ಹೆಚ್ಡಿ ದೇವೇಗೌಡರ ಆಪ್ತ ಮಾಜಿ ಎಂಎಲ್ಸಿ ಪಟೇಲ್ ಶಿವರಾಂ ನಿಧನ
ಬೆಂಗಳೂರು, ಜನವರಿ 16: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಆಪ್ತರಾಗಿದ್ದ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಟೇಲ್ ಶಿವರಾಂ (75) ಗುರುವಾರ ಬೆಳಗ್ಗೆ ನಿಧನರಾರದರು. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಟೇಲ್ ಶಿವರಾಂ ಅವರು, ಹಾಸನ ನಗರದ ಹೌಸಿಂಗ್ ಬೋರ್ಡ್ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ, ನಾಲ್ಕು ದಶಕಗಳ ಕಾಲ ಜೆಡಿಎಸ್ನಲ್ಲಿ ಸಕ್ರಿಯರಾಗಿದ್ದ ಹಾಸನದ ಪ್ರಭಾವಿ ಮುಖಂಡ ಪಟೇಲ್ ಶಿವರಾಂ ನಿಧನಕ್ಕೆ ಹೆಚ್ ಡಿ ದೇವೇಗೌಡರ ಆಪ್ತರೂ ಆಗಿದ್ದ ಶಿವರಾಂ ನಿಧನಕ್ಕೆ ಪಕ್ಷದ ನಾಯಕರು ಸಂತಾಪ ಸೂಚಿಸಿದ್ದಾರೆ.

ಪಟೇಲ್ ಶಿವರಾಂ 2010-2016ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕ, ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಪಟೇಲ್ ಶಿವರಾಂ ಕಾರ್ಯನಿರ್ವಹಿಸಿದ್ದರು.
ಮಾಜಿ ವಿಧಾನ ಪರಿಷತ್ ಸದಸ್ಯರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಹಾಗು ಜೆಡಿಎಸ್ ಪಕ್ಷದ ಹಾಸನದ ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಪಟೇಲ್ ಶಿವರಾಂ ಅವರು ಹೃದಯಾಘಾತದಿಂದ ನಿಧನರಾದ ವಿಷಯ ಅತೀವ ದುಃಖವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆ ಎಂದು ಹೆಚ್ ಡಿ ದೇವೇಗೌಡ್ರು ತಿಳಿಸಿದರು.
ಪಟೇಲ್ ಶಿವರಾಂ ನಿಧನಕ್ಕೆ ಹೆಚ್ ಡಿ ಕುಮಾರಸ್ವಾಮಿ ಸಂತಾಪ
ಹಾಸನ ಜಿಲ್ಲೆಯ ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಪಟೇಲ್ ಶಿವರಾಂ ಅವರ ನಿಧನಕ್ಕೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ. ಸರಳರು, ಸಜ್ಜನರು, ನಮ್ಮ ತಂದೆ ಹೆಚ್.ಡಿ.ದೇವೇಗೌಡ ಅವರ ಆತ್ಮೀಯರೂ ಆಗಿದ್ದ ಹಿರಿಯರಾದ ಪಟೇಲ್ ಶಿವರಾಂ ಅಗಲಿಕೆ ಅತೀವ ದುಃಖ ತಂದಿದೆ. ನಮ್ಮ ಪಕ್ಷದಲ್ಲಿ ಹಲವು ದಶಕಗಳ ಸೇವೆ ಸಲ್ಲಿಸಿದ್ದ ಶಿವರಾಂ ಅವರು ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷ ಸಂಘಟನೆಗೆ ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ದುಡಿದಿದ್ದರು ಎಂದು ಸಚಿವರು ಹೇಳಿದ್ದಾರೆ.
ಹಾಸನ ಜಿಲ್ಲಾ ಪರಿಷತ್ ಸದಸ್ಯರಾಗಿ, ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ರೈತಪರ ಕೆಲಸ ಮಾಡಿದ್ದ ಶ್ರೀಯುತರು, ಹಾಲಿ ಬ್ಯಾಂಕ್ ಕಟ್ಟಡ ಕಟ್ಟಿದ ಹಿರಿಮೆ ಅವರದು. ಹಾಲಿ ಅಪೆಕ್ಸ್ ನಿರ್ದೇಶಕರಾಗಿದ್ದರು. ಹಿಂದೆ ದೆಹಲಿಯ ಕ್ರಿಪ್ಕೋ ಸದಸ್ಯರೂ ಆಗಿದ್ದರು.
ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಶಿವರಾಂ ಅವರು ಜನ ಸೇವೆಯಲ್ಲಿ ಸದಾ ಮುಂದಿರುತ್ತಿದ್ದರು. ಅವರ ಮಾರ್ಗದರ್ಶನದಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರ ನಿಧನ ವೈಯಕ್ತಿಕವಾಗಿ ನನಗೆ ನಷ್ಟ ಉಂಟು ಮಾಡಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕುಮಾರಸ್ವಾಮಿ ಅವರು ಪ್ರಾರ್ಥಿಸಿದ್ದಾರೆ.












Click it and Unblock the Notifications