
ರಸ್ತೆಗಳ ಬಗ್ಗೆ ಗೋವಾ ಸಿಎಂ ಟೀಕೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಗುಂಡೂರಾವ್
ಬೆಂಗಳೂರು, ಅಕ್ಟೋಬರ್ 22: ರಾಜ್ಯದ ಹದಗೆಟ್ಟ ರಸ್ತೆಗಳ ಬಗ್ಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್, 'ರಾಜ್ಯದ ಹದಗೆಟ್ಟ ರಸ್ತೆಗಳ ಬಗ್ಗೆ ನೆರೆರಾಜ್ಯದವರೂ ಅಪಹಾಸ್ಯ ಮಾಡುವ ಹೀನಾಯ ಸ್ಥಿತಿಗೆ ತಲುಪಿದ್ದೇವೆ. ಗೋವಾ ಮುಖ್ಯಮಂತ್ರಿ ಬೆಳಗಾವಿಯ ರಸ್ತೆಗಳ ಬಗ್ಗೆ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಛೇಡಿಸಿದ್ದಾರೆ. ಗೋವಾ ಸಿಎಂ ನೋಡಿರುವುದು ಕೇವಲ ಬೆಳಗಾವಿ ರಸ್ತೆಗಳನಷ್ಟೆ. ಅವರೇನಾದರೂ ಬೆಂಗಳೂರಿನ ರಸ್ತೆಗಳನ್ನು ನೋಡಿದ್ದರೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದರೇನೋ' ಎಂದು ಟೀಕಿಸಿದ್ದಾರೆ.
ಅಪ್ಪು 'ಗಂಧದ ಗುಡಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ
'ಯಮ ಸ್ವರೂಪಿ ಗುಂಡಿಗಳಿಂದ ಬೆಂಗಳೂರು ಸಾವಿನ ಮನೆಯಾಗಿದೆ. ಜನ ರಸ್ತೆಯಲ್ಲಿ ಓಡಾಡಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕು.ಅದರಲ್ಲೂ ದ್ವಿಚಕ್ರ ವಾಹನ ಸವಾರರು ಗುಂಡಿಗಳ ಅಪಾಯದಿಂದ ಪಾರಾಗಿ ಸುರಕ್ಷಿತವಾಗಿ ತಲುಪಿದರೆ ಅವರೇ ಅದೃಷ್ಟವಂತರು. ರಸ್ತೆ ಗುಂಡಿ ಮುಚ್ಚದೆ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಸರ್ಕಾರಕ್ಕೆ ಏನನ್ನಬೇಕು?' ಎಂದು ಪ್ರಶ್ನಿಸಿದ್ದಾರೆ.
'ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚಲು ಕಳೆದ 5 ವರ್ಷದಲ್ಲಿ 20.06 ಕೋಟಿ ರುಪಾಯಿ ಖರ್ಚು ಮಾಡಿದ್ದೇವೆ ಎಂದು ಕಳೆದ ಅಧಿವೇಶನದಲ್ಲಿ ಬೊಮ್ಮಾಯಿ ಹೇಳಿದ್ದರು. ಹಾಗಾದರೆ ಆ ಹಣ ಎಲ್ಲಿ ಹೋಯಿತು? ಅದರಲ್ಲೂ ಶೇ 40 ಕಮೀಷನ್ ನುಂಗಲಾಯಿತೆ? 20 ಸಾವಿರ ಕೋಟಿ ರುಪಾಯಿ ಖರ್ಚು ಮಾಡಿದರೂ ರಸ್ತೆಗಳು ಅಧ್ವಾನವಾಗಿರುವ ಅರ್ಥವೇನು? ಸಾರ್ವಜನಿಕರ ಹಣಕ್ಕೆ ಬೆಲೆಯಿಲ್ಲವೇ' ಎಂದು ಕೇಳಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಕೆಲ ತಿಂಗಳಿಂದ ವಿಪರೀತ ಮಳೆ ಸುರಿಯುತ್ತಿದೆ. ರಾಜ್ಯ ಸರ್ಕಾರ ಅತಿವೃಷ್ಟಿಯನ್ನು ನಿಯಂತ್ರಿಸಲು ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಮೃತ್ಯುಕೂಪವಾಗಿರುವ ರಸ್ತೆ ಗುಂಡಿಗಳು ಜನರ ಪ್ರಾಣವನ್ನು ಬಲಿ ಪಡೆಯುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಅವ್ಯವಸ್ಥೆ ಸದ್ದು ಮಾಡಿದೆ. ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಕೆಲ ಪ್ರತಿಷ್ಠಿತ ಕಂಪನಿಗಳ ಮಾಲೀಕರು ಮಾತನಾಡಿದ್ದಾರೆ.
ರೈತರ ಆತ್ಮಹತ್ಯೆ ಗಂಭೀರ ಸಂಗತಿ
ಹಾವೇರಿ ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ 112 ರೈತರ ಆತ್ಮಹತ್ಯೆಗಳಾಗಿವೆ ಎಂಬ ವರದಿಗೆ ಸಂಬಂಧಿಸಿದಂತೆ ದಿನೇಶ್ ಗುಂಡೂರಾವ್, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಗುಡುಗಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ಹಾವೇರಿಯಲ್ಲಿ ಕಳೆದ 10 ತಿಂಗಳಲ್ಲಿ ಬೆಳೆಹಾನಿ ಹಾಗೂ ಸಾಲಬಾಧೆಗೆ 112 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸರ್ಕಾರದಿಂದ ರೈತರ ಉದ್ಧಾರ ಎಷ್ಟಾಗಿದೆ ಎಂಬುದಕ್ಕೆ ಈ ಆತ್ಮಹತ್ಯೆಗಳೇ ಸಾಕ್ಷಿ. ಇದು ಕೇವಲ ಒಂದು ಜಿಲ್ಲೆಯ ದುರಂತ ಕಥೆ. ಇನ್ನುಳಿದ ಜಿಲ್ಲೆಗಳ ಅಂಕಿ ಅಂಶ ತೆಗೆದರೆ ಬೊಮ್ಮಾಯಿ ಸರ್ಕಾರವೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

'ಕೇವಲ 10 ತಿಂಗಳ ಅವಧಿಯಲ್ಲಿ ಹಾವೇರಿಯ 112 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಗಂಭೀರವಾದ ಸಂಗತಿ. ಹಾವೇರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ. ಅಷ್ಟೆ ಏಕೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಇದೇ ಜಿಲ್ಲೆಯವರು. ಸಿಎಂ ಹಾಗೂ ಕೃಷಿ ಸಚಿವರು ತಾವು ಪ್ರತಿನಿಧಿಸುವ ಜಿಲ್ಲೆಯ ರೈತರನ್ನೇ ಉದ್ಧಾರ ಮಾಡದವರು, ರಾಜ್ಯದ ರೈತರ ಉದ್ಧಾರ ಮಾಡುತ್ತಾರೆಯೇ?' ಎಂದು ಪ್ರಶ್ನಿಸಿದ್ದಾರೆ.
ಸತತ ಬರಗಾಲದಿಂದ ನಲುಗುತ್ತಿದ್ದ ಹಾವೇರಿ ಜಿಲ್ಲೆಯಲ್ಲೀಗ ಅತಿವೃಷ್ಟಿ ತಲೆದೋರಿದೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ರೈತರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. 2022ರ ಆರಂಭದಿಂದ ಈ ವರೆಗೆ 112 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಭಾದೆ ಹಾಗೂ ಬೆಳೆಹಾನಿಗಳೇ ರೈತರ ಸಾವಿಗೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ ಇದೇ ಜಿಲ್ಲೆಯವರು. ಆ ಹಿನ್ನೆಲೆಯಲ್ಲಿ ಹೆಚ್ಚಾಗಿ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕಿದೆ.