ಕಾರ್ಮಿಕರಿಗೆ ಉಚಿತ ಬಸ್ ಪಾಸ್; ದರ, ನಿಯಮಗಳು, ಅರ್ಹತೆ
ಬೆಂಗಳೂರು, ಸೆಪ್ಟೆಂಬರ್ 23; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ಬಸ್ ಪಾಸ್ ಯೋಜನೆಯನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ.
ಮುಖ್ಯಮಂತ್ರಿಗಳು 2022-23ನೇ ಸಾಲಿನ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಿದ್ದರು. ಸರ್ಕಾರವು ಈ ಯೋಜನೆಯನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ರಾಜ್ಯಾದ್ಯಂತ ವಿಸ್ತರಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಕೇಂದ್ರ ಕಛೇರಿ ಬೆಂಗಳೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ನೋಂದಾಯಿತ ಕಟ್ಟಡ ಮತ್ತುಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್ ಪಾಸುಗಳನ್ನು ವಿತರಿಸುವ ಬಗ್ಗೆ ಆದೇಶ ಹೊರಡಿಸಿದೆ. ಪಾಸುಗಳ ದರ, ಪಾಸು ಪಡೆಯುವುದು ಸೇರಿದಂತೆ ಇತರ ನಿರ್ದೇಶನಗಳನ್ನು ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸಹೋದರ ಸಂಸ್ಥೆಗಳಾದ ವಾಕರಸಾಸಂಸ್ಥೆ ಹಾಗೂ ಕಕರಸಾನಿಗಮಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಸವಿರುವ ರಾಜ್ಯದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಪ್ರಯಾಣದ ಬಸ್ ಪಾಸುಗಳನ್ನು ವಿತರಿಸಲು ಯೋಜಿಸಿರುತ್ತದೆ.
ಈ ಪಾಸು ವಿತರಣಾ ವ್ಯವಸ್ಥೆಯ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುತ್ತದೆ ಹಾಗೂ ತದನಂತರ ಜಾರಿಗೆ ಬರಲಿದೆ. ಈ ಯೋಜನೆಯಡಿ ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ಮಾನ್ಯ ಮಾಡುವಲ್ಲಿ ಕೆಳಕಂಡ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ.

ಯಾರು ಪಾಸುಗಳನ್ನು ಪಡೆಯಬಹುದು?
ಈ ಪಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಇಡಿಸಿಎಸ್‌ರವರಿಂದ ವಿತರಣೆ ಮಾಡಲಾಗುವುದು. ಈ ಪಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ವಿತರಣೆ ಮಾಡಲಿದೆ.
ಮಂಡಳಿಯ ನೋಂದಾಯಿತ ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೋಂದಣಿಯಾಗಿದ್ದರೂ ಸಹ ಅವರು ಇಚ್ಚಿಸುವ ಪಾಸಿನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ (ಕರಾರಸಾ ನಿಗಮ, ವಾಕರಸಾಸಂಸ್ಥೆ ಹಾಗೂ ಕಕರಸಾ ನಿಗಮಗಳ ವ್ಯಾಪ್ತಿಯಲ್ಲಿ) ಅಂದರೆ ಪ್ರಾರಂಭಿಕ ಸ್ಥಳದಿಂದ 7 ಹಂತಗಳವರೆಗೆ (ಗರಿಷ್ಠ 45 ಕಿ. ಮೀ.) ಉಚಿತವಾಗಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ.
ಇಡಿಸಿಎಸ್ ಇಲಾಖೆಯ/ ಸೇವಾಸಿಂಧು ಪೋರ್ಟಲ್‌ರವರು ರಾಜ್ಯಾದ್ಯಂತ ಕರ್ನಾಟಕ ಒನ್/ ಗ್ರಾಮಸೇವಾ ಒನ್ ಸೆಂಟರ್‌ಗಳ ಮೂಲಕ ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರುಗಳಿಗೆ ಬಸ್ ಪಾಸ್ ವಿತರಣೆ ಮಾಡುತ್ತಾರೆ. ಕರಾರಸಾನಿಗಮ, ವಾಕರಸಾಸಂಸ್ಥೆ ಹಾಗೂ ಕಕರಸಾನಿಗಮಗಳ ಲೋಗೋ/ ಹೆಸರು ಇರುವ ಸ್ಮಾರ್ಟ್‌ಕಾರ್ಡ್ ಮಾದರಿಯ ಬಸ್‌ಪಾಸ್‌ಗಳನ್ನು ಸೇವಾಸಿಂಧು ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುತ್ತದೆ.

ಪ್ರಯಾಣ ಸೌಲಭ್ಯ ಹಾಗೂ ಪಾಸಿನ ಚಾಲ್ತಿ ಅವಧಿ
ಪಾಸುದಾರರು ಪಾಸಿನಲ್ಲಿ ನಮೂದಿಸಿದ ಪ್ರಾರಂಭದ ಬಸ್ ನಿಲ್ದಾಣ/ ಸ್ಥಳದಿಂದ 7 ಹಂತಗಳವರೆಗೆ ಮಾತ್ರ (45 ಕಿ. ಮೀ. ವ್ಯಾಪ್ತಿಯೊಳಗೆ ಬರುವ ಎಲ್ಲಾ ಮಾರ್ಗಗಳಲ್ಲಿ) ಪ್ರಯಾಣಿಸಬಹುದಾಗಿರುತ್ತದೆ. ಹಾಗೂ ಪ್ರತಿ ಪಾಸಿಗೆ ಮಾಸಿಕ ರೂ. 1400 ದರ ನಿಗದಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬಸ್ ಪ್ರಯಾಣ ದರ ಪರಿಷ್ಕರಿಸಿದಲ್ಲಿ ಅದರಂತೆ ದರ ಪರಿಷ್ಕರಣೆಗೊಳ್ಳಲಿದೆ. ಪಾಸು ವಿತರಣಾ ಸ್ಥಳದಲ್ಲಿ ಆಚರಣೆಯ ದೂರಮಿತಿಗೆ ಒಳಪಟ್ಟು ಮೂರು ಸಾರಿಗೆ ನಿಗಮಗಳ (ಕರಾರಸಾನಿಗಮ, ವಾಕರಸಾಸಂಸ್ಥೆ ಹಾಗೂ ಕಕರಸಾನಿಗಮಗಳ) ನಗರ, ಸಾಮನ್ಯ, ಹೊರವಲಯ ಹಾಗೂ ವೇಗದೂತ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ.
ಪಾಸಿನ ಮಾನ್ಯತಾ ಅವಧಿ ಮೂರು ತಿಂಗಳು. ಮೂರು ತಿಂಗಳ ಚಾ ಅವಧಿ ಮುಕ್ತಾಯವಾದ ನಂತರ ಮರು ಅವಧಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ಸೇವಾಸಿಂಧು ಪೋರ್ಟಲ್ ಮೂಲಕ ಪಾಸು ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ.

ನಿಗಮದ ಸಿಬ್ಬಂದಿಗೆ ಸೂಚನೆಗಳು
ಈ ಪಾಸಿನ ವಿನ್ಯಾಸವನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ರಸ್ತೆ ಸಾರಿಗೆ ನಿಗಮಗಳು ಜಂಟಿಯಾಗಿ ನಿರ್ವಹಿಸಿದ್ದು, ಪಾಸುದಾರರು ಪ್ರಯಾಣಿಸುವಾಗ ಚಾಲನಾ ಸಿಬ್ಬಂದಿಗಳಿಗೆ/ ತನಿಖಾಧಿಕಾರಿಗಳು ಕೇಳಿದಾಗ ಪಾಸನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ. ಚಾಲನಾ ಸಿಬ್ಬಂದಿಗಳು ಪಾಸುಗಳ ಮಾನ್ಯತಾ ಅವಧಿಯನ್ನು ಕಡ್ಡಾಯವಾಗಿ ಪರಿಶೀಲಿಸುವುದು. ಚಾಲನಾ ಸಿಬ್ಬಂದಿಗಳು ಹಾಗೂ ತನಿಖಾ ಸಿಬ್ಬಂದಿಗಳು ನಮೂನೆಯ ಮಾದರಿಯನ್ನು ಗಮನದಲ್ಲಿರಿಸಿ ಪ್ರಯಾಣದ ಸಂದರ್ಭದಲ್ಲಿ ಪರಿಶೀಲನೆಗೊಳಪಡಿಸುವುದು. ಈ ಪಾಸುಗಳ ವಿತರಣೆ, ನಿರ್ವಹಣೆ ಹಾಗೂ ಪಾಸಿನ ನವೀಕರಣ ಕೆಲಸವನ್ನು ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯವರು ನಿರ್ವಹಿಸಲಿದ್ದಾರೆ.

ಪಾಸು ಕಳೆದುಕೊಂಡರೆ ಏನು ಮಾಡಬೇಕು?
ಪಾಸು ನವೀಕರಣದ ಸಮಯದಲ್ಲಿ ಕಾರ್ಮಿಕ ಕಲ್ಯಾಣ ಇಲಾಖೆಯವರು ನೀಡಿರುವ ಗುರುತಿನ ಚೀಟಿಯ ನವೀಕರಣವಾಗಿರುವುದನ್ನು ಕಡ್ಡಾಯವಾಗಿ ಪರಿಶೀಲನೆಗೊಳಪಡಿಸಿ, ಪಾಸನ್ನು ಮುಂದಿನ ನಿಗದಿತ ಅವಧಿಗೆ ಸೇವಾಸಿಂಧು ಇಲಾಖೆಯವರು ನವೀಕರಣ ಮಾಡಲಿದ್ದಾರೆ. ಫಲಾನುಭವಿಯು ಬಸ್‌ಪಾಸ್ ಕಳೆದುಕೊಂಡಲ್ಲಿ ಒಮ್ಮೆಗೆ ಮಾತ್ರ ಸಂಬಂಧಪಟ್ಟ ಕರ್ನಾಟಕ ಒನ್ ಕೇಂದ್ರಕ್ಕೆ ತೆರಳಿ ಮನವಿ ಸಲ್ಲಿಸಿದಾಗ ತಂತ್ರಾಂಶವನ್ನು ಪರಿಶೀಲಿಸಿ ಬಸ್‌ಪಾಸ್ ಅವಧಿಗೆ ಸ್ವಾರ್ಟ್‌ಕಾರ್ಡ್ ಮುದ್ರಣದ ವೆಚ್ಚವನ್ನು ಮಾತ್ರ ಪಡೆದು ಹೊಸದಾಗಿ ಪಾಸ್ ಅನ್ನು ಸೇವಾಸಿಂಧು ಸಂಸ್ಥೆಯವರು ನೀಡಲಿದ್ದಾರೆ.

ಈ ಪಾಸುಗಳನ್ನು ವಶಕ್ಕೆ ಪಡೆಯಬಹುದು
ನಿಗದಿತ ದೂರ/ ಮಿತಿಯೊಳಗೆ (ಪಾಸ್‌ನಲ್ಲಿ ನಮೂದಿಸಿದ ಸ್ಥಳದಿಂದ 45 ಕಿ. ಮೀ. ವರೆಗಿನ ಎಲ್ಲಾ ಮಾರ್ಗಗಳಲ್ಲಿ ಮಾತ್ರ) ಮಾತ್ರ ಪ್ರಯಾಣಿಸಲು ಅವಕಾಶ ನೀಡುವುದು. ಮಿತಿಯ ಹೊರತು ಪಾಸುದಾರರು ಪ್ರಯಾಣಿಸಿದಲ್ಲಿ ನಿಯಮಾವಳಿಗಳನ್ವಯ ಟಿಕೆಟ್ ವಿತರಿಸಲು ಚಾಲನಾ ಸಿಬ್ಬಂದಿಗಳಿಗೆ ಅಗತ್ಯ ಸೂಚನೆ ನೀಡುವುದು. ಪಾಸುಗಳು ನಿಗದಿತ ದೂರ/ ಮಿತಿಗಿಂತ ಹೆಚ್ಚಿನ ದೂರಕ್ಕೆ ಪ್ರಯಾಣಿಸಲು ಚಾಲನಾ ಸಿಬ್ಬಂದಿಗಳು ಅವಕಾಶ ನೀಡುವಂತಿಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಪಾಸುದಾರರಿಗೆ ಹೆಚ್ಚಿನ ಪ್ರಯಾಣ ದೂರಕ್ಕೆ ಸಂಬಂಧಿಸಿದ ದರದ ಟಿಕೆಟ್ ವಿತರಿಸುವುದು. ಪಾಸಿನ ದುರುಪಯೋಗವಾಗುತ್ತಿರುವುದು ಕಂಡುಬಂದಲ್ಲಿ ಚಾಲನಾ ಸಿಬ್ಬಂದಿಗಳು/ ತನಿಖಾಧಿಕಾರಿಗಳು ಪಾಸನ್ನು ವಶಪಡಿಸಿಕೊಂಡು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಕಳುಹಿಸುವುದು.
ಈ ಪಾಸು ವ್ಯವಸ್ಥೆ ನೂತನವಾಗಿ ಅನುಷ್ಠಾನಗೊಳಿಸಿರುವ ಯೋಜನೆಯಾಗಿರುವುದರಿಂದ ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಪಾಸುಗಳನ್ನು ನಿಗಮದ ಬಸ್ಸುಗಳಲ್ಲಿ ಮಾನ್ಯ ಮಾಡುವಲ್ಲಿ ಕ್ರಮವಹಿಸಬೇಕು. ಈ ಬಗ್ಗೆ ಚಾಲನಾ ಸಿಬ್ಬಂದಿಗಳು ಸೂಕ್ಷ್ಮವಾಗಿ ಪರಿಶೀಲಿಸಿ ಕರ್ತವ್ಯ ನಿರ್ವಹಿಸಲು ಅಗತ್ಯ ತಿಳುವಳಿಕೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications