ಎಸ್‌ಎಸ್‌ಎಲ್‌ಸಿ ಗಣಿತ ಪತ್ರಿಕೆಗೆ 4 ಗ್ರೇಸ್ ಅಂಕ
ಬೆಂಗಳೂರು, ಏ. 13 : ದ್ವಿತೀಯ ಪಿಯುಸಿ ಗಣಿತ ಮತ್ತು ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳಗಾಗಿ ಗ್ರೆಸ್ ಅಂಕಗಳನ್ನು ನೀಡಲಾಗಿತ್ತು. ಈಗ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಯಲ್ಲಿಯೂ ತಪ್ಪು ಕಂಡುಬಂದಿದ್ದು 4 ಗ್ರೇಸ್ ಅಂಕಗಳನ್ನು ನೀಡಲು ಪರೀಕ್ಷಾ ಮಂಡಳಿ ತೀರ್ಮಾನ ಕೈಗೊಂಡಿದೆ.
ಕನ್ನಡ ಮಾಧ್ಯಮದ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳಿವೆ ಎಂದು ಪೋಷಕರು ಮತ್ತು ಶಿಕ್ಷಕರು ಸೋಮವಾರ ದೂರು ನೀಡಿದ್ದಾರೆ. 4 ಅಂಕದ ಪ್ರಶ್ನೆ ತಪ್ಪಾಗಿರುವ ಹಿನ್ನಲೆಯಲ್ಲಿ 4 ಗ್ರೇಸ್ ಅಂಕಗಳನ್ನು ನೀಡಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. [ದ್ವಿತೀಯ ಪಿಯು ಗಣಿತ ಪತ್ರಿಕೆಗೆ 9 ಗ್ರೇಸ್ ಅಂಕ]

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮಹಮ್ಮದ್ ಮೊಹಸೀನ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳಿವೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ವರದಿ ನೀಡುವಂತೆ ತಜ್ಞರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. [ಎಸ್ಸೆಸ್ಸೆಲ್ಸಿ: ಸಾಮೂಹಿಕ ನಕಲಿಗೆ ಅಧಿಕಾರಿಗಳ ಸಾಥ್]
4 ಅಂಕದ ಪ್ರಶ್ನೆ ತಪ್ಪಾಗಿದೆ, ಮುದ್ರಣ ದೋಷದಿಂದಾಗಿ ಇಂತಹ ತೊಂದರೆ ಉಂಟಾಗಿದೆ. ಪ್ರಶ್ನೆ ಪತ್ರಿಕೆ ತಯಾರಿಸಿರುವವರ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಹಮ್ಮದ್ ಮೊಹಸೀನ್ ತಿಳಿಸಿದರು. ಅಂದಹಾಗೆ ಮಾ.30ರಿಂದ ಈ ಬಾರಿಯ ಎಸ್‌ಎಸ್‌ಎಲ್ ಪರೀಕ್ಷೆಗಳು ಆರಂಭವಾಗಿದ್ದು, ಏ.13ರ ಸೋಮವಾರ ಪರೀಕ್ಷೆಗಳು ಅಂತ್ಯಗೊಂಡಿವೆ.
ಪಿಯು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ : ದ್ವಿತೀಯ ಪಿಯುಸಿ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ದೋಷ ವಿರುವುದರಿಂದ 9 ಮತ್ತು ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ದೋಷ ವಿರುವುದರಿಂದ ವಿದ್ಯಾರ್ಥಿಗಳಿಗೆ 5 ಗ್ರೇಸ್ ಅಂಕ ನೀಡುವಂತೆ ಕಳೆದ ವಾರ ಸೂಚನೆ ನೀಡಲಾಗಿತ್ತು.












Click it and Unblock the Notifications