Breaking; ಬಿಜೆಪಿ ತೊರೆದ ಮಾಜಿ ಶಾಸಕ ಕೆ. ಎಸ್. ಕಿರಣ್ ಕುಮಾರ್!
ಮಾಜಿ ಶಾಸಕ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ. ಎಸ್. ಕಿರಣ್ ಕುಮಾರ್ ಬಿಜೆಪಿ ತೊರೆದಿದ್ದಾರೆ. ಅವರು ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಬೆಂಗಳೂರು, ಫೆಬ್ರವರಿ 19; ಮಾಜಿ ಶಾಸಕ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ. ಎಸ್. ಕಿರಣ್ ಕುಮಾರ್ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 2023ರ ಚುನಾವಣೆಗೆ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಕೆ. ಎಸ್. ಕಿರಣ್ ಕುಮಾರ್ ರಾಜೀನಾಮೆ ಪತ್ರವನ್ನು ರವಾನೆ ಮಾಡಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಬಾರಿಯ ಚುನಾವಣೆಗೆ ಕೆ. ಎಸ್. ಕಿರಣ್ ಕುಮಾರ್ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹಾಲಿ ಶಾಸಕ, ಸಚಿವ ಜೆ. ಸಿ. ಮಾಧುಸ್ವಾಮಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ.

ಈ ಹಿನ್ನಲೆಯಲ್ಲಿ ಮಾಜಿ ಶಾಸಕ ಕೆ. ಎಸ್. ಕಿರಣ್ ಕುಮಾರ್ ಬಿಜೆಪಿ ತೊರೆದಿದ್ದಾರೆ. ಮಾಹಿತಿಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕೆ. ಎಸ್. ಕಿರಣ್ ಕುಮಾರ್ ಸೋಮವಾರ ಕಾಂಗ್ರೆಸ್ ಸೇರಲಿದ್ದಾರೆ.
2018ರ ಚುನಾವಣೆಯಲ್ಲಿ ಜೆ. ಸಿ. ಮಾಧುಸ್ವಾಮಿ 69,612 ಮತಗಳನ್ನು ಪಡೆದು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿ ಮುಂದುವರೆದಿದ್ದಾರೆ.
ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಂತೋಷ್ ಜಯಚಂದ್ರ 45,893 ಮತಗಳನ್ನು ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಕೆ. ಎಸ್. ಕಿರಣ್ ಕುಮಾರ್ ಮೊದಲು ಕಳ್ಳಂಬೆಳ್ಳ ಕ್ಷೇತ್ರದಿಂದ ಶಾಸಕರಾಗಿದ್ದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಕಳ್ಳಂಬೆಳ್ಳ ವಿಧಾನಸಭಾ ಕ್ಷೇತ್ರ ಚಿಕ್ಕನಾಯಕನಹಳ್ಳಿಗೆ ಸೇರ್ಪಡೆಗೊಂಡಿತು.
ಬಳಿಕ ಪಕ್ಷದ ಹಿರಿಯ ನಾಯಕರ ಒತ್ತಾಯಕ್ಕೆ ಮಣಿದು ಕಿರಣ್ ಕುಮಾರ್ ಜೆ. ಸಿ. ಮಾಧುಸ್ವಾಮಿಗೆ ಕ್ಷೇತ್ರ ಬಿಟ್ಟುಕೊಟ್ಟರು. ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದ ಕಿರಣ್ ಕುಮಾರ್ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಬಲಿಗರು.
ಜೆ. ಸಿ. ಮಾಧುಸ್ವಾಮಿಗೆ ಕ್ಷೇತ್ರ ಬಿಟ್ಟುಕೊಟ್ಟ ಬಳಿಕ ಅವರ ಜೊತೆ ಕಿರಣ್ ಕುಮಾರ್ ಶೀತಲ ಸಮರ ನಡೆಸುತ್ತಲೇ ಇದ್ದಾರೆ. ಈಗ ಕಾಂಗ್ರೆಸ್ ನಾಯಕರು ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ.












Click it and Unblock the Notifications