ಸಾಗರ ಕ್ಷೇತ್ರದ ಟಿಕೆಟ್ ಗೊಂದಲ: ಬೇಳೂರು ಗೋಪಾಲಕೃಷ್ಣ ಸಂದರ್ಶನ
ಬೆಂಗಳೂರು, ಮಾರ್ಚ್ 15 : 'ಸಾಗರದಿಂದ ಸ್ಪರ್ಧಿಸುವಂತೆ ಹರತಾಳು ಹಾಲಪ್ಪ ಅವರಿಗೆ ಸೂಚನೆ ನೀಡಿರುವುದು ಹೌದು. ಬೇಳೂರು ಗೋಪಾಲಕೃಷ್ಣ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಬ್ಬರನ್ನು ಕರೆದು ಮಾತನಾಡುವೆ. ಬೇಳೂರು ಅವರಿಗೆ ಪಕ್ಷದಲ್ಲಿ ಬೇರೆ ಸ್ಥಾನಮಾನ ನೀಡಲಾಗುತ್ತದೆ'.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಫೆ.25ರಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ಹೇಳಿದ ಮಾತಿದು. ಅಂದಿನಿಂದಲೂ ಸಾಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸೊರಬದಿಂದ ಸ್ಪರ್ಧಿಸುತ್ತಿದ್ದ ಹರತಾಳು ಹಾಲಪ್ಪ ಅವರು ಈ ಬಾರಿ ಕ್ಷೇತ್ರ ಬದಲಾವಣೆ ಮಾಡಿ ಸಾಗರದಿಂದ ಸ್ಪರ್ಧಿಸಲು ಸಿದ್ಧವಾಗುತ್ತಿದ್ದಾರೆ.
ಟಿಕೆಟ್ ಗೊಂದಲದ ಕುರಿತು ಬೇಳೂರು ಗೋಪಾಲಕೃಷ್ಣ ಹೇಳುವುದೇನು?. ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ...

ಸಾಗರ ಕ್ಷೇತ್ರದಿಂದ ಹಾಲಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ದಾರಲ್ಲ?
ನೋಡಿ..ಯಾರು ಬೇರಾದರೂ ಸ್ಪರ್ಧೆ ಮಾಡಲು ಅವಕಾಶವಿದೆ. ಹಾಲಪ್ಪ ಮಾತ್ರವಲ್ಲ ಸಾಗರ ಕ್ಷೇತ್ರದಲ್ಲಿ ಇನ್ನೂ ನಾಲ್ಕೈದು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹಾಲಪ್ಪ ಅವರು ಸ್ಪರ್ಧೆ ಮಾಡಲು ಅವಕಾಶ ಕೇಳಿದ್ದಾರೆ. ನಾವು ಬೇಡ ಎಂದು ಹೇಳುವುದಕ್ಕೆ ಆಗುವುದಿಲ್ಲ. ಯಾರಿಗೆ ಟಿಕೆಟ್? ಎಂದು ಪಕ್ಷ ನಿರ್ಧಾರ ಮಾಡುತ್ತದೆ, ಅವರಿಗೆ ನಾವು ಬೆಂಬಲ ನೀಡುತ್ತೇವೆ.
ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
ಯಡಿಯೂರಪ್ಪ ಅವರು ಸಾಗರದಿಂದ ಹಾಲಪ್ಪ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಕೆಲವು ದಿನಗಳ ಬಳಿಕ ನಮ್ಮ ನಾಯಕರಾದ ಯಡಿಯೂರಪ್ಪ ಅವರು ರಾಜ್ಯದಲ್ಲಿ ಟಿಕೆಟ್ ಹಂಚಿಕೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಟಿಕೆಟ್ ಸಿಗುವ ವಿಶ್ವಾಸ ನನಗಿದೆ.
ಟಿಕೆಟ್ ಬಗ್ಗೆ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿದ್ದೀರಾ?
ಎರಡು ಮೂರು ಸಲ ನಾನು ನಮ್ಮ ನಾಯಕರಾದ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಮಾತುಕತೆ ಸಮಯದಲ್ಲಿ ರಾಷ್ಟ್ರೀಯ ನಾಯಕರೆಲ್ಲ ತೀರ್ಮಾನ ಕೈಗೊಳ್ಳುತ್ತಾರೆ. ಇನ್ನೂ ಸಮಯವಿದೆ ಮಾತನಾಡೋಣ ಎಂದು ಹೇಳಿದ್ದಾರೆ. ಇಂದಿಗೂ ನನಗೆ ಟಿಕೆಟ್ ಸಿಗುವ ಭರವಸೆ ಇದೆ.
ಹಾಲಪ್ಪ, ಬೇಳೂರು ಅವರ ನಡುವೆ ಅಸಮಾಧಾನವಿದೆಯೇ?
ಸಾಗರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಹರತಾಳು ಹಾಲಪ್ಪ ಮತ್ತು ನನ್ನ ನಡುವೆ ಯಾವುದೇ ಅಸಮಾಧಾನವಿಲ್ಲ. ನಾನು ನಾಲ್ಕೂ ಮುಕ್ಕಾಲು ವರ್ಷದಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ, ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಆದ್ದರಿಂದ, ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ.
ಸಾಗರದಲ್ಲಿ ಕಳೆದ ಬಾರಿ ಹಿನ್ನಡೆ ಉಂಟಾಗಿತ್ತು?
ಪಕ್ಷ ಸಂಘಟನೆ ಮಾಡಿದರೆ, ಜನರ ಜೊತೆಗಿರುವ ನಾಯಕನನ್ನು ಜನರು ಆಯ್ಕೆ ಮಾಡುತ್ತಾರೆ. ನಾಲ್ಕೂವರೆ ವರ್ಷಗಳಿಂದ ನಾನು ಪಕ್ಷ ಸಂಘಟಿಸಿದ್ದೇನೆ. ಜನರ ಜೊತೆ, ಯುವಕರ ಜೊತೆ ಇದ್ದೇನೆ.
ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ.
ನನಗೆ ಟಿಕೆಟ್ ಸಿಕ್ಕರೆ ಗೆಲ್ಲುವ ವಿಶ್ವಾಸವಿದೆ. ಸಾಗರದಲ್ಲಿ ಎರಡು ಬಾರಿ ಬಲಾಢ್ಯರಾದ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಿದ್ದು ಬೇಳೂರು ಗೋಪಾಲಕೃಷ್ಣ.

ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರಲಿದ್ದಾರೆಯೇ?
ಕಳೆದ ಎರಡು ದಿನಗಳಿಂದ ಈ ಸುದ್ದಿ ಹಬ್ಬಿದೆ. ಇಂತಹ ಸುದ್ದಿ ಹಬ್ಬಿಸುತ್ತಿರುವವರು ಹುಚ್ಚರು. ನನಗೆ ಕಾಂಗ್ರೆಸ್ ಪಕ್ಷ ಸೇರುವ ಅಗತ್ಯವೇ ಇಲ್ಲ. ಟಿಕೆಟ್ ಆಕಾಂಕ್ಷಿಯಾದ ಯಾರೋ ಒಬ್ಬರು ಈ ಥರದ ಸುದ್ದಿ ಹಬ್ಬಿಸಿದ್ದಾರೆ. ಈ ರೀತಿಯ ಯಾವುದೇ ಪ್ರಸ್ತಾವನೆ ನನ್ನ ಮುಂದಿಲ್ಲ. ಕಾಂಗ್ರೆಸ್ ಅಥವ ಜೆಡಿಎಸ್ ಜೊತೆ ನಾನು ಮಾತುಕತೆ ನಡೆಸಿಲ್ಲ.
ಸಾಗರ ಕ್ಷೇತ್ರದಲ್ಲಿ ಎದುರಾಳಿ ಯಾರು?
ಸಾಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿಲ್ಲ. ಬಿಜೆಪಿಗೆ ಕಾಂಗ್ರೆಸ್ ಪಕ್ಷವೇ ಎದುರಾಳಿ. ಕಾಗೋಡು ತಿಮ್ಮಪ್ಪ ಅವರೇ ನಮ್ಮ ಎದುರಾಳಿಗಳು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಷೇತ್ರದಲ್ಲಿ ಜಯಗಳಿಸಲಿದ್ದಾರೆ ಎಂಬ ನಂಬಿಕೆ ನನಗಿದೆ.












Click it and Unblock the Notifications