Invest Karnataka 2025: ಬೆಂಗಳೂರಲ್ಲಿ ಬೃಹತ್ ಸಮಾವೇಶ ಉದ್ಘಾಟನೆ, ಹೇಗಿದೆ ಸಿದ್ಧತೆ! ಏನೇನಿರಲಿದೆ?
ಬೆಂಗಳೂರು, ಫೆಬ್ರವರಿ 10: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ 2025'ಕ್ಕೆ ಆತಿಥ್ಯ ವಹಿಸಲು ಕರ್ನಾಟಕ ರಾಜ್ಯ ಸರ್ಕಾರವು ಸಜ್ಜಾಗಿದೆ. ಫೆಬ್ರವರಿ 11 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಗಣ್ಯಾತಿಗಣ್ಯರು ಆಗಮಿಸಲಿದ್ದು, ನಾಳೆ ಮಂಗಳವಾರ (ಫೆ. 11) ಮಧ್ಯಾಹ್ನ ಕೇಂದ್ರ ಸಚಿವರ ರಾಜನಾಥ್ ಸಿಂಗ್ ಅವರು ಉದ್ಘಾಟಿಸಲಿದ್ದಾರೆ. ಇದರ ಸಿದ್ಧತೆಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಎಂಬಿ ಪಾಟೀಲ್ ಪರಿಶೀಲಿಸಿದರು. ಹಾಗಾದರೆ ಸಿದ್ಧತೆ ಹೇಗಿದೆ? 04 ದಿನಗಳ ಕಾಲ ಏನೆಲ್ಲ ಇರುತ್ತೆ? ವೇಳಾಪಟ್ಟಿ ಇಲ್ಲಿದೆ.
ಈ ಹೂಡಿಕೆದಾರರ ಸಮಾವೇಶವು, ಕರ್ನಾಟಕವನ್ನು ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ. ನಾವೀನ್ಯತೆ, ಕೈಗಾರಿಕಾ ಪ್ರಗತಿ ಮತ್ತು ಜಾಗತಿಕ ಪಾಲುದಾರಿಕೆಗೆ ರಾಜ್ಯದಲ್ಲಿನ ಸೌಲಭ್ಯಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಹೇಳಿದರು.

ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆ ಇದು ವೇದಿಕೆ ಒದಗಿಸಲಿದೆ. ವಿವಿಧ ಕ್ಷೇತ್ರಗಳ ದಿಗ್ಗಜರು ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಪ್ರಗತಿಯ ಭವಿಷ್ಯ ರೂಪಿಸಲು ತಮ್ಮ ಒಳನೋಟಗಳನ್ನು ನೀಡಲಿದ್ದಾರೆ ಎಂದರು.
ಸಮಾವೇಶ ಸ್ಥಳಕ್ಕೆ ಡಿಸಿಎಂ, ಸಚಿವರಿಂದ ಸಿದ್ಧತೆ ವೀಕ್ಷಣೆ
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ನಗರದ ಅರಮನೆ ಮೈದಾನಕ್ಕೆ ಸೋಮವಾರ ಭೇಟಿ ನೀಡಿದರು. ಮಂಗಳವಾರದಿಂದ ಆರಂಭವಾಗುವ ಜಾಗತಿಕ ಹೂಡಿಕೆದಾರರ ಸಮಾವೇಶ 2025 ಸಿದ್ಧತೆ ಪರಿಶೀಲಿಸಿದರು.

ಯಾವೊಂದು ಚಿಕ್ಕ ಲೋಪವಾಗದಂತೆ ಕಾರ್ಯಕ್ರಮ ನಡೆಯುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ರಾಜ್ಯದ ವರ್ಚಸ್ಸು ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ನಾನಾ ಇಲಾಖೆಗಳ ನಡುವೆ ಒಳ್ಳೆಯ ಸಮನ್ವಯತೆ ಇರಬೇಕು ಎಂದು ನಿರ್ದೇಶಿಸಿದರು.
ಸಮಾವೇಶದಲ್ಲಿ ಪ್ರದರ್ಶನ ತಾಣಗಳು, ಗೋಷ್ಠಿಗಳು ನಡೆಯಲಿರುವ ಸ್ಥಳಗಳು, ಮಾತುಕತೆ ಮತ್ತು ಒಡಂಬಡಿಕೆ ನಡೆಯಲಿರುವ ಸಭಾಂಗಣಗಳು, ಕಂಟ್ರಿ ಪೆವಿಲಿಯನ್, ಫುಡ್ ಕೋರ್ಟ್ ಮುಂತಾದ ಜಾಗಗಳನ್ನು ಖುದ್ದಾಗಿ ವೀಕ್ಷಿಸಿ, ಅಂತಿಮ ಕ್ಷಣಗಳ ಕೆಲವು ಸುಧಾರಣೆಗಳತ್ತ ಗಮನಹರಿಸಿ, ಸಲಹೆಗಳನ್ನು ನೀಡಿದರು.
ಜತೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರರು ಸಚಿವರಿಗೆ ಮಾಹಿತಿ ನೀಡಿದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಘನ ಉಪಸ್ಥಿತಿಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೂ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ 2025-30ರ ಅವಧಿಯ ನೂತನ ಕೈಗಾರಿಕಾ ನೀತಿ ಮತ್ತು ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಲು ಏಕಗವಾಕ್ಷಿ ಪೋರ್ಟಲ್ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸಮಾವೇಶದಲ್ಲಿ ಏನೆಲ್ಲ ಇರಲಿದೆ?
* ಫೆಬ್ರವರಿ 11ರಂದು ಉದ್ಘಾಟನೆ ಆಗಲಿದೆ.
* ಫೆಬ್ರುವರಿ 12 ರಂದು ಬೆಳಿಗ್ಗೆ 10:35ಕ್ಕೆ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಮತ್ತು ಸರ್ಕಾರ: ಅನಿಶ್ಚಿತ ಜಗತ್ತಿನಲ್ಲಿ ಡಿಜಿಟಲ್ ಕ್ಷಮತೆ ನಿರ್ಮಾಣ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
* ಮಧ್ಯಾಹ್ನ 12 ಗಂಟೆಗೆ ಕ್ಷಮತೆಯ ಮಾರ್ಗೋಪಾಯಗಳು: ಜಾಗತಿಕ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ ಸಾಧಿಸುವ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.
* ಮಧ್ಯಾಹ್ನ 2ಕ್ಕೆ ಭವಿಷ್ಯಕ್ಕೆ ನಾವೀನ್ಯತೆ (Innovating the Future) ಬಗ್ಗೆ ಸಂವಾದ ಜರುಗಲಿದೆ.
* ಸಂಜೆ 4.30ಕ್ಕೆ ಮುಂದಾಳತ್ವ: ಭಾರತದ ಭವಿಷ್ಯ ರೂಪಿಸುತ್ತಿರುವ ಯುವ ನಾವೀನ್ಯಕಾರರು ಬಗ್ಗೆ ತಜ್ಞರ ಸಮೂಹ ಚರ್ಚೆ ನಡೆಸಲಗುವುದು.
ಫೆಬ್ರುವರಿ 13 ರಂದು ಏನೆಲ್ಲ ಕಾರ್ಯಕ್ರಮ
* ಅಂದು ಬೆಳಗ್ಗೆ 11:05ಕ್ಕೆ ಕೃತಕ ಬುದ್ಧಿಮತ್ತೆ ಸೀಮಾರೇಖೆ: ದೈತ್ಯ ಜಿಗಿತದಿಂದ ಪಂಚದ ಪ್ರಭಾವಗಳವರೆಗೆ ವಿಷಯ ಕುರಿತು ಸಂವಾದ ಕಾರ್ಯಕ್ರಮ
* ಮಧ್ಯಾಹ್ನ 4:30ಕ್ಕೆ ವೈವಿಧ್ಯಮಯ ಪಥಗಳಿಂದ ಸಾಮಾನ್ಯ ಗುರಿಯವರೆಗೆ ವಿಷಯ ಕುರಿತು ಗುಂಪು ಚರ್ಚೆ
ಫೆಬ್ರುವರಿ 14ರ ಕಾರ್ಯಕ್ರಮ ವೇಳಾಪಟ್ಟಿ
* ಅಂದು ಬೆಳಿಗ್ಗೆ 10:30ಕ್ಕೆ ಪ್ರಕ್ಷುಬ್ಧತೆಯಲ್ಲಿ ಅಭಿವೃದ್ಧಿ ಸಾಧಿಸುವುದು: ದೇಶಗಳು ಶಾಶ್ವತ ಕ್ಷಮತೆ ಹೇಗೆ ನಿರ್ಮಿಸಬಹುದು ಎಂಬುದರ ಮೇಲೆ ಸಂವಾದ ಕಾರ್ಯಕ್ರಮ ನಡೆಯಲಿದೆ.
* ಬೆಂಗಳೂರು ಕ್ವೀನ್ ಸಿಟಿ, ರಾಜ್ಯದಲ್ಲಿ ಬಂಡವಾಳ ಹೂಡಿಕೆ, ಇಲ್ಲಿನ ಸಂಪನ್ಮೂಲ್ ಬಗ್ಗೆ ತಿಳಿಸಲಾಗುವುದು. ಕರ್ನಾಟಕ ಸರ್ಕಾರದ ಜೊತೆಗೆ ವಿದೇಶಿ ಕಂಪನಿಗಳು ಒಪ್ಪಂದ ಮಾಡಿಕೊಳ್ಳಲಿವೆ. ಕರ್ನಾಟಕ ಕೈಗಾರಿಕಾ ನೀತಿ ಜಾರಿಗೆ ತರಲಾಗುತ್ತದೆ. ನೀವು ಸಮಾವೇಶದ ಕಾರ್ಯಕ್ರಮಗಳ ವಿವರ ತಿಳಿಯಲು ಇಲ್ಲಿನ ಲಿಂಕ್ ಗೆ https://investkarnataka.co.in/gim2025/events-schedule/ ಭೇಟಿ ನೀಡಿ.












Click it and Unblock the Notifications