ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್‌ಫೋನ್, ವಿವರ ತಿಳಿಯಿರಿ
ಬೆಂಗಳೂರು, ಫೆಬ್ರವರಿ 09: ರಾಜ್ಯದ 76,000 ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ನೀಡಲು ನಿರ್ಧರಿಸಲಾಗಿದೆ .

ಮಹಿಳಾ ಮತ್ತು ಮಕ್ಕಳ ಇಲಾಖೆ ಸೇರಿದಂತೆ ವಿವಿಧ ಸಮೀಕ್ಷೆ, ಅರ್ಜಿಗಳ ಸ್ವೀಕಾರ ಮತ್ತು ಇತರ ಭರ್ತಿ ಮಾಡಲು ನಿರ್ದೇಶಿಸಲಾಗಿದ್ದು, ಇದಕ್ಕೆ ಅನುಕೂಲವಾಗುವಂತೆ ಅಂಗನವಾಡಿ ಮೇಲ್ವಿಚಾರಕರು ಹಾಗೂ 89.61 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ಖರೀದಿಸಿ ಉಚಿತವಾಗಿ ವಿತರಿಸಲು ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪ್ರತಿ ಸ್ಮಾರ್ಟ್ ಫೋನ್ 11,800 ರೂ. ವೆಚ್ಚದಲ್ಲಿ ಖರೀದಿಸಲಾಗುತ್ತಿದೆ. ಪೋಷಣ್ ಅಭಿಯಾನ ಯೋಜನೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಫಲಾನುಭವಿಗಳ ಗುರಿಯನ್ನಾಧರಿಸಿ ಎಲ್ಲಾ ಪೌಷ್ಟಿಕತೆಯ ಯೋಜನೆಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕತೆಯ ಸ್ಥಿತಿಯನ್ನು ನಿರ್ದಿಷ್ಟ ಅವಧಿಗೆ ಅನುಗುಣವಾಗಿ ಸುಧಾರಿಸಲು ಚಟುವಟಿಕೆಗಳನ್ನು ಕೈಗೊಂಡ ಮಾಹಿತಿಯನ್ನು ಪೋಷ್ ಟ್ರ್ಯಾಕರ್‌ನಲ್ಲಿ ಅಳವಡಿಸಲು ಸ್ಮಾರ್ಟ್ ಫೋನ್ ಖರೀದಿಸಲಾಗುತ್ತಿದೆ ಎಂದು ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್ ಸಂಪುಟದ ನಿರ್ಣಯಗಳನ್ನು ತಿಳಿಸಿದರು.
ಇನ್ನು 2023- 24ನೇ ಸಾಲಿನ ಎಸ್‌ಸಿಪಿಎಸ್‌ಪಿ ಕ್ರಿಯಾಯೋಜನೆಯ ಅಡಿ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ 45.28 ಕೋಟಿಗಳ ವೆಚ್ಚದಲ್ಲಿ ಟೂಲ್ ಕಿಟ್ ಗಳನ್ನು ಖರೀದಿಸಿ ವಿತರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದ್ದು, ಇದರಿಂದ ಸುಮಾರು 34,178 ವಿದ್ಯಾರ್ಥಿಗಳಿಗೆ ಟೂಲ್ ಕಿಟ್‌ಗಳನ್ನು ಉಚಿತವಾಗಿ ವಿತರಿಸಲು ಅನುಮೋದನೆ ನೀಡಿದಂತಾಗಿದೆ.
ಕರ್ನಾಟಕ ಕುಲಾಂತರಿ ಮತ್ತು ತಳಿ ವಿಜ್ಞಾನದ ಪ್ರಕಾರ ಮಾರ್ಪಾಡಾದ ಹತ್ತಿ ಬೀಜಗಳ ಮಾರಾಟ ಬೆಲೆಯ ನಿಗದಿ ಮತ್ತು ಪರಿಹಾರದ ಸಂದಾಯ ವಿಧೇಯಕ 2015 ನ್ನು ಇಂದಿನ ಕ್ಯಾಬಿನೆಟ್ ನಲ್ಲಿ ಹಿಂಪಡೆಯಲಾಗಿದೆ. ಕೇಂದ್ರ ಕೂಡ ಇದೇ ಮಾದರಿಯ ವಿಧೇಯಕ ಮಂಡನೆ ಮಾಡಲು ತಯಾರಿ ನಡೆಸಿದೆ. ಹೀಗಾಗಿ ಕೇಂದ್ರದ ಕೋರಿಕೆ ಮೇರೆಗೆ 2015 ರ ವಿಧೇಯಕ ವಾಪಸ್ ಪಡೆಯಲು ಕ್ಯಾಬಿನೆಟ್ ತೀರ್ಮಾನ ಮಾಡಿದೆ
ಒಂದು ಜಿಲ್ಲೆ ಒಂದು ಉತ್ಪನ್ನ, ಜಿಐ ಉತ್ಪನ್ನಗಳು ಹಾಗೂ ಇತರೆ ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸಲು ರಾಜ್ಯದಲ್ಲಿ ಯುನಿಟಿ ಮಾಲ್ ಅನ್ನು ಕೇಂದ್ರ ಸರ್ಕಾರವು ನೀಡುವ 193 ಕೋಟಿ ರೂಪಾಯಿಗಳ ಬಡ್ಡಿರಹಿತ ಸಾಲದ ನೆರವಿನೊಂದಿಗೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ 2024ಕ್ಕೆ ಅನುಮೋದನೆ ನೀಡಲಾಗಿದೆ. ಈ ತಿದ್ದುಪಡಿಯಲ್ಲಿ ಸಹಕಾರ ಸಂಘಗಳ ಚುನಾವಣೆ ಹಾಗೂ ನಾಮನಿರ್ದೇಶನಗಳಲ್ಲಿ ಮೀಸಲಾತಿ ನೀಡಲು ವಿಧೇಯಕಕ್ಕೆ ತಿದ್ದುಪಡಿ ತರಲು ಕ್ಯಾಬಿನೆಟ್ ತೀರ್ಮಾನ ಮಾಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.












Click it and Unblock the Notifications