ಪಂಚಭೂತಗಳಲ್ಲಿ ಲೀನರಾದ ಕರ್ನಾಟಕ ರಾಜಕೀಯ ಮುತ್ಸದ್ದಿ ಎಸ್.ಎಂ ಕೃಷ್ಣ
ಮಂಡ್ಯ, ಡಿಸೆಂಬರ್ 11: ಕರ್ನಾಟಕ ಮಾಜಿ ಮುಖ್ಯಮಂತ್ರಿ, ಕೇಂದ್ರದ ವಿದೇಶಾಂಗ ಸಚಿರಾಗಿದ್ದ, ಮಹಾರಾಷ್ಟ್ರ ರಾಜ್ಯಪಾಲರಾಗಿ ಭಾರತದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ರಾಜಕಾರಣ ಎಸ್.ಎಂ. ಕೃಷ್ಣ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ( ಡಿಸೆಂಬರ್ 10) ಮಂಗಳವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.
ಸಾರ್ವಜನಿಕ ಅಂತಿಮ ದರ್ಶನದ ಬಳಿಕ ಎಸ್.ಎಂ. ಕೃಷ್ಣ ಅವರ ಪಾರ್ಥೀವ ಶರೀರವನ್ನು ಅವರ ಹುಟ್ಟುರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಗೆ ತರಲಾಗಿದ್ದು, ಇಂದು(ಡಿಸೆಂಬರ್ 11) ಸೋಮನಹಳ್ಳಿಯಲ್ಲಿಯೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ನಡೆದಿದೆ. ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಗೌರವ ಪೂರ್ವಕವಾಗಿ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಲಾಯ್ತು.
ವೈದಿಕ ಪಂಡಿತರಾದ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆದಿದ್ದು, ಮೊಮ್ಮಗ ಅಮರ್ತ್ಯ ಹೆಗ್ಡೆ ಅಗ್ನಿ ಸ್ಪರ್ಶ ಮಾಡಿದರು. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಕರ್ನಾಟಕ ರಾಜಕೀಯ ಮುತ್ಸದ್ದಿ ಎಸ್.ಎಂ ಕೃಷ್ಣ ಅವರಿಗೆ ಕಣ್ಣೀರಿನ ವಿದಾಯ ಹೇಳಲಾಯಿತು.
ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ
ಕೇಂದ್ರ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ಮೂರು ದಿನಗಳು ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಿದೆ. ದಿವಂಗತರ ಗೌರವಾರ್ಥವಾಗಿ ದಿನಾಂಕ: 11.12.2024ರ ಬುಧವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ (ಎಲ್ಲಾ ಅನುದಾನಿತ ವಿದ್ಯಾ ಸಂಸ್ಥೆಗಳು ಸೇರಿದಂತೆ) ಸಾರ್ವಜನಿಕ ರಜೆಯನ್ನು ಘೋಷಿಸಿದ ಸರ್ಕಾರ, ದಿನಾಂಕ: 10.12.2024 ರಿಂದ ದಿನಾಂಕ:12.12.2024 ರವರೆಗೆ (ಉಭಯ ದಿನಗಳು ಸೇರಿ) ಮೂರು ದಿನಗಳು ರಾಜ್ಯಾದ್ಯಂತ ಶೋಕಾಚರಣೆ ಮಾಡಲಾಗುವುದು. ಹಾಗೂ ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ನಿಯತವಾಗಿ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವುದು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.












Click it and Unblock the Notifications