Ginger price in karnataka: ಟೊಮೆಟೊ, ಗೋಧಿ ಹಿಟ್ಟು, ಮೆಣಸಿನಕಾಯಿ ಬಳಿಕ ಗಗನಕ್ಕೇರಿದ ಶುಂಠಿ ಬೆಲೆ: ಕೆಜಿಗೆ ಎಷ್ಟು ಗೊತ್ತೇ?
ಬೆಂಗಳೂರು, ಜುಲೈ 21: ಟೊಮೆಟೊ, ಗೋಧಿ ಹಿಟ್ಟು, ಹಸಿರು ಮೆಣಸಿನಕಾಯಿ ಬಳಿಕ ಶುಂಠಿ ಬೆಲೆ ಗಗಣಕ್ಕೇರಿದೆ. ಮಳೆಗಾಲದ ಸಮಯದಲ್ಲಿ ಶುಂಠಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿರುವುದು ಸಾಮಾನ್ಯ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಶುಂಠಿ ಬೆಲೆ ಐತಿಹಾಸಿಕ ಏರಿಕೆ ಕಂಡಿದೆ.
ರಾಜ್ಯದಲ್ಲಿ ಟೊಮೆಟೊ ದರವು 200 ರುಪಾಯಿಗೆ ತಲುಪಿದೆ. ಗೋಧಿ ಹಿಟ್ಟಿನ ಬೆಲೆಯು 320 ಕ್ಕೆ ತಲುಪಿದೆ. ಹಸಿರು ಮೆಣಸಿನಕಾಯಿ ಬೆಲೆಯು 200 ರೂಪಾಯಿಗೆ ತಲುಪಿರುವುದು ಜನರ ಜೇಬಿಗೆ ಕತ್ತರಿ ಹಾಕಿವೆ. ಇದೇ ಸಂದರ್ಭದಲ್ಲಿ ಶುಂಠಿ ದರವು ಸಹ ಭಾರೀ ಏರಿಕೆ ಕಂಡಿದೆ.

ಕರ್ನಾಟಕದ ಮುಕ್ತ ಮಾರುಕಟ್ಟೆಯಲ್ಲಿ ಒಂದು ಕಿಲೋ ಶುಂಠಿ ಬೆಲೆ ಈಗ 300 ರಿಂದ 400 ರೂಗಳಿಗೆ ದೊರೆಯುತ್ತಿದೆ. ಭಾರತದಲ್ಲಿ ಶುಂಠಿ ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ ಸಹ ಶುಂಠಿ ಬೆಲೆಯಲ್ಲಿ ವಿಪರೀತ ಏರಿಕೆ ಕಂಡಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ, ಅಂದರೆ 2022ರಲ್ಲಿ, 60 ಕೆಜಿ ಶುಂಠಿ ಚೀಲವು 2,000 ರಿಂದ 3,000 ರೂ.ವರೆಗೆ ಮಾರಾಟವಾಗುತ್ತಿತ್ತು. ಇದೀಗ 60 ಕೆಜಿ ಶುಂಠಿ ಚೀಲವು 11,000 ರೂ.ಗಳಿಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ.
ಮೈಸೂರು ಮತ್ತು ಮಲೆನಾಡು ಜಿಲ್ಲೆಗಳ ಶುಂಠಿ ಬೆಳೆಗಾರರಿಗೆ ಈ ಬೆಲೆ ಏರಿಕೆ ವರದಾನವಾಗಿ ಪರಿಣಮಿಸಿದೆ. ಕಳೆದ ಹಂಗಾಮಿನ ಕಟಾವಿನ ಲಾಭವನ್ನು ಬೆಳೆಗಾರರಿಗೆ ಈಗ ಪಡೆಯುತ್ತಿದ್ದಾರೆ. ಹೊಸದಾಗಿ ಕೊಯ್ಲು ಮಾಡಿದ ದಾಸ್ತಾನು ಕೂಡ ಮಾರುಕಟ್ಟೆಯಲ್ಲಿ ದಾಖಲೆಯ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಕೆಆರ್‌ಆರ್‌ಎಸ್‌ನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಹುಣಸೂರು ತಾಲೂಕಿನ ಶುಂಠಿ ಬೆಳೆಗಾರ ಹೊಸೂರು ಕುಮಾರ್ ಅವರ ಪ್ರಕಾರ, ಶುಂಠಿ ಬೆಲೆಯಲ್ಲಿನ ಈ ಏರಿಕೆ ಕಳೆದ ದಶಕದಲ್ಲಿಯೇ ಅತ್ಯಧಿಕವಾಗಿದೆ. ಇದೊಂದು ಐತಿಹಾಸಿಕ ಮೈಲುಗಲ್ಲಾಗಿದೆ.
ಶುಂಠಿಯ ಬೆಲೆಗಳು ದಾಖಲೆಯ ಏರಿಕೆಯನ್ನು ಮುಟ್ಟುವುದರೊಂದಿಗೆ, ಶುಂಠಿಯ ಕಳ್ಳತನದ ವರದಿಗಳು ದೇಶಾದ್ಯಂತ ಕೇಳಿಬಂದಿವೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕೇರಳ ಮತ್ತು ಕರ್ನಾಟಕದ ರೈತರು ಕಳ್ಳರ ಕಾಟವನ್ನು ಎದುರಿಸುತ್ತಿದ್ದಾರೆ. ಕರ್ನಾಟಕದ ರೈತರೊಬ್ಬರ ಹೊಲದಲ್ಲಿ 1.8 ಲಕ್ಷ ಮೌಲ್ಯದ ಶುಂಠಿ ಕಳ್ಳತನವಾಗಿದೆ. ಹೊರಳವಾಡಿಯ ಮತ್ತೊಬ್ಬ ರೈತ ತನ್ನ ಹೊಲದಲ್ಲಿ 10 ಸಾವಿರ ಮೌಲ್ಯದ ಶುಂಠಿ ಕಳ್ಳತನವಾಗಿರುವ ಬಗ್ಗೆ ಬಿಳಿಗೆರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳ್ಳತನದಿಂದ ನಷ್ಟವನ್ನು ಭರಿಸಲಾಗದ ರೈತರು ತಮ್ಮ ಜಮೀನಿನಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಬಗ್ಗೆ ವರದಿಯಾಗಿದೆ.
2022 ರ ಆರ್ಥಿಕ ವರ್ಷದಲ್ಲಿ ಮಧ್ಯಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಶುಂಠಿಯನ್ನು ಉತ್ಪಾದಿಸುತ್ತದೆ ಎಂದು ವರದಿಯಾಗಿದೆ. ಅದರ ನಂತರ ಕರ್ನಾಟಕವು ಶುಂಠಿ ಬೆಲೆಯಲ್ಲಿ ಎರಡನೇ ಸ್ಥಾನದಲ್ಲಿದೆ.












Click it and Unblock the Notifications