ಬಿಜೆಪಿ-ಜೆಡಿಎಸ್ ಮೈತ್ರಿ ನೋಡಿ ಕಾಂಗ್ರೆಸ್‌ಗೆ ನಡುಕ- ಅಶ್ವತ್ಥ್ ನಾರಾಯಣ್
ಬೆಂಗಳೂರು, ಏಪ್ರಿಲ್ 10: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಎನ್.ಡಿ.ಎ ಅಭ್ಯರ್ಥಿಗಳು ಇಂದು ವಿಜಯನಗರದ ಆದಿಚುಂಚನಗರಿ ಮಠಕ್ಕೆ ಭೇಟಿ ನೀಡಿ ಡಾ. ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಒಗ್ಗಟ್ಟಿನ ಸಂದೇಶವನ್ನು ಕೊಟ್ಟಿದ್ದೇವೆ. ಈ ಒಗ್ಗಟ್ಟಿನ ಸಂದೇಶ ನೋಡಿ ಕಾಂಗ್ರೆಸ್ಸಿನವರಿಗೆ ಆತಂಕ ಮತ್ತು ನಡುಕ ಉಂಟಾಗಿದೆ ಎಂದು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಕಾಂಗ್ರೆಸ್ಸಿನವರಿಗೆ ಪ್ರತಿಪಕ್ಷದ ಸ್ಥಾನವನ್ನೂ ಪಡೆಯಲಾಗುತ್ತಿಲ್ಲ. ಆದ್ದರಿಂದ ಅವರಿಗೆ ಮತ ಹಾಕುವುದರಿಂದ ಯಾವುದೇ ಪ್ರಯೋಜನ ಇಲ್ಲ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರವನ್ನು ಈ ಹಿಂದೆ ಬೀಳಿಸಿದ್ದು ಯಾರೆಂದು ಕುಮಾರಣ್ಣನವರು ಈಗಾಗಲೇ ಹೇಳಿದ್ದಾರೆ. ಕಾಂಗ್ರೆಸ್ಸಿನ ವರಿಷ್ಠರು ಜೊತೆಗಿದ್ದೇ ಕುತ್ತಿಗೆ ಕೊಯ್ದರು ಎಂದು ಅವರು ಹೇಳಿದ್ದಾರೆ ಎಂದು ವಿವರಿಸಿದರು.

ಪಾಪ, ಅವರಿಗೆ ಬೇಸಿಗೆ ಬಿಸಿ, ರಾಜಕೀಯ ಬಿಸಿ ತಡಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು. ಸೋಲಿನ ಆತಂಕ ಕಾಂಗ್ರೆಸ್ಸಿನವರನ್ನು ಕಾಡುತ್ತಿದ್ದು, ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಏನೇ ಆದರೂ ಈ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಮೂಲಕ ನಮ್ಮ 28 ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿ.ಕೆ.ಸುರೇಶ್ ಅವರು ಆ ಭಾಗದಲ್ಲಿ ಏನೇನೂ ಕೆಲಸ ಮಾಡಿಲ್ಲ. ಅಲ್ಲಿ ಭಯದ ವಾತಾವರಣ ಇತ್ತು. ಅಲ್ಲಿ ಪ್ರೀತಿಯ ವಾತಾವರಣ ಬೇಕಿದೆ. ಅದಕ್ಕೆ ಅರ್ಹ ವ್ಯಕ್ತಿ ಬೇಕು. ಬೆಂಗಳೂರು ಪ್ರಗತಿದಾಯಕ, ಭರವಸೆದಾಯಕ ನಗರ. ಡಾ. ಮಂಜುನಾಥ್ ಅವರ ಗೆಲುವು ಅತ್ಯಂತ ಸ್ಪಷ್ಟ. ಸುರೇಶ್ ಜನಕ್ಕೆ ಬೇಡವಾಗಿದ್ದಾರೆ. ಮೋದಿಯವರು ಬೇಕು ಎಂಬ ಮನಸ್ಥಿತಿ ಜನರದು ಎಂದು ಬೆಂಗಳೂರು ಗ್ರಾಮಾಂತರದ ಪರಿಸ್ಥಿತಿ ಹೀಗಿದೆ ಎಂದು ವಿವರಿಸಿದರು.

ನಮ್ಮೆಲ್ಲರಿಗೂ ಒಂದೇ ಗುರಿ ಇದೆ-ಯದುವೀರ್ ಒಡೆಯರ್
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಒಂದು ಒಳ್ಳೆಯ ವಾತಾವರಣ ಸೃಷ್ಟಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕಂತೆ ಚುನಾವಣಾ ಉತ್ಸವದಲ್ಲಿ ಎಲ್ಲರೂ ಭಾಗಿಯಾಗುತ್ತಿದ್ದಾರೆ. ಫಲಿತಾಂಶ ನಮ್ಮ ಪರವಾಗಿಯೇ ಬರುತ್ತದೆ ಎನ್ನುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರು ಅವರ ತಂತ್ರಗಾರಿಕೆ ಮೇಲೆ ಕೆಲಸ ಮಾಡುತ್ತಿದ್ದಾರೆ. ನಾವು ನಮ್ಮ ತಂತ್ರಗಾರಿಕೆ, ನಮ್ಮ ಕೆಲಸ ಮೇಲೆ ನಂಬಿಕೆಯಿಟ್ಟು ನಾವು ಮುಂದುವರಿಯುತ್ತಿದ್ದೇವೆ. ಸದ್ಯ ಮೈಸೂರು ಬಿಜೆಪಿಯಲ್ಲಿದ್ದ ಎಲ್ಲಾ ಅಸಮಧಾನಗಳು ಶಮನ ಆಗಿದೆ. ಈಗ ಎಲ್ಲರಿಗೂ ಒಂದೇ ಗುರಿ ಇದೆ. ಪ್ರಧಾನ ಮಂತ್ರಿ ಅವರೇ ಮತ್ತೆ ಪ್ರಧಾನಿಯಾಗಬೇಕು ಎನ್ನುವುದು ನಮ್ಮ ಗುರಿ ಎಂದರು.












Click it and Unblock the Notifications