Breaking; ಕಾಂಗ್ರೆಸ್‌ನತ್ತ ಹೊರಟ ತುಮಕೂರಿನ ಜೆಡಿಎಸ್ ನಾಯಕ
ಬೆಂಗಳೂರು, ನವೆಂಬರ್ 15; ತುಮಕೂರು ಜಿಲ್ಲೆಯ ಮತ್ತೊಬ್ಬ ಜೆಡಿಎಸ್ ನಾಯಕ ಪಕ್ಷ ತೊರೆದಿದ್ದಾರೆ. 2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ನಾಯಕರ ಪಕ್ಷಾಂತರ ಆರಂಭಗೊಂಡಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಹೆಚ್. ನಿಂಗಪ್ಪ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಹೆಚ್. ನಿಂಗಪ್ಪ 2006ರಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. 2013ರಲ್ಲಿ ಅವರಿಗೆ ಜೆಡಿಎಸ್ ಟಿಕೆಟ್ ಕೈ ತಪ್ಪಿತ್ತು. ಆಗ ಕೆಜೆಪಿಯಿಂದ ಕಣಕ್ಕಿಳಿದು 22,709 ಮತಗಳನ್ನು ಪಡೆದಿದ್ದರು.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತ್ತೆ ಜೆಡಿಎಸ್‌ಗೆ ವಾಪಸ್ ಆಗಿದ್ದರು. ಆದರೆ ಡಿ. ಸಿ. ಗೌರಿಶಂಕರ್ ಜೆಡಿಎಸ್ ಟಿಕೆಟ್ ಪಡೆದು ಕಣಕ್ಕಿಳಿದರು, ಗೆಲವು ಕಂಡರು.
ಪಕ್ಷದ ನಾಯಕರ ವರ್ತನೆಯಿಂದ ಬೇಸತ್ತು ಹೆಚ್. ನಿಂಗಪ್ಪ ಜೆಡಿಎಸ್ ಪಕ್ಷವನ್ನು ತೊರೆದಿದ್ದಾರೆ. ಅವರು ಶೀಘ್ರದಲ್ಲಿಯೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಕಳೆದ ವಾರ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ತಾವು ಜೆಡಿಎಸ್‌ಗೆ ವಾಪಸ್ ಆಗುವುದಿಲ್ಲ ಎಂದು ಘೋಷಣೆ ಮಾಡಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಅವರು ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ.
ಇದುವರೆಗೂ ಜೆಡಿಎಸ್ ತೊರೆದ ನಾಯಕರು
* ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ
* ನವಲಗುಂದ ಕ್ಷೇತ್ರದ ಮಾಜಿ ಶಾಸಕ ಕೋನರಡ್ಡಿ
* ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ
* ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಸಹ ಪಕ್ಷ ತೊರೆಯಲಿದ್ದಾರೆ
* ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಸಹ ಪಕ್ಷ ಬಿಡಲಿದ್ದಾರೆ.











Click it and Unblock the Notifications