ಸುದೀಪ್ vs ಅಜಯ್ ದೇವಗನ್ ಭಾಷಾ ಸಮರ: ಆಖಾಡಕ್ಕಿಳಿದ ಸಿದ್ದರಾಮಯ್ಯ
ಬೆಂಗಳೂರು, ಏಪ್ರಿಲ್ 27: ಹಿಂದಿ ರಾಷ್ಟ್ರೀಯ ಭಾಷೆಯ ವಿಚಾರವಾಗಿ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವಿಟ್ ಸಮರ ನಡೆದಿತ್ತು.
ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಸುದೀಪ್ ಹೇಳಿದ್ದಕ್ಕೆ, ನೀವೇಕೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಬಿಡುತ್ತೀರಿ ಎಂದು ಅಜಯ್ ದೇವಗನ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಇದರಿಂದಾಗಿ ಇಬ್ಬರು ಸ್ಟಾರ್‌ಗಳ ನಡುವೆ ಟ್ವಿಟ್ಟರ್‌ನಲ್ಲೇ ಪ್ರಶ್ನೋತ್ತರ ನಡೆದಿತ್ತು.
ಅಜಯ್ ದೇವಗನ್ ಅವರ ಟ್ವೀಟ್‌ಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದಿ ಎಂದಿಗೂ ಮತ್ತು ಎಂದೆಂದಿಗೂ ನಮ್ಮ ರಾಷ್ಟ್ರೀಯ ಭಾಷೆಯಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಪ್ರತಿಯೊಂದು ಭಾಷೆಯು ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ, ಅದರ ಬಗ್ಗೆ ಜನರು ಹೆಮ್ಮೆಪಡುತ್ತಾರೆ. ನಾನೊಬ್ಬ ಕನ್ನಡಿಗ ಎಂದು ಹೆಮ್ಮೆ ಪಡುತ್ತೇನೆ!! ಎಂದು ಟ್ವೀಟ್ ಮಾಡಿ ಕಿಚ್ಚ ಸುದೀಪ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ತಪ್ಪು ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್
ಇನ್ನು ಅಜಯ್ ದೇವಗನ್ ಪ್ರಶ್ನೆಗೆ ಉತ್ತರಿಸಿದ್ದ ಸುದೀಪ್, ನಾನು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೇನೆ ಎನ್ನುವುದನ್ನು ಖುದ್ದಾಗಿ ತಮ್ಮನ್ನು ಭೇಟಿಯಾದ ನಂತರ ವಿವರಿಸುವೆ. ನನ್ನ ಹೇಳಿಕೆ ಸಂಪೂರ್ಣ ವಿಭಿನ್ನವಾದದ್ದು. ಯಾರನ್ನೂ ನೋಯಿಸಲು, ಪ್ರಚೋದಿಸಲು ಮತ್ತು ಚರ್ಚೆ ಮಾಡಲು ಅದನ್ನು ಹೇಳಿದ್ದಂತೂ ಅಲ್ಲ ಎಂದು ಕಿಚ್ಚ ಸುದೀಪ್ ಮತ್ತೊಂದು ಟ್ವೀಟ್ ಮಾಡಿದ್ದರು.

ಈ ಟ್ವಿಟ್‌ಗೆ ಉತ್ತರಿಸಿದ ಅಜಯ್ ದೇವಗನ್, ತಪ್ಪು ತಿಳುವಳಿಕೆಯಿಂದಾಗಿ ಇಷ್ಟೆಲ್ಲ ಆಯಿತು. ಈ ವಿಷಯವನ್ನು ತಿಳಿಗೊಳಿಸಿದ್ದಕ್ಕೆ ಧನ್ಯವಾದಗಳು ಸ್ನೇಹಿತ ಸುದೀಪ್. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಮತ್ತು ಪ್ರತಿಯೊಬ್ಬರೂ ನಮ್ಮ ಭಾಷೆಯನ್ನು ಗೌರವಿಸಬೇಕು ಎಂದು ನಿರೀಕ್ಷಿಸುತ್ತೇವೆ. ಬಹುಶಃ ಅನುವಾದದಲ್ಲಿ ಏನೋ ಮಿಸ್ ಆಗಿರಬಹುದು ಎಂದು ಅಜಯ್ ದೇವಗನ್ ಟ್ವಿಟ್ ಮಾಡುವ ಮೂಲಕ ಈ ಪ್ರಕರಣಕ್ಕೆ ಅಂತ್ಯ ಹಾಡಲು ಪ್ರಯತ್ನಿಸಿದ್ದಾರೆ.












Click it and Unblock the Notifications