ಮುನಿಸು ಮರೆತು ಕೊನೆಗೂ ಒಂದಾದ ಜನಾರ್ದನ ರೆಡ್ಡಿ-ರಾಮುಲು; ಖಡಕ್ ಸಂದೇಶ ಕೊಟ್ಟ ದೋಸ್ತಿಗಳು
ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕುಚಿಕುಗಳಂತೆ ಬಿಜೆಪಿಯಲ್ಲಿ ಮಿಂಚುತ್ತಿದ್ದ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದ ಮುನಿಸಿಕೊಂಡು ದೂರಾಗಿದ್ದು ಗೊತ್ತೇ ಇದೆ. ಇನ್ನು ಬಳ್ಳಾರಿ ರಾಜಕಾರಣದಲ್ಲಿ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಒಂದಾಗಬೇಕು ಎಂಬುದು ಎಲ್ಲರ ಆಸೆಯಾಗಿತ್ತು. ಈ ಆಸೆ ಕೊನೆಗೂ ಈಡೇರಿದ್ದು, ಇಬ್ಬರೂ ನಾಯಕರು ಮುನಿಸು ಮರೆತು ಒಂದಾಗಿ ಕಾಣಿಸಿಕೊಂಡಿದ್ದಾರೆ. ಗಂಗಾವತಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಈ ಅಪರೂಪದ ಸನ್ನಿವೇಶ ನಡೆದಿದೆ.
ಗಂಗಾವತಿಯ ರಾಯಲ್ ರಿಚ್ ಕೌಂಟಿ ಹೋಟೆಲ್‌ನಲ್ಲಿ ನಡೆದ ಬಳ್ಳಾರಿ, ಕೊಪ್ಪಳ, ವಿಜಯನಗರ ಮತ್ತು ರಾಯಚೂರು ಜಿಲ್ಲೆಗಳ ವಿಭಾಗ ಮಟ್ಟದ ಸಂಘಟನಾತ್ಮಕ ಸಭೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಗಳ ಕುರಿತ ಸಭೆಯಲ್ಲಿ ಶ್ರೀರಾಮುಲು-ರೆಡ್ಡಿ ಒಂದಾಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲೇ ಮತ್ತೆ ಇಬ್ಬರೂ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದೇ ವೇಳೆ ಅವರು ಒಗ್ಗಟ್ಟು ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾರೆ.

ಕಳೆದ ಉಪಚುನಾವಣೆ ವೇಳೆ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಹಾಗೂ ಸಂಸದ ಬಿ.ಶ್ರೀರಾಮುಲು ನಡುವೆ ವೈಮನಸ್ಸು ಮೂಡಿತ್ತು. ಬಳಿಕ ರಾಮುಲು ತನ್ನ ದೋಸ್ತಿ ವಿರುದ್ಧವೇ ತೊಡೆ ತಟ್ಟಿದ್ದರು.ಸಂಡೂರು ಉಪಚುನಾವಣೆಯ ಫಲಿತಾಂಶದ ಪರಸ್ಪರ ವಾಗ್ವಾದ ಉಂಟಾಗಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ದೋಸ್ತಿಗೆ ಗುಡ್‌ಬೈ ಹೇಳಿದ್ದರು. ಭಾನುವಾರ ನಡೆದ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಬ್ಬರ ಕೈಗಳನ್ನು ಎತ್ತಿ ಹಿಡಿದು, ಹಿಂದೆ ಚಿಕ್ಕಪುಟ್ಟ ಮನಸ್ತಾಪಗಳನ್ನು ಬದಿಗಿಡುವಂತೆ ಒತ್ತಾಯಿಸಿದರು. ಅಲ್ಲದೆ ಕಾರ್ಯಕ್ರಮದಲ್ಲಿ ರೆಡ್ಡಿ ಹಾಗೂ ಶ್ರೀರಾಮುಲು ಅಕ್ಕಪಕ್ಕದಲ್ಲೇ ಕುಳಿತಿದ್ದರು. ಪಕ್ಷದ ಕಾರ್ಯಕ್ರಮದಲ್ಲೇ ಇಬ್ಬರೂ ಒಂದಾಗಿ ಅಚ್ಚರಿ ಮೂಡಿಸಿದ್ದು, "ನಾವಿಬ್ಬರೂ ಒಂದೇ" ಎಂಬ ಒಗ್ಗಟ್ಟಿನ ಸಂದೇಶ ಕೊಟ್ಟಿದ್ದಾರೆ.
ಯಾವುದೇ ಮುನಿಸಿಲ್ಲ ಎಂದ ರೆಡ್ಡಿ-ರಾಮುಲು!
ಜನಾರ್ದನ ರೆಡ್ಡಿ ಮಾತನಾಡಿ, ನಮ್ಮ ಮಧ್ಯೆ ಯಾರಾದರೂ ಮಧ್ಯಸ್ಥಿಕೆ ಮಾಡಲು ಪ್ರಯತ್ನಿಸಿದರೆ ಅವರಂತಹ ಮೂರ್ಖರು ಇನ್ನಿಲ್ಲ. ನಮಗೆ ಸಂಧಾನದ ಅಗತ್ಯವೇ ಇಲ್ಲ. ನಮ್ಮದು ಸ್ನೇಹದ ಜಗಳ, ಇದರ ಲಾಭ ಪಡೆಯಲು ಪ್ರಯತ್ನಿಸಿದವರಿಗೆ ಏನೂ ಸಿಗಲ್ಲ ಎಂದಿದ್ದಾರೆ. ಶ್ರೀರಾಮುಲು ಕೂಡ ಪ್ರತಿಕ್ರಿಯಿಸಿ, ಪಕ್ಷದ ವಿಚಾರ ಬಂದಾಗ ನಾವು ಮಾದರಿ ನಾಯಕರಾಗಬೇಕು. ಕಾಂಗ್ರೆಸ್ಸಿಗರ ಹರಕೆಯ ಕುರಿಯಾಗಬಾರದು. ಪಕ್ಷ ಸಂಘಟನೆಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಜನಾರ್ಧನ ರೆಡ್ಡಿ ಅವರೊಂದಿಗೆ ಯಾವುದೇ ಮುನಿಸು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ವಿಚಾರವಾಗಿ ಇಬ್ಬರೂ ಕಿತ್ತಾಡಿಕೊಂಡಿದ್ದು ನಿಜವೇ ಆದರೂ, ರೆಡ್ಡಿ-ರಾಮುಲು ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕಲಹಗಳೂ ಇದ್ದವು ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರೂ ದೂರವಾಗಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ದಿಢೀರನೆ ಇಬ್ಬರೂ ಒಂದಾಗುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ದೋಸ್ತಿಗಳು ಮತ್ತೆ ಒಂದಾಗಿರುವುದರ ಹಿಂದೆ ದೊಡ್ಡ ಸಂದೇಶವೇ ಇದೆ ಎಂದು ಹೇಳಲಾಗುತ್ತಿದೆ. ಅದು ಮುಂದಿನ ದಿನಗಳಲ್ಲಿ ತಿಳಿಯಲಿದೆ.












Click it and Unblock the Notifications