ಮಾಜಿ ಸಂಸದರಾದ ಮುದ್ದಹನುಮೇಗೌಡ, ಶಶಿಕುಮಾರ್ ಬಿಜೆಪಿಗೆ ಸೇರ್ಪಡೆ
ಬೆಂಗಳೂರು, ನ.3: ಮಾಜಿ ಸಂಸದರಾದ ಮುದ್ದಹನುಮೇಗೌಡ ಹಾಗೂ ಶಶಿಕುಮಾರ್ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ಈ ಇಬ್ಬರು ಮುಖಂಡರು ಕೇಸರಿ ಪಾಳಯಕ್ಕೆ ಸೇರ್ಪಡೆಗೊಂಡರು.
ಈ ಇಬ್ಬರು ಮುಖಂಡರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಸಿ.ಪಿ.ಯೋಗಿಶ್ವರ್, ರಾಜ್ಯಸಭಾ ಸದಸ್ಯ ಜಗ್ಗೇಶ್, ಮಸಾಲಾ ಜಯರಾಂ ಸೇರಿದಂತೆ ಹಲವು ಪ್ರಮುಖರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, 'ಮುದ್ದಹನುಮೇಗೌಡ, ಶಶಿಕುಮಾರ್ ಅವರ ಸೇರ್ಪಡೆಯಿಂದ ಬಿಜೆಪಿಗೆ ಬಲ ಬಂದಿದೆ' ಎಂದು ಅಭಿಪ್ರಾಯಪಟ್ಟರು.

'ಕಾಂಗ್ರೆಸ್ ಪಕ್ಷದಲ್ಲಿ ಜನರಿಗೆ ವಿಶ್ವಾಸವಿಲ್ಲ. ಜನಪರ ಕೆಲಸಗಳನ್ನು ಬಿಜೆಪಿ ಮಾಡುತ್ತಿದೆ. ಜನರು ಬಿಜೆಪಿಯಲ್ಲಿ ವಿಶ್ವಾಸ ಇರಿಸಿದ್ದಾರೆ. ಈ ಸಮಾರಂಭ ಬರುವ ಚುನಾವಣೆಗೆ ದಿಕ್ಸೂಚಿ ಆಗಲಿದೆ. ಮುದ್ದಹನುಮೇಗೌಡ ಜನಪರ ನಾಯಕರು. ಶಶಿ ಕುಮಾರ್ ನಮ್ಮಲ್ಲೆ ಇದ್ದವರು. ಈಗ ಮತ್ತೆ ಗೂಡಿಗೆ ಮರಳಿದ್ದಾರೆ' ಎಂದು ಬೊಮ್ಮಾಯಿ ಹೇಳಿದರು.
ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ, 'ತುಮಕೂರು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ನನ್ನ ಧ್ಯೇಯ, ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುವೆ' ಎಂದರು.
'ದೇಶದಲ್ಲಿ ಬಿಜೆಪಿಗೆ ಜನಮನ್ನಣೆ ಇದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ. ನಾನು ಅನೇಕ ಬಾರಿ ಲೋಕಸಭೆ ಕಲಾಪದಲ್ಲಿ ಭಾಗವಹಿಸಿದ್ದೇನೆ. ಮೋದಿಯವರು ಯಾವತ್ತಿಗೂ ಮುಜುಗರ ಆಗುವ ರೀತಿಯಲ್ಲಿ ಮತನಾಡಿಲ್ಲ. ನಾನು ಪಕ್ಷಕ್ಕಾಗಿ ದುಡಿಯುತ್ತೇನೆ. ತುಮಕೂರಿನ ಕಾರ್ಯಕರ್ತರ ಜೊತೆಗೂ ನನಗೆ ಹತ್ತಿರ ಸಂಬಂಧವಿದೆ. ಬಿಜೆಪಿಯ ನೀತಿ ನಿಯಮಗಳ ಬಗ್ಗೆ ನನಗೆ ಗೊತ್ತಿದೆ. ಹೊಂದಿಕೊಂಡು ಹೋಗುತ್ತೇನೆ' ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಚಿತ್ರದುರ್ಗದ ಮಾಜಿ ಸಂಸದ ಶಶಿಕುಮಾರ್, 'ಬಿಜೆಪಿಗೆ ನಾನು ಹಳಬ. ಈ ಹಿಂದೆ ಜೆಡಿಯುನಲ್ಲಿದ್ದಾಗ ಎನ್‌ಡಿಎ ಭಾಗವಾಗಿದ್ದೆ. ವಾಜಪೇಯಿ ಜೊತೆ ಕೆಲಸ ಮಾಡಿದ್ದೇನೆ. ನಾನು ನಾಯಕ ಸಮುದಾಯದವನು. ನಾನೊಬ್ಬ ನಟ. ಎಲ್ಲ ಸಮುದಾಯಗಳನ್ನು ಒಂದೇ ರೀತಿಯಲ್ಲಿ ನೋಡುತ್ತೇನೆ. ಪಕ್ಷ ನೀಡುವ ಎಲ್ಲ ಜವಾಬ್ದಾರಿಗಳನ್ನು ನಿಬಾಯಿಸುತ್ತೇನೆ. ಪಕ್ಷಕ್ಕೆ ಸ್ವಾಗತಿಸಿದ ನಾಯಕರಿಗೆ ಧನ್ಯವಾದಗಳು' ಎಂದರು.
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ನಳೀನ್ ಕುಮಾರ್ ಕಟೀಲ್, 'ಕಾಂಗ್ರೆಸ್‌ನ ಬಾಗಿಲು ಮುಚ್ಚಲಿದೆ' ಎಂದರು.
ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಅವರನ್ನೂ ಬಿಜೆಪಿಗೆ ಸ್ವಾಗತಿಸಲಾಯಿತು.












Click it and Unblock the Notifications