Terror Suspects: ಶಂಕಿತ ಉಗ್ರರ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು?
ಬೆಂಗಳೂರು: ರಾಜಧಾನಿ ಇಂದು ಬೆಚ್ಚಿಬಿದ್ದಿದೆ, ಬೆಂಗಳೂರು ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರ ಹೆಡೆಮುರಿ ಕಟ್ಟಿದ್ದಾರೆ. ಈ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ. ಇದೇ ಹೊತ್ತಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಶಂಕಿತ ಉಗ್ರರ ಬಂಧನದ ಕುರಿತು ಮಾತನಾಡಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕದ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾಜಿ ಸಿಎಂ ಎಚ್‌ಡಿಕೆ ಮಹತ್ವದ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಹಾದಿ ಬೀದಿಯಲ್ಲಿ ಕೊಲೆಗಳಾಗುತ್ತಿವೆ. ಇನ್ನು ಕಾನೂನು ಸುವ್ಯವಸ್ಥೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಲ್ಲಿ ಶಂಕಿತ ಉಗ್ರರನ್ನು ಬಂಧಿಸಿದ ಘಟನೆಗೆ ಸಂಬಂಧ ಈ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ, ಅನಾಹುತ ನಡೆಯುವ ಮೊದಲೇ ಶಂಕಿತ ಭಯೋತ್ಪಾದಕರನ್ನು ಹಿಡಿದಿರುವ ನಮ್ಮ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ. ಈ ಸೂಕ್ಷ್ಮ ವಿಚಾರದಲ್ಲಿ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ..
ಸರ್ಕಾರ ಕೂಡ ಈ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕಾನೂನು ಸುವ್ಯವಸ್ಥೆ ಬಗ್ಗೆ ಬಹಳಷ್ಟು ಕಾಳಜಿ ವಹಿಸಬೇಕು. ಇತ್ತೀಚೆಗೆ ರಸ್ತೆಗಳಲ್ಲೇ ಕೊಲೆಗಳಾಗ್ತಿವೆ. ಜನರಿಗೆ ಆತಂಕ ಎದುರಾಗಿದೆ. ಕೂಡಲೇ ಸರ್ಕಾರ ಇಂತಹ ಘಟನೆ ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಒತ್ತಾಯ ಮಾಡಿದ್ದಾರೆ. ಅಲ್ಲದೆ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಜನ ನೆಮ್ಮದಿಯಿಂದ ಬದುಕುವಂಥ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮಾಜಿ ಸಿಎಂ ಎಚ್‌ಡಿಕೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಬೆಂಗಳೂರಿನ ಈ ಘಟನೆ ಈಗ ದೇಶಾದ್ಯಂತ ಸದ್ದು ಮಾಡುವ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಏನಿದು ಮಹತ್ವದ ಕಾರ್ಯಾಚರಣೆ?
ರಾಜಧಾನಿ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಐವರು ಶಂಕಿತ ಉಗ್ರರನ್ನು ವಶಕ್ಕೆ ಪಡೆಯಲಾಗಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದೆ. ವಶಕ್ಕೆ ಪಡೆದ ಐವರು ಶಂಕಿತ ಉಗ್ರರು ಬೆಂಗಳೂರಿನ ಆರ್‌ಟಿ ನಗರದ ನಿವಾಸಿಗಳು ಎನ್ನಲಾಗಿದೆ. ಸಿಸಿಬಿ & ಕೇಂದ್ರ ಗುಪ್ತಚರ ಇಲಾಖೆ ಈ ಜಂಟಿ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಶಂಕಿತರಿಂದ ಮೊಬೈಲ್ ಸೇರಿ ಹಲವು ವಸ್ತು ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಶಂಕಿತರ ನೆಟ್‌ವರ್ಕ್ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದು ಇನ್ನೂ ಹಲವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಕೇಂದ್ರ ಕಾರಾಗೃಹದಲ್ಲಿ ಇದ್ದರು!
ಇನ್ನೂ ಇಬ್ಬರು ಈ ಐವರು ಶಂಕಿತ ಉಗ್ರರ ಜೊತೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದ್ದು, ಮಾಹಿತಿ ಕಲೆಹಾಕಲಾಗುತ್ತಿದೆ. ಮಡಿವಾಳ ಟೆಕ್ನಿಕಲ್ ಸೆಲ್‌ನಲ್ಲಿ ಶಂಕಿತರ ತೀವ್ರ ವಿಚಾರಣೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಮೂಲಗಳ ಪ್ರಕಾರ, ಐವರು ಆರೋಪಿಗಳು ಬೆಂಗಳೂರಲ್ಲಿ ಸ್ಫೋಟಕ್ಕೆ ನಿಖರ ಯೋಜನೆ ರೂಪಿಸಿದ್ದರು. ಭಯೋತ್ಪಾದಕರ ಸಂಪರ್ಕಕ್ಕೆ ಬರುವ ಮೊದಲು 2017ರಲ್ಲಿ ಕೊಲೆ ಕೇಸ್‌ನಲ್ಲಿ ಬಂಧಿಸಲಾಗಿತ್ತು. ಆರೋಪಿಗಳನ್ನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಒಟ್ನಲ್ಲಿ ರಾಜ್ಯ ರಾಜಧಾನಿ, ಐಟಿ ತವರು ಬೆಂಗಳೂರು ಮತ್ತೊಮ್ಮೆ ಉಗ್ರರ ಟಾರ್ಗೆಟ್ ಆಗಿದೆಯಾ? ಎಂಬ ಡೌಟ್ ಶುರುವಾಗಿದೆ. ಪೊಲೀಸರು ಮಾಹಿತಿ ಸಿಗುತ್ತಿದ್ದಂತೆ ಅಲರ್ಟ್ ಆಗಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಭಾರಿ ದೊಡ್ಡ ಅನಾಹುತ ತಪ್ಪಿದೆ. ಅಲ್ಲದೆ ಇನ್ನೂ ಹಲವು ವಿಚಾರಗಳನ್ನ ಹುಡುಕಲಾಗುತ್ತಿದ್ದು, ಶಂಕಿತರ ಮೂಲ ಪತ್ತೆ ಮಾಡಲಾಗುತ್ತಿದೆ. ಇದರ ಜೊತೆಗೆ ಶಂಕಿತರೊಂದಿಗೆ ಇನ್ನೂ ಎಷ್ಟು ಜನ ಸಂಪರ್ಕದಲ್ಲಿ ಇದ್ದರು ಎಂಬುದನ್ನ ಕೂಡ ಸರ್ಚ್ ಮಾಡುತ್ತಿದ್ದಾರೆ ಪೊಲೀಸರು. ಈ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿರುವುದು ವಿಶೇಷ.












Click it and Unblock the Notifications