ಕರ್ನಾಟಕದ ರೈಲು ಮಾರ್ಗಗಳಿಗೆ ಸುರಕ್ಷತಾ ಕವಚ: ಭಾರತೀಯ ರೈಲ್ವೆಯ ಮಹತ್ವದ ಯೋಜನೆ
ರಾಜ್ಯದಲ್ಲಿ ರೈಲು ಅಪಘಾತಗಳನ್ನು ತಡೆಗಟ್ಟುವ ಉದ್ದೇದಿಂದ ಭಾರತೀಯ ರೈಲ್ವೆ ಇಲಾಖೆ 'ಕವಚ' ಎಂಬ ಸ್ವದೇಶಿ ಸ್ವಯಂಚಾಲಿತ ರೈಲು ಸುರಕ್ಷತೆಯ ವ್ಯವಸ್ಥೆಯನ್ನು ಹಂತಹಂತವಾಗಿ ಸ್ಥಾಪಿಸಲು ಮುಂದಾಗಿದೆ. ಪ್ರಾಯೋಗಿಕ ಪರೀಕ್ಷೆ ಯಶಸ್ವಿ ಆಗಿರುವ ಹಿನ್ನೆಲೆಯಲ್ಲಿ ಪ್ರಮುಖ ರೈಲು ಮಾರ್ಗಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಭರದಿಂದ ಸಿದ್ಧತೆ ನಡೆಯುತ್ತಿದೆ.
ಪ್ರಾಥಮಿಕ ಹಂತದಲ್ಲಿ ಬೆಂಗಳೂರು-ಮೈಸೂರು (ಸುಮಾರು 159 ಕಿ.ಮೀ), ಮೈಸೂರು-ದೇವನಹಳ್ಳಿ ಬೈಪಾಸ್ (ಸುಮಾರು 137 ಕಿ.ಮೀ), ಯಶವಂತಪುರ-ಧರ್ಮಪುರಿ ಜಂಕ್ಷನ್ (ಸುಮಾರು 163 ಕಿ.ಮೀ), ಯಶವಂತಪುರ-ಅರಸೀಕೆರೆ (ಸುಮಾರು 98 ಕಿ.ಮೀ) ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ 'ಕವಚ' ಅಳವಡಿಸುವ ಯೋಜನೆ ಅಳವಡಿಸಲು ರೂಪಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆ ಗರಿಷ್ಟ ಆದ್ಯತೆ ನೀಡುತ್ತಿರುವ ರೈಲ್ವೆ ಇಲಾಖೆಯು ಸುಮಾರು3,692 ಕಿಲೋಮೀಟರ್ ಉದ್ದದ ರೈಲು ಹಳಿಗಳಲ್ಲಿ ಹೊಸ ಸುರಕ್ಷತಾ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ರೈಲ್ವೆಯು ಒಟ್ಟು ₹1,794.5 ಕೋಟಿ ವೆಚ್ಚ ಮಾಡಲಿದೆ ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಏನಿದು ಭಾರತೀಯ ರೈಲ್ವೆಯ 'ಕವಚ'?
'ಕವಚ' ಎಂಬುದು ಭಾರತೀಯ ರೈಲ್ವೆಯೇ ಅಭಿವೃದ್ಧಿಪಡಿಸಿರುವ ಸ್ವದೇಶಿ ರೈಲು ಸುರಕ್ಷತಾ ವ್ಯವಸ್ಥೆಯ ಕವಚವಾಗಿದೆ. ಒಂದೇ ಹಳಿಯಲ್ಲಿ ಎರಡು ರೈಲುಗಳು ಮುಖಾಮುಖಿಯಾಗುವ, ಸಿಗ್ನಲ್ ಉಲ್ಲಂಘನೆಯಾದಾಗ ಅಥವಾ ಹಿಂದಿನಿಂದ ಡಿಕ್ಕಿ ಹೊಡೆಯುವ ಸಂದರ್ಭದಲ್ಲಿ ಇದು ತಡೆಯುತ್ತದೆ. ರೈಲು ಚಾಲಕರು ಕೆಂಪು ಸಿಗ್ನಲ್ ಅನ್ನು ಗಮನಿಸದೇ ಮುಂದುವರಿದರೂ, ಯಾರ ಹಸ್ತಕಷೇಪವಿಲ್ಲದೆಯೇ ಸ್ವಯಂಚಾಲಿತವಾಗಿ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸುತ್ತದೆ. ಇದು ಭಾರತೀಯ ರೈಲ್ವೆಯನ್ನು ವಿಶ್ವದರ್ಜೆಯ ಸುರಕ್ಷತಾ ಮಾನದಂಡಕ್ಕೆ ಕೊಂಡುಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದೆ.
ರೈಲುಗಳ ನಡುವಿನ ಸುರಕ್ಷಿತ ಅಂತರ ಕಾಪಾಡುವುದು ಗರಿಷ್ಟ ವೇಗವನ್ನು ನಿಯಂತ್ರಿಸುವುದು ಹಾಗೂ ಚಾಲಕರಿಗೆ ಅಗತ್ಯ ಎಚ್ಚರಿಕೆ ನೀಡುವುದು ಇದರ ಮುಖ್ಯ ವೈಶಿಷ್ಟ್ಯಗಳಾಗಿವೆ.
ಎರಡು ಹಂತಗಳಲ್ಲಿ ಬೃಹತ್ ಕಾಮಗಾರಿ ಯೋಜನೆ ಜಾರಿ
ಯೋಜನೆ ಮೊದಲ ಹಂತ: ಎರಡು ಹಂತಗಳಲ್ಲಿ ಅನುಷ್ಟಾನಗೊಳ್ಳಲಿರುವ ರೈಲ್ವೆ ಇಲಾಖೆಯ ಈ ಯೋಜನೆ ಮೊದಲ ಹಂತದಲ್ಲಿ ಒಟ್ಟು 1,568 ಕಿಲೋಮೀಟರ್ ರೈಲು ಮಾರ್ಗದ ಅಭಿವೃದ್ದಿ ಕಾರ್ಯ ನಡೆಯಲಿದೆ. ಇದರಲ್ಲಿ ಮೈಸೂರು-ಬಳ್ಳಾರಿ, ಹಾಸನ-ಮೈಸೂರು, ತುಮಕೂರು-ಅರಸೀಕೆರೆ, ಅರಸೀಕೆರೆ-ಯಶವಂತಪುರ ಮತ್ತು ಧರ್ಮಪುರಿ-ಬೆಂಗಳೂರು-ಜೋಲಾರಪೇಟೆ ರೈಲು ಮಾರ್ಗಗಳ ಕಾಮಗಾರಿಗಳು ಪ್ರಮುಖವಾಗಿ ಸೇರಿವೆ.
ಯೋಜನೆ ಎರಡನೇ ಹಂತ: ಸುರಕ್ಷಿತ ರೈಲು ಸಂಚಾರಕ್ಕಾಗಿ ರೂಪಿಸಲಾಗಿರುವ 'ಕವಚ' ವ್ಯವಸ್ಥೆಯನ್ನು ಈಗ ಎರಡನೇ ಹಂತದಲ್ಲಿ ವಿಸ್ತರಿಸಲಾಗುತ್ತಿದೆ. ಈ ಯೋಜನೆಯಡಿ ಹೊಸಪೇಟೆ-ಧರ್ಮಾವರಂ, ಗುಂತಕಲ್-ಧರ್ಮಾವರಂ, ಯಶವಂತಪುರ-ಬೆಂಗಳೂರು ನಗರ ಹಾಗೂ ಮೈಸೂರು-ಬೆಂಗಳೂರು ನಡುವಿನ ದಟ್ಟಣೆ ಇರುವ ಮಾರ್ಗಗಳು ಸೇರಿದಂತೆ ಇನ್ನುಳಿದ 2,124 ಕಿ.ಮೀ ದೂರದ ರೈಲ್ವೆ ಹಳಿಗಳಲ್ಲಿ ಅತ್ಯಾಧುನಿಕ ಸುರಕ್ಷತಾ ಕವಚದ ಅಳವಡಿಕೆ ಪ್ರಕ್ರಿಯೆ ಭರದಿಂದ ಸಾಗಿದೆ.
ಪ್ರಸ್ತುತ ಕೈಗೆತ್ತಿಕೊಳ್ಳಲಾಗಿರುವ ಯೋಜನೆ ಪೂರ್ಣಗೊಂಡರೆ, ನಮ್ಮ ರಾಜ್ಯದ ಪ್ರಮುಖ ರೈಲು ಹಳಿಗಳಲ್ಲಿ ಸುರಕ್ಷತೆ ದುಪ್ಪಟ್ಟಾಗಲಿದೆ. ಹಳಿ ತಪ್ಪುವುದು ಸೇರಿದಂತೆ ಯಾವುದೇ ರೀತಿಯ ರೈಲು ಅಪಘಾತಗಳ ಸಾಧ್ಯತೆಯನ್ನು ಇದು ಬಹುತೇಕ ಇಲ್ಲದಂತೆ ಮಾಡಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಮ್ಮೆಯಿಂದ ಹೇಳಿದ್ದಾರೆ. ಸುರಕ್ಷಿತ ಪ್ರಯಾಣದತ್ತ ಭಾರತೀಯ ರೈಲ್ವೆ ಇಲಾಖೆ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ.














Click it and Unblock the Notifications