ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ
ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತೋರಿದ ಸಮಯಪ್ರಜ್ಞೆ ಹಾಗೂ ಕಾಳಜಿಯಿಂದಾಗಿ ಬಡ ವಿದ್ಯಾರ್ಥಿನಿಯೊಬ್ಬಳ ಭವಿಷ್ಯ ಬೆಳಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗೈರಾಗಿ, ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಖುದ್ದಾಗಿ ತಮ್ಮ ಕಾರಿನಲ್ಲಿಯೇ ಕರೆತಂದು ಪರೀಕ್ಷೆ ಬರೆಸುವ ಮೂಲಕ ಮಾನವೀಯತೆ ಹಾಗೂ ಕರ್ತವ್ಯನಿಷ್ಠೆಯನ್ನು ಮೆರೆದಿದ್ದಾರೆ.
ಮುಂಡರಗಿ ತಾಲ್ಲೂಕಿನ ಪೇಠಾಲೂರು ಗ್ರಾಮದ ವಿದ್ಯಾರ್ಥಿನಿ ಪಲ್ಲವಿ ಹಳ್ಳಿಕೇರಿ ಮಾರ್ಚ್ 18ರಂದು ನಡೆದಿದ್ದ ಪ್ರಥಮ ಭಾಷೆ ಕನ್ನಡ ಪರೀಕ್ಷೆಗೆ ಹಾಜರಾಗಿದ್ದಳು. ಆದರೆ, ಸೋಮವಾರ ನಡೆದ ವಿಜ್ಞಾನ ವಿಷಯದ ಪರೀಕ್ಷೆಗೆ ಆಕೆ ಗೈರಾಗಿದ್ದಳು. ಬಡತನದ ಬೇಗೆಯಿಂದಾಗಿ ಆಕೆ ಪರೀಕ್ಷೆ ಬರೆಯುವ ಬದಲು, ಕುಟುಂಬಕ್ಕೆ ಆಸರೆಯಾಗಲು ದ್ರಾಕ್ಷಿ ತೋಟವೊಂದರಲ್ಲಿ ದಿನಗೂಲಿ ಕೆಲಸಕ್ಕೆ ತೆರಳಿದ್ದಳು.

ಪರೀಕ್ಷಾ ಕರ್ತವ್ಯದ ಮೇರೆಗೆ ಮುಂಡರಗಿ ಪಟ್ಟಣದ ವಿ.ಜಿ. ಲಿಂಬಿಕಾಯಿ ಶಾಲೆಗೆ ಪರಿಶೀಲನೆಗೆ ತೆರಳಿದ್ದ ಬಿಇಒ ಗಂಗಾಧರ ಅಣ್ಣಿಗೇರಿ ಅವರು ಹಾಜರಾತಿ ಪುಸ್ತಕವನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಪಲ್ಲವಿ ಎಂಬ ವಿದ್ಯಾರ್ಥಿನಿ ಗೈರಾಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ವಿಚಾರಿಸಿದಾಗ, ಆಕೆಯ ಕೌಟುಂಬಿಕ ಹಿನ್ನೆಲೆ ಹಾಗೂ ಬಡತನದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆಕೆ ಪರೀಕ್ಷೆ ಬರೆಯದೆ ದ್ರಾಕ್ಷಿ ತೋಟದಲ್ಲಿ ಕೂಲಿ ಮಾಡುತ್ತಿದ್ದಾಳೆ ಎಂಬ ವಿಷಯ ತಿಳಿದ ಕೂಡಲೇ ಅಧಿಕಾರಿ ಗಂಗಾಧರ ಅಣ್ಣಿಗೇರಿ ಒಂದು ಕ್ಷಣವೂ ತಡಮಾಡಲಿಲ್ಲ.
ಶಿಕ್ಷಣದ ಮಹತ್ವವನ್ನು ಅರಿತಿದ್ದ ಬಿಇಒ ಅವರು, ನೇರವಾಗಿ ತಮ್ಮ ಇಲಾಖೆಯ ವಾಹನದಲ್ಲಿ ವಿದ್ಯಾರ್ಥಿನಿ ಕೆಲಸ ಮಾಡುತ್ತಿದ್ದ ದ್ರಾಕ್ಷಿ ತೋಟದತ್ತ ಧಾವಿಸಿದರು. ಸುಡು ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಪಲ್ಲವಿಯನ್ನು ಕಂಡ ಅವರು, ಆಕೆಗೆ ಮತ್ತು ಆಕೆಯ ಪೋಷಕರಿಗೆ ಶಿಕ್ಷಣದ ಪ್ರಾಮುಖ್ಯತೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಹತ್ವ ಹಾಗೂ ಭವಿಷ್ಯದ ಅವಕಾಶಗಳ ಬಗ್ಗೆ ತಿಳಿಹೇಳಿದರು. ವಿದ್ಯಾರ್ಥಿನಿ ಹಾಗೂ ಪೋಷಕರ ಮನವೊಲಿಸುವಲ್ಲಿ ಯಶಸ್ವಿಯಾದ ಬಿಇಒ, ಸಮಯ ವ್ಯರ್ಥ ಮಾಡದೆ ತಮ್ಮದೇ ಸರ್ಕಾರಿ ಕಾರಿನಲ್ಲಿ ಪಲ್ಲವಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದರು.
ಅಧಿಕಾರಿಯ ಈ ತ್ವರಿತ ನಡೆಯಿಂದಾಗಿ ಪಲ್ಲವಿ ವಿಜ್ಞಾನ ಪರೀಕ್ಷೆಯನ್ನು ಬರೆಯಲು ಸಾಧ್ಯವಾಯಿತು. ಶಿಕ್ಷಣ ಇಲಾಖೆಯು 'ಶೂನ್ಯ ಡ್ರಾಪೌಟ್' (Zero Dropout) ಗುರಿಯನ್ನು ಹೊಂದಿದ್ದು, ಪ್ರತಿಯೊಂದು ಮಗುವಿಗೂ ಕಡ್ಡಾಯ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಬಡತನ, ತಿಳುವಳಿಕೆಯ ಕೊರತೆಯಿಂದಾಗಿ ಇಂದಿಗೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲಕಾರ್ಮಿಕ ಪದ್ಧತಿಗೆ ತಳ್ಳಲ್ಪಡುತ್ತಿದ್ದಾರೆ. ಇಂತಹ ಸವಾಲುಗಳ ನಡುವೆಯೂ, ಗಂಗಾಧರ ಅಣ್ಣಿಗೇರಿ ಅವರಂತಹ ಅಧಿಕಾರಿಗಳು ತೋರುವ ಈ ರೀತಿಯ ವಿಶೇಷ ಕಾಳಜಿ ಮತ್ತು ಇಚ್ಛಾಶಕ್ತಿಯಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.
ಕೇವಲ ಕಚೇರಿಯಲ್ಲಿ ಕುಳಿತು ಆದೇಶ ನೀಡುವ ಅಧಿಕಾರಿಗಳ ನಡುವೆ, ಫೀಲ್ಡ್‌ಗಿಳಿದು, ಒಬ್ಬ ಬಡ ವಿದ್ಯಾರ್ಥಿನಿಯ ಭವಿಷ್ಯ ಹಾಳಾಗಬಾರದು ಎಂಬ ಕಳಕಳಿಯಿಂದ ಬಿಇಒ ಗಂಗಾಧರ ಅಣ್ಣಿಗೇರಿ ಅವರು ಮಾಡಿದ ಈ ಕಾರ್ಯ ಈಗ ಎಲ್ಲೆಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.












Click it and Unblock the Notifications