Actress Ramya: ರಮ್ಯಾಗೆ ಅಶ್ಲೀಲ ಸಂದೇಶ ಕೇಸ್: ಆರೋಪಿಗಳ ಫೋನ್ಸ್ FSLಗೆ ರವಾನೆ, ಅಪ್ಡೇಟ್ಸ್
ಬೆಂಗಳೂರು, ಅಕ್ಟೋಬರ್ 06: ನಟಿ ಹಾಗೂ ಮಾಜಿ ಸಂಸದ ರಮ್ಯಾ (ದಿವ್ಯ ಸ್ಪಂದನ) (Actress Ramya)ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿ ಪೊಲೀಸ್ ಬಂಧನದಲ್ಲಿರುವ ಎಲ್ಲ ಆರೋಪಿಗಳ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಂದು ವಾರದೊಳಗೆ ಅದರ ಸಂಪೂರ್ಣ ವರದಿ ಬರಲಿದ್ದು, ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಟಿ ರಮ್ಯಾ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಈ ಆರೋಪಿಗಳು ಆಕ್ಷೇಪಾರ್ಹ ಸಂದೇಶ, ಪೋಸ್ಟ್ ಹಾಕಿದ್ದರು. ಕೆಟ್ಟ ಪದಗಳಿಂದ ನಿಂದಿಸಿದ್ದರು. ಕೆಲವರು ಕಾಮೆಂಟ್ ಸಹ ಮಾಡಿದ್ದರು. ಇನ್ಸ್‌ಟಾಗ್ರಾಮ್‌ನಲ್ಲಿ ನಟಿ ರಮ್ಯಾ ಅವರಿಗೆ ನೇರವಾಗಿ ಅಶ್ಲೀಲ ಪದಗಳಿಂದ ಸಂದೇಶ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ.

ಅವರೆಲ್ಲರ ಮೊಬೈಲ್ ಫೋನ್‌ಗಳನ್ನು ಸಿಸಿಬಿ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲಿನ ಅಧಿಕಾರಿಗಳು ಮೊಬೈಲ್‌ನಲ್ಲಿ ಡಿಲೀಟ್ ಆದ ಮೆಸೆಜ್, ಕಾಮೆಂಟ್ ಸೇರಿದಂತೆ ಪ್ರಕರಣ ಸಂಬಂಧ ಎಲ್ಲವನ್ನು ರಿಟ್ರಿವ್ ಮಾಡಲಿದ್ದಾರೆ. ಬಳಿಕ ಸಿಸಿಬಿ ಅಧಿಕಾರಿಗಳಿಗೆ ರಿಟ್ರಿವ್, ಪರೀಕ್ಷೆಯ ಕುರಿತ ವರದಿ ಸಲ್ಲಿಸಲಿದ್ದಾರೆ. ಮುಂದಿನ ಒಂದು ವಾರದೊಳಗೆ ಎಫ್‌ಎಸ್‌ಎಲ್ ವರದಿ ಸಿಸಿಬಿ ಅಧಿಕಾರಿಗಳ ಕೈ ಸೇರಲಿದೆ. ವರದಿ ಬಂದ ನಂತರ ಪೊಲೀಸರು ಕೋರ್ಟ್‌ಗೆ ಪ್ರಕರಣ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ನಟಿ ರಮ್ಯಾ ಅವರಿಗೆ ನಟ ದರ್ಶನ್ ತೂಗುದೀಪ್ ಅಭಿಮಾನಿಗಳು ಎನ್ನಲಾದ ಬಂಧಿತ ಈ 12 ಮಂದಿಯಿಂದ ಅಶ್ಲೀಲ ಸಂದೇಶ ರವಾನೆಯಾಗಿತ್ತು. ಈ ಬಗ್ಗೆ ಖುದ್ದು ನಟಿ ರಮ್ಯಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮತ್ತು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಎರಡು ತಿಂಗಳಿನಿಂದ ಜೈಲಿನಲ್ಲಿರುವ ಬಂಧಿತ ಆರೋಪಿಗಳು ಜಾಮೀನಿಗಾಗಿ ಪರದಾಡುತ್ತಿದ್ದಾರೆ. ಆರೋಪಿಗಳ ಪೋಷಕರು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದು, ಈವರೆಗೂ ಒಬ್ಬರಿಗೂ ಜಾಮೀನು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ ಏನು?
ನಟ ದರ್ಶನ್ ತೂಗುದೀಪ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಬಳಿಕ ಸುಪ್ರೀಂ ಕೋರ್ಟ್ ನಟ ದರ್ಶನ್ ಜಾಮೀನು ರದ್ದು ಮಾಡಿ ಮತ್ತೆ ಜೈಲಿಗೆ ಅಟ್ಟಿತ್ತು. ಈ ಆದೇಶದ ಬಗ್ಗೆ ನಟಿ ರಮ್ಯಾ ಅವರು ತಮ್ಮ ಅಭಿಪ್ರಾಯ ಹೊರ ಹಾಕಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಪೋಸ್ಟ್ ಹಾಕಿದ್ದರು. ಆ ಪೋಸ್ಟ್‌ಗೆ ಈ ಬಂಧಿತ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಹ್ಯ, ಅಶ್ಲೀಲ ಪದ ಬಳಿಕ ನೇರವಾಗಿ ರಮ್ಯಾ ಮೇಲೆ ಕಿಡಿ ಕಾರಿದ್ದರು. ವೈಯಕ್ತಿಕವಾಗಿಯು ಸಂದೇಶ ಕಳುಹಿಸಿದ್ದರು. ಹೆಣ್ಮಕ್ಕಳ ವಿರುದ್ಧದ ಅವಹೇಳನಕಾರಿ ಈ ಬೆಳವಣಿಗೆ ವಿರುದ್ಧ ರಮ್ಯ ಸಮರ ಸಾರಿದ್ದರು. ದೂರು ನೀಡುತ್ತಿದ್ದಂತೆ ಅವರೆಲ್ಲರನ್ನು ಹುಡುಕಿ ಬಂಧಿಸಲಾಯಿತು.












Click it and Unblock the Notifications