಥಳದಲ್ಲಿ ಮತ್ತಿನ್ನೇನು ಸಿಗುವುದಿಲ್ಲ ಎಂದು ತಜ್ಞರು ಸ್ಪಷ್ಟೀಕರಿಸಿದ ನಂತರ ಮನೆ ನಿರ್ಮಾಣಕ್ಕೆ ಸೂಚಿಸಲಾಗುವುದು. ಎರಡು ದಿನಗಳಲ್ಲಿ ಅದಕ್ಕೆ ಉತ್ತರ ಸಿಗಲಿದೆ ಎಂದೂ ಹೇಳಿದ್ದಾರೆ.
ಚಿನ್ನ ನಮ್ಮದು ಎಂದು ಮನವಿ ಸಲ್ಲಿಸಬಹುದು
ಇನ್ನು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 470 ಗ್ರಾಂ ನಿಧಿ ಸಿಕ್ಕಿದೆ. 1962ರ ಕಾನೂನಿನ ಪ್ರಕಾರ, ಈ ಚಿನ್ನ ನಮ್ಮದು ಎಂದು ಯಾರಾದರೂ ಬಂದು ಮನವಿ ಸಲ್ಲಿಸಲು ಅವಕಾಶ ಇದೆ. ಅದನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಚಿನ್ನ ಸರ್ಕಾರದ್ದು ಆಗಲಿದೆ. ಚಿನ್ನವನ್ನು ಸರ್ಕಾರಕ್ಕೆ ಒಪ್ಪಿಸಿದರೆ ನಿಯಮದ ಪ್ರಕಾರ ಸರ್ಕಾರದಿಂದ ಶೇಕಡ ಮೊತ್ತ ಲಭಿಸಲಿದೆ. ಅದಕ್ಕೂ ಮೊದಲು ಚಿನ್ನದ ಮಾಲೀಕತ್ವ ಮತ್ತು ಇತಿಹಾಸ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಮುತ್ತಜ್ಜರ ಆಭರಣ ಇರಬಹುದು; ಬಾಯ್ತಪ್ಪಿನಿಂದ ಹೇಳಿದ್ದೆ
ಇನ್ನು ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೆ. ಅಲ್ಲಿ ಸಿಕ್ಕ ಚಿನ್ನಾಭರಣಗಳು 100 ವರ್ಷ ಮೇಲ್ಪಟ್ಟದ್ದಾಗಿವೆ ಎಂದು ಅಂದಾಜಿಸಲಾಗಿದೆ. ಕರ್ನಾಟಕ ನಿಕ್ಷೇಪ ನಿಧಿಯ ಅಡಿಯಲ್ಲಿ ಭೂಮಿಯ ಆಳದಲ್ಲಿ 10 ರೂಪಾಯಿಗಿಂತಲೂ ಹೆಚ್ಚಿನ ದರದ ವಸ್ತುಗಳು ಯಾವುದೇ ಸಿಕ್ಕರೂ 1962 ಕಾಯ್ದೆ ಪ್ರಕಾರ ಸರ್ಕಾರಕ್ಕೆ ಸೇರಿದ್ದು ಎನ್ನುವ ಕಾನೂನು ಇದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ ಹೇಳಿದ್ದಾರೆ.
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿ ಅಲ್ಲ, ಮುತ್ತಜ್ಜರ ಆಭರಣ ಇರಬಹುದು ಎಂಬ ಹೇಳಿಕೆ ಯಾಕೆ ನೀಡಿದ್ದಿರಿ ಎನ್ನುವ ಪ್ರಶ್ನೆಗೆ ಬಾಯ್ತಪ್ಪಿನಿಂದ ಆ ರೀತಿ ಹೇಳಿಕೆ ನೀಡಿದ್ದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.












Click it and Unblock the Notifications