ನಾನು ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ: ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಫೆ 18: "ರಾಷ್ಟ್ರಧ್ವಜದ ವಿಷಯದಲ್ಲಿ ನಾನು ಸಚಿವ ಕೆ.ಎಸ್.ಈಶ್ವರಪ್ಪ ಅವರ ಪರ ವಕೀಲಿಕೆ ಮಾಡುತ್ತಿಲ್ಲ" ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, ನಾನು ಇರುವ ವಿಷಯವನ್ನು ಇದ್ದ ಹಾಗೆ ಹೇಳಿದ್ದೇನೆ. ಈಶ್ವರಪ್ಪ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸಹಜವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
"ಇದ್ದ ವಿಷಯವನ್ನೇ ಹೇಳಿದ್ದೇನೆ, ಕಲಾಪ ಹಾಳು ಮಾಡುವುದು ಬಿಟ್ಟು ಕಾಂಗ್ರೆಸ್ ಕೋರ್ಟಿಗೆ ಪಿಐಎಲ್ ಹಾಕಲಿ. ಹತ್ತು ವರ್ಷಗಳ ಭ್ರಷ್ಟಾಚಾರ ಚರ್ಚೆಗೆ ದಾಖಲೆ ಸಿದ್ಧ ಮಾಡಿಕೊಂಡಿದ್ದೆ. ರಾಜ್ಯದಲ್ಲಿ ರಾಜಕೀಯ ಕೋವಿಡ್ ಹರಡಿಸುವ ಷಡ್ಯಂತ್ರ ನಡೆದಿದೆ" ಎಂದು ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದರು.
"ಅವರೇನೂ ಧ್ವಜಕ್ಕೆ ಅಪಮಾನ ಆಗುವಂತಹ ಹೇಳಿಕೆ ಕೊಟ್ಟಿಲ್ಲ. ಹಾಗಂತ ನಾನೇನೂ ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ. ಧ್ವಜದ ಬಗ್ಗೆ ಅಷ್ಟೊಂದು ಹೇಳುವ ಕಾಂಗ್ರೆಸ್ ನಾಯಕರು, ಸದನದ ಬಾವಿಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತ ಪ್ರತಿಭಟನೆ ಮಾಡಿದರು. ಇದು ರಾಷ್ಟ್ರಧ್ವಜಕ್ಕೆ ನೀಡುವ ಗೌರವವೇ" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
"ಪ್ರತಿಷ್ಠೆಗೆ ಬಿದ್ದು ಮಂತ್ರಿಯ ರಾಜೀನಾಮೆ ಪಡೆಯಲು ಹೊರಟ ಕಾಂಗ್ರೆಸ್ ನಡೆಯನ್ನು ಜನ ಗಮನಿಸುತ್ತಾ ಇದ್ದಾರೆ. ಕಲಾಪಕ್ಕೆ ಅಡ್ಡಿ ಮಾಡುವವರನ್ನು ಸದನದಿಂದ ಅಮಾನತು ಮಾಡಿ, ಆ ನಂತರ ಸದನ ನಡೆಸಿ ಎಂದು ಸಭಾಧ್ಯಕ್ಷರಿಗೂ ಮನವಿ ಮಾಡುತ್ತೇನೆ. ಕೋವಿಡ್ ಅನಾಹುತ ಸಂದರ್ಭದಲ್ಲಿ ಆಗುತ್ತಿರುವ ಮತ್ತೊಂದು ರಾಜಕೀಯ ಕೋವಿಡ್ ದುರಂತವಿದು" ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.

ಈ ವಿನಾಶಕಾರಿ ಕೋವಿಡ್ ಅನ್ನು ಎಲ್ಲಾ ಸೇರಿ ಹರಡಿಸಬೇಡಿ
"ಈ ವಿನಾಶಕಾರಿ ಕೋವಿಡ್ ಅನ್ನು ಎಲ್ಲಾ ಸೇರಿ ಹರಡಿಸಬೇಡಿ, ನಾವು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನಕ್ಕೆ ಬಂದಿದ್ದೆವು. ಆದರೆ ಇವರು ಹಿಜಾಬ್ ಮತ್ತು ಕೇಸರಿ ಶಾಲು ಎಂದು ಕಲಾಪವನ್ನು ಹಾಳು ಮಾಡಿದರು. ಆಮೇಲೆ ಸಚಿವರ ರಾಷ್ಟ್ರಧ್ವಜದ ಹೇಳಿಕೆ ಇಟ್ಟುಕೊಂಡು ಎರಡು ದಿನಗಳ ಕಲಾಪವನ್ನು ಹಾಳುಗೆಡವಿದರು. ಇದನ್ನು ಒಪ್ಪಲು ಸಾಧ್ಯವೇ? ತಪ್ಪು ಎಂದಿದ್ದಕ್ಕೆ ಕಾಂಗ್ರೆಸ್ ನಾಯಕರು ಈಗ ಬೇರೆ ರಾಗ ಹಾಡುತ್ತಿದ್ದಾರೆ" - ಎಚ್.ಡಿ.ಕುಮಾರಸ್ವಾಮಿ.

ಕರಾವಳಿಯ ಒಂದು ಭಾಗದಲ್ಲಿ ಶುರುವಾದ ಹಿಜಾಬ್ ಗೊಂದಲ
"ಕರಾವಳಿಯ ಒಂದು ಭಾಗದಲ್ಲಿ ಶುರುವಾದ ಹಿಜಾಬ್ ಗೊಂದಲ ಮತ್ತಿತರ ಭಾಗದವರಿಗೆ ಪ್ರೇರೇಪಣೆ ಕೊಟ್ಟಂತೆ ಆಗಿದೆ. ಆ ಪ್ರದೇಶದ ಕೆಲ ಭಾಗದಲ್ಲಿ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಹೋಗುತ್ತಿದ್ದರು. ತರಗತಿ ಪ್ರವೇಶ ಮಾಡುವ ಸಮಯದಲ್ಲಿ ಹಿಜಾಬ್ ತೆಗೆದು, ಮನೆಗೆ ಹೋಗುವಾಗ ಮತ್ತೆ ಧರಿಸಿ ಹೋಗುತ್ತಿದ್ದರು. ಆರಂಭದಲ್ಲೇ ಚಿವುಟಿ ಹಾಕಬಹುದಾಗಿದ್ದ ವಿವಾದ ಎರಡು ಧರ್ಮದವರ ಸಂಘರ್ಷಕ್ಕೆ ಕಾರಣವಾಗಿದೆ. ಮಕ್ಕಳ ಮನಸ್ಸಲ್ಲಿ ದ್ವೇಷ ಬಿತ್ತಲಾಗಿದೆ. ಕೆಲ ಸಂಘಟನೆಗಳು ಇದನ್ನು ಮತಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಕಳೆದ ಎರಡು ದಿನಗಳಿಂದ ಎರಡು ಸದನದಲ್ಲಿ ಕಲಾಪಗಳು ಸ್ಥಗಿತಗೊಳಿಸುವ ಹಾಗೆ ಕಾಂಗ್ರೆಸ್ ನಡವಳಿಕೆ ಇದೆ. ಜನರು ಇದನ್ನು ಕ್ಷಮಿಸುವುದಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.

ಮಾಧ್ಯಮಗಳಲ್ಲಿ ಬಂದ ಈಶ್ವರಪ್ಪ ಅವರ ಪ್ರತಿಕ್ರಿಯೆ
"ಮಾಧ್ಯಮಗಳಲ್ಲಿ ಬಂದ ಈಶ್ವರಪ್ಪ ಅವರ ಪ್ರತಿಕ್ರಿಯೆ ಇವತ್ತಿನ ಈ ರೀತಿಯ ಕಲಾಪಗಳಿಗೆ ಕಾರಣವಾಗಿದೆ. ಅದಕ್ಕಿಂತಲೂ ಹೆಚ್ಚಿನ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಆಗಲಿಲ್ಲ. ಕಾರವಾರದ ಸಂಸದರೊಬ್ಬರು ಹಿಂದೆ ದೇಶದ ಸಂವಿಧಾನ ಬದಲಾಯಿಸುತ್ತೇವೆ ಎಂಬಂತೆ ಮಾತನಾಡಿದ್ದರು. ಬಿಜೆಪಿಯವರ ಅಜೆಂಡಾಗಳೇ ಈ ರೀತಿ ಇವೆ. ಈ ದೇಶದಲ್ಲಿ ಹಿಂದೂಗಳು ಮಾತ್ರ ಬದುಕಬೇಕು ಎಂಬ ಅಜೆಂಡಾ ಇಟ್ಟುಕೊಂಡಿದ್ದಾರೆ ಅವರು. ಇಂತಹ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡೇ ಚುನಾವಣೆಗಳು ನಡೆಯುತ್ತಿವೆ" ಎಂದು ಕುಮಾರಸ್ವಾಮಿ ಹೇಳಿದರು.

ಕೇಸರಿ ಎಂಬುದಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಇದೆ
"ಕೇಸರಿ ಎಂಬುದಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಇದೆ. ಅದರ ಬಗ್ಗೆ ನಮಗೂ ಪೂಜ್ಯ ಭಾವನೆ ಇದೆ. ಧಾರ್ಮಿಕ ಕ್ಷೇತ್ರದಲ್ಲಿ ಕಠಿಣ ಜೀವನ ಶೈಲಿ ರೂಢಿಸಿಕೊಂಡವರು ಕೇಸರಿ ಧರಿಸುತ್ತಾ ಇದ್ದರು. ಈಗ ಎಲ್ಲರ ಮೈಮೇಲೆ ಕೇಸರಿ ಹಾಕುವ ಕೆಲಸ ನಡೆಯುತ್ತಿದೆ. ಬಿಜೆಪಿ ಅಯೋಧ್ಯ ಮಂದಿರ ಕಟ್ಟುವ ಚಳುವಳಿ ಶುರು ಮಾಡಿದಾಗ ಈ ಬಳಸುವುದನ್ನು ಬಿಜೆಪಿ ಶುರು ಮಾಡಿದ್ದರು. ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಬದಲಾವಣೆ ತರಲು ಅವರು ಹೊರಟಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತ ಪಡಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ
"ಸರ್ಕಾರದ ಆಡಳಿತದ ವೈಫಲ್ಯ ಮತ್ತಿತರ ವಿಚಾರಗಳು ಕಲಾಪದಲ್ಲಿ ಚರ್ಚೆ ಆಗಬೇಕಿತ್ತು. ಉದ್ಯೋಗ, ಆರ್ಥಿಕ ಪರಿಸ್ಥಿತಿ, ಶಾಲೆಗಳ ಪರಿಸ್ಥಿತಿ ಬಗ್ಗೆ ಚರ್ಚೆ ಆಗಬೇಕಿತ್ತು. ಭ್ರಷ್ಟ ಹಗರಣಗಳ ಬಗ್ಗೆ ಚರ್ಚೆ ಮಾಡುವವನಿದ್ದೆ.
ನಾನು ಈ ಬಾರಿ ಸದನದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ, ಹಗರಣಗಳ ಬಗ್ಗೆ ಸದನದಲ್ಲಿ ದಾಖಲೆಗಳನ್ನು ಇಡಲು ತಯಾರಿ ಮಾಡಿಕೊಂಡಿದ್ದೆ. ಆದರೆ ಸದನವು ಸರಿಯಾಗಿ ನಡೆಯಲೇ ಇಲ್ಲ. ನೀವು ಕೂಡ 14 ತಿಂಗಳು ಆಡಳಿತ ಮಾಡಿದ್ದೀರಿ. ಆಗ ಸರಿ ಮಾಡಬಹುದಿತ್ತಲ್ಲ ಎಂದು ಯಾರಾದರೂ ಕೇಳಬಹುದು. ಆದರೆ ನಾನು ಆಗ ಸಿಎಂ ಅಲ್ಲ, ಎಫ್‌ಡಿಸಿ ಕೆಲಸ ಮಾಡಿದ್ದೆ ಅಷ್ಟೇ" ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರದಿಂದ ಹೇಳಿದರು.












Click it and Unblock the Notifications