ಬೆಳಗಾವಿ ಚಳಿಗಾಲ ಅಧಿವೇಶನ: ಪೊಲೀಸರಿಗೆ ಜಿ.ಪರಮೇಶ್ವರ ಮಹತ್ವದ ಸೂಚನೆ
ಬೆಂಗಳೂರು, ಡಿಸೆಂಬರ್ 04: ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 9ರಿಂದ ಡಿ. 20ರವರೆಗೆ ನಡೆಯುವ ಚಳಿಗಾಲ ಅಧಿವೇಶನದ ಹಿನ್ನೇಲೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳುವಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಬುಧವಾರ ಮಧ್ಯಾಹ್ನ ವಿಧಾನಸೌಧದ 313 ಉಪಸಮಿತಿ ಕೊಠಡಿಯಲ್ಲಿ ಗೃಹ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ರೀತಿಯ ಸಣ್ಣ ಅಹಿಕರ ಘಟನೆ ನಡೆಯದಂತೆ ಇಲಾಖೆಯ ಮೇಲೆ ಆರೋಪಗಳು ಬರುತ್ತವೆ. ಗ್ಯಾಲರಿ ಪಾಸ್, ಸುವರ್ಣಸೌಧಕ್ಕೆ ಭೇಟಿ ನೀಡುವವರ ಮೇಲೆ ನಿಗಾವಹಿಸಬೇಕು. ಯಾವುದೇ ಲೋಪಗಳಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಎಲ್ಲ ಅಧಿಕಾರಿಗಳು ಹಾಜರಿರಬೇಕು ಎಂದು ತಾಕೀತು ಮಾಡಿದರು.

ಕಳೆದ ವರ್ಷ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮಹಿಳೆಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಇಂತಹ ಸಂದರ್ಭಗಳಿಗಾಗಿ ಕಾಯುತ್ತಿರುವ ವಿಪಕ್ಷದವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸರ್ಕಾರದ ಮೇಲೆ ಅಪಪ್ರಚಾರ ಮಾಡುತ್ತಾರೆ. ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಡುವುದು ಬೇಡ ಎಂದು ಹೇಳಿದರು.
ಠಾಣೆಗಳ ಮಾಹಿತಿ ಕೇಳಿದ ಗೃಹ ಸಚಿವರು
ಹೊಸ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆಗಳ ಸ್ಥಾಪನೆ ಮತ್ತು ಠಾಣೆಗಳಿಗೆ ನೂತನ ಕಟ್ಟಡಗಳ ನಿರ್ಮಾಣ ಸೇರಿದಂತೆ ಇಲಾಖೆ ಕೈಗೊಂಡಿರುವ ಕ್ರಮಗಳ ಮಾಹಿತಿ ಹಾಗೂ ಇತ್ತೀಚೆಗೆ ಸಂಭವಿಸಿದ ಘಟನೆಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಒದಗಿಸಬೇಕು. ಸಾರ್ವಜನಿಕವಾಗಿ ಬಹಿರಂಗಪಡಿಸದ ವಿಚಾರಗಳನ್ನು ಗಮನಕ್ಕೆ ತರಬೇಕು. ಅಧಿವೇಶನ ಮುಗಿಯುವರೆಗೂ ಎಲ್ಲೂ ಹೋಗಬಾರದು ಎಂದು ಸೂಚಿಸಿದರು.
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಪರಿಹಾರ ಕಂಡುಕೊಳ್ಳಬೇಕಿದೆ. ಬಹುತೇಕ ಸಂದರ್ಭಗಳಲ್ಲಿ ಇನ್‌ಸ್ಪೆಕ್ಟರ್, ಎಸಿಪಿ, ಡಿಸಿಪಿಗಳು ಪಾಯಿಂಟ್‌ಗಳಲ್ಲಿ ಕಾಣಿಸುವುದೇ ಇಲ್ಲ. ಅನೇಕ ಬಾರಿ ಇದು ನನ್ನ ಗಮನಕ್ಕೆ ಬಂದಿದೆ. ಇದು ಹೀಗೆ ಮುಂದುವರಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಇಂದಿನ ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications