ಬೆಸ್ಕಾಂ ಅಧಿಕಾರಿಗಳನ್ನು ಸಾಲಾಗಿ ನಿಲ್ಲಿಸಿ ಕಡಿಯಿರಿ
ಕೋಲಾರ, ಏ. 29 : " ಬೆಸ್ಕಾಂ ಅಧಿಕಾರಿಗಳನ್ನು ಸಾಲಾಗಿ ನಿಲ್ಲಿಸಿ ಕಡಿಯಿರಿ" ಎಂದು ಹೇಳುವ ಮೂಲಕ ಮಾಜಿ ಸ್ಪೀಕರ್ ಮತ್ತು ಶ್ರೀನಿವಾರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅಡ್ಡಿಪಡಿಸುವ ಬೆಸ್ಕಾಂ ಅಧಿಕಾರಿಗಳನ್ನು ಕಡಿಯಿರಿ ಎಂದು ಅವರು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಪಿಡಿಒ ನಡೆಸಿದ ಕಾಮಗಾರಿಗಳ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಪ್ರಸ್ತಾಪಿಸಿದರು. ಬೆಸ್ಕಾಂ ಅನುಮತಿ ಪಡೆಯದೆ ಪಿಡಿಒ ಅಧಿಕಾರಿಗಳು ಕಾಮಗಾರಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಕ್ಕೆ ಬೆಸ್ಕಾಂ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಪಿಡಿಒ ಅಧಿಕಾರಿಗಳು ಗ್ರಾಮವೊಂದಕ್ಕೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಅನುಮತಿಯಿಲ್ಲದೇ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದೆವು ಎಂದು ಹೇಳಿದರು. ಈ ಹೇಳಿಕೆಯಿಂದಾಗಿ ಬೆಸ್ಕಾಂ ಮತ್ತು ಪಿಡಿಓ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. [ಹಿರೇಮಠ್ ವಿರುದ್ಧ ಮಾನನಷ್ಟ ಮೊಕದ್ದಮೆ]
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ರಮೇಶ್ ಕುಮಾರ್, "ಕುಡಿಯುವ ನೀರು ಪಡೆಯಲು ಅಡ್ಡಿ ಪಡಿಸುತ್ತೀರಾ? ಬೆಸ್ಕಾಂ ಅಧಿಕಾರಿಗಳು ಊರಿಗೆ ಬಂದರೆ ಅವರನ್ನು ಕಟ್ಟಿಹಾಕಿ ಮೂರು ದಿನ ಊಟ ಕೊಡಬೇಡಿ. ಆಗ ಅವರಿಗೆ ಗೊತ್ತಾಗುತ್ತದೆ" ಎಂದು ರಮೇಶ್ ಕುಮಾರ್ ಹೇಳಿದರು. [ಬರುವ ಮೇ ತಿಂಗಳಿನಿಂದ ಬೆಸ್ಕಾಂ ಹೊಸ ಪದ್ಧತಿ]
ಇಷ್ಟಕ್ಕೂ ಸುಮ್ಮನಾಗದ ಅವರು "ನಿಮ್ಮ ಇಲಾಖೆಯವರು ವಿದ್ಯುತ್ ಕಳ್ಳತನ ಮಾಡುವವರನ್ನು ಬಿಟ್ಟು ಬಿಡುತ್ತೀರಾ. ಕುಡಿಯುವ ನೀರನ್ನು ಪೂರೈಕೆ ಮಾಡಲು ವಿದ್ಯುತ್ ಪಡೆದರೆ, ಅದನ್ನು ಅಪರಾಧ ಎಂದು ಹೇಳುತ್ತೀರಿ. ಬೆಸ್ಕಾಂ ಅಧಿಕಾರಿಗಳನ್ನು ಸಾಲಾಗಿ ನಿಲ್ಲಿಸಿ ಕಡಿಯಿರಿ" ಎಂದು ತುಂಬಿದ ಸಭೆಯಲ್ಲಿ ಹೇಳುವ ಮೂಲಕ ಬೆಸ್ಕಾಂ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದರು.












Click it and Unblock the Notifications