ಮಾಜಿ ಸಚಿವ ರೇವಣ್ಣಗೆ ಬಿಗ್ ಶಾಕ್: ಹೊಳೆನರಸೀಪುರ ಶಾಸಕ ಜೈಲು ಪಾಲು
ಬೆಂಗಳೂರು, ಮೇ 08: ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆಯನ್ನು ಕಿಡ್ನಾಪ್ ಮಾಡಿಸಿದ ಆರೋಪದ ಮೇಲೆ ಎಸ್‌ಐಟಿ ವಶದಲ್ಲಿದ್ದರುವ ಮಾಜಿ ಸಚಿವ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ.
ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣದ ಜಾಮೀನು ಅರ್ಜಿ ತಿರಸ್ಕಾರವಾಗಿದ್ದು, ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ 17ನೇ ಎಸಿಎಂಎಂ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣ ಸಂಬಂಧ ಇಂದು ನ್ಯಾಯಾಧೀಶರ ಮುಂದೆ ರೇವಣ್ಣ ಅವರನ್ನು ಹಾಜರುಪಡಿಸಲಾಗಿದ್ದು, ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮಾಜಿ ಸಚಿವರಿಗೆ ಏಳು ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಮಾಜಿ ಸಚಿವ ರೇವಣ್ಣರನ್ನು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಲಿದ್ದಾರೆ.
ಪ್ರಕರಣದ ಹಿನ್ನೆಲೆ ಏನು..?
ಮೈಸೂರು ಜಿಲ್ಲೆಯ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಿಡ್ನಾಪ್ ಪ್ರಕರಣದ ದೂರಿನ ಆಧಾರದ ಮೇಲೆ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಹಾಸನದಲ್ಲಿ ಅಶ್ಲೀಲ ವಿಡಿಯೋ ಬಹಿರಂಗವಾದ ಬಳಿಕ ತಾಯಿ ನಾಪತ್ತೆಯಾಗಿದ್ದಾರೆ ಎಂದು 20 ವರ್ಷದ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ದೂರಿನಲ್ಲಿ ಎರಡನೇ ಆರೋಪಿಯಾಗಿದ್ದ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿ ಸತೀಶ್ ಬಾಬು ಎನ್ನುವವರನ್ನು ಎಸ್‌ಐಟಿ ಮೊದಲೇ ಬಂಧಿಸಿತ್ತು. ಬಳಿಕ ಪ್ರಕರಣದ ಮೊದಲ ಆರೋಪಿಯಾದ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು.












Click it and Unblock the Notifications