ಗೌರಿ ಲಂಕೇಶ್ ಹತ್ಯೆ ಆರೋಪಿ ಕಲಬುರ್ಗಿ ಕೊಲೆಯಲ್ಲೂ ಭಾಗಿ?
ಬೆಂಗಳೂರು, ಜೂನ್ 7: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಪುಣೆ ಮೂಲದ ಆರೋಪಿ ವಿಚಾರವಾದಿ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯಲ್ಲೂ ಭಾಗಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.
2015ರ ಆಗಸ್ಟ್ 30ರಂದು ಧಾರವಾಡದಲ್ಲಿರುವ ಕಲಬುರ್ಗಿ ಅವರ ಮನೆಯ ಬಾಗಿಲು ಬಡಿದು, ಬಳಿಕ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಇಬ್ಬರು ಆರೋಪಿಗಳ ಪೈಕಿ ಪುಣೆಯ ಅಮೋಲ್ ಕಾಳೆ (37) ಒಬ್ಬನಾಗಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕಲಬುರ್ಗಿ ಅವರು ಕಲ್ಯಾಣ ನಗರದಲ್ಲಿ ವಾಸವಿದ್ದ ಮನೆಗೆ ಬಂದಿದ್ದ ಇಬ್ಬರು ಅಪರಿಚಿತರು, ಕಲಬುರ್ಗಿ ಅವರೊಂದಿಗೆ ಕೆಲ ಹೊತ್ತು ಮಾತನಾಡಿದ್ದರು. ಬಂದಿದ್ದವರು ಕಲಬುರ್ಗಿ ಅವರ ವಿದ್ಯಾರ್ಥಿಗಳು ಇರಬೇಕೆಂದು ಅವರ ಪತ್ನಿ ಉಮಾದೇವಿ ಅವರು ಮನೆಯ ಒಳಭಾಗಕ್ಕೆ ಹೋದರು. ಆಗ ಆರೋಪಿಗಳಲ್ಲಿ ಒಬ್ಬಾತ ಕಲಬುರ್ಗಿ ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದ.

ಈ ಆರೋಪಿಗಳಲ್ಲಿ ಒಬ್ಬನೆಂದು ಶಂಕಿಸಲಾಗಿರುವ ಅಮೋಲ್ ಕಾಳೆ ಈಗ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳದಿಂದ ವಿಚಾರಣೆ ಎದುರಿಸುತ್ತಿದ್ದಾನೆ.
ಕಲಬುರ್ಗಿ ಅವರನ್ನು ನೋಡಲು ಬಂದಿದ್ದವರಲ್ಲಿ ಕಾಳೆ ಕೂಡ ಒಬ್ಬನೆಂದು ಕಲಬುರ್ಗಿ ಅವರ ಕುಟುಂಬದ ಆಪ್ತರೊಬ್ಬರು ಗುರುತಿಸಿದ್ದಾರೆ. ಆದರೆ, ಇದು ಖಚಿತವಾಗಲು ನಮಗೆ ಇನ್ನೂ ಹೆಚ್ಚಿನ ಸಾಕ್ಷ್ಯಗಳು ಬೇಕು. ಕಲಬುರ್ಗಿ ಅವರ ಹತ್ಯೆ ಪ್ರಕರಣದಲ್ಲಿ ಪ್ರಾರಂಭಿಕ ತನಿಖೆ ನಡೆಸಿದ ಅಪರಾಧ ತನಿಖಾ ದಳದ ಅಧಿಕಾರಿಗಳನ್ನು ಈ ಸಂಬಂಧ ಭೇಟಿ ಮಾಡಿ ಮಾಹಿತಿ ಪಡೆಯುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.
ಕಾಳೆಯ ಅವರ ಆಪ್ತ ಸಹವರ್ತಿ ನಿಹಾಲ್ ಅಲಿಯಾಸ್ ದಾದಾ ನಾಪತ್ತೆಯಾಗಿದ್ದು, ಆತ ಗೌರಿ ಲಂಕೇಶ್ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಶಂಕಿಸಲಾಗಿದೆ. ಆತನ ಪತ್ತೆಗಾಗಿ ಎಸ್‌ಐಟಿ ತೀವ್ರ ಹುಡುಕಾಟ ನಡೆಸಿದೆ.












Click it and Unblock the Notifications