ಹಿರಿಯ ರಾಜಕಾರಣಿ 'ಅಪ್ಪಣ್ಣ ಹೆಗ್ಡೆ' ಇನ್ನಿಲ್ಲ: ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ
ಉಡುಪಿ: ಉಡುಪಿ ಜಿಲ್ಲೆಯ ಪ್ರಮುಖ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ತಮ್ಮ 90 ವಯಸ್ಸಿನಲ್ಲಿ ಶನಿವಾರ (ಫೆಬ್ರವರಿ 7) ನಿಧನರಾದರು. ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ರಾಜಕೀಯ ಜೀವನ, ಸೇವೆ, ಅಗಲಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಿಸಿದ್ದಾರೆ. ಸಿಎಂ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಪ್ಪಣ್ಣ ಹೆಗ್ಡೆ ಅವರ ಜನನ, ರಾಜಕೀಯ ಪ್ರವೇಶ
ಬಸ್ರೂರಿನಲ್ಲಿ 1935ರ ಡಿಸೆಂಬರ್ 24 ರಂದು ಜನಿಸಿದ ಅಪ್ಪಣ್ಣ ಹೆಗ್ಡೆ ಅವರು 1960ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆ ಆದರು. ನಂತರ ಅದೇ ಪಂಚಾಯಿತಿಯ ಅಧ್ಯಕ್ಷರಾಗಿ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಿದರು. ಅಲ್ಲಿಂದ ಅವರ ರಾಜಕೀಯ ಪ್ರವೇಶವಾಯಿತು. 1988-94ರ ಅವಧಿಯಲ್ಲಿ ಬೈಂದೂರಿನಿಂದ ಜನತಾ ಪಕ್ಷದಿಂದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆ ಆದರು. ವಿಧಾನ ಪರಿಷತ್ ಸದಸ್ಯರಾಗಿಯು ರಾಜಕೀಯ ರಂಗದಲ್ಲಿ ಗುರುತಿಸಿಕೊಂಡರು.

ವಿಶೇಷವೆಂದರೆ ಅಪ್ಪಣ್ಣ ಅವರು ದೈವ ಭಕ್ತರಾಗಿದ್ದರು. ಧಾರ್ಮಿಕ ಸಂಪ್ರದಾಯಗಳಲ್ಲಿ ನಂಬಿಕೆ ಉಳ್ಳವರಾಗಿದ್ದರು. ಈ ಕಾರಣದಿಂದಲೇ ಏನೋ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ರಾಗಿಯೂ ಕಾರ್ಯ ನಿರ್ವಹಿಸುವ ಅವಕಾಶ ಒದಗಿಬಂದಿತ್ತು. ಹುಟ್ಟೂರಾದ ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿಯೂ ಒಂದಷ್ಟು ಕಾಲ ಸೇವೆ ನೀಡಿದ್ದಾರೆ.
ಇದೀಗ ಅವರ ನಿಧನ ರಾಜಕೀಯ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರ ಆಪ್ತರು, ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಅಪ್ಪಣ್ಣ ಹೆಗ್ಡೆ ಅವರು ಇಬ್ಬರು ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಜನತಾದಳ ಕಟ್ಟಿ ಬೆಳಸಿ ಸಜ್ಜನ ವ್ಯಕ್ತಿ: ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. 'ಮಾಜಿ ಶಾಸಕ ಮತ್ತು ಹಿರಿಯ ರಾಜಕಾರಣಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಸ್ನೇಹಿತರಾಗಿದ್ದ ಹೆಗ್ಡೆ ಅವರು ಮತ್ತು ನಾನು 1983ರಲ್ಲಿ ವಿಧಾನಸಭೆಯಲ್ಲಿ ಸದಸ್ಯರಾಗಿದ್ದೆವು. ರಾಜಕೀಯ ಕ್ಷೇತ್ರವನ್ನು ಸಮಾಜದ ಸೇವೆ ಮಾಡಲು ಒದಗಿ ಬಂದ ಅವಕಾಶ ಎಂದು ಬಗೆದಿದ್ದ ಅಪ್ಪಣ್ಣ ಹೆಗ್ಡೆ ಅವರು ಸರಳ, ಸಜ್ಜನಿಕೆಯ ಮನುಷ್ಯ. ಒಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನತಾದಳವನ್ನು ಕಟ್ಟಿ ಬೆಳೆಸಿದವರು'.
'ಅವರ ನಿರ್ಗಮನದಿಂದ ಹಳೆಯ ತಲೆಮಾರಿನ ಮತ್ತೊಬ್ಬ ರಾಜಕಾರಣಿ ನಮ್ಮಿಂದ ದೂರವಾದಂತಾಗಿದೆ. ಅವರ ಬದುಕು ಮತ್ತು ಸಾಧನೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ.' ಎಂದು ತಿಳಿಸಿದ್ದಾರೆ.
ಅಜಾತಶತ್ರು ಅಪ್ಪಣ್ಣನವರ ಜನರ ಕಾಳಜಿ ಅಪಾರ: ಡಿಸಿಎಂ
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, 'ಬೈಂದೂರಿನ ಮಾಜಿ ಶಾಸಕರು ಹಾಗೂ ಅಜಾತಶತ್ರು ಎಂದೇ ಖ್ಯಾತರಾಗಿದ್ದ ಬಿ. ಅಪ್ಪಣ್ಣ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ. ತಮ್ಮ ಸರಳತೆ ಮತ್ತು ಜನಪರ ಕಾಳಜಿಯ ಮೂಲಕ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ' ಎಂದು ಪ್ರಾರ್ಥಿಸಿದ್ದಾರೆ.
ಧಾರ್ಮಿಕ ನಾಯಕ, ಶಿಕ್ಷಣ ತಜ್ಞ: ಬಿವೈ ರಾಘವೇಂದ್ರ
'ಕರಾವಳಿ ಪ್ರದೇಶದ ಹಿರಿಯ ರಾಜಕಾರಣಿ, ಧಾರ್ಮಿಕ ನಾಯಕ, ಶಿಕ್ಷಣ ತಜ್ಞ ಹಾಗೂ ಕಂಬಳ ಸಂಪ್ರದಾಯದ ಮಹತ್ವದ ಸಂಘಟಕರಾಗಿದ್ದ ಅಪ್ಪಣ್ಣ ಹೆಗ್ಡೆ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು' ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಸಂತಾಪ ಸೂಚಿಸಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಅವರ ಸೇವೆ, ಸಮಾಜದ ಏಕತೆಗೆ ನೀಡಿದ ಕೊಡುಗೆ ಹಾಗೂ ಕರಾವಳಿಯ ಸಾಂಸ್ಕೃತಿಕ ಪರಂಪರೆಯಾದ ಕಂಬಳವನ್ನು ಉತ್ತೇಜಿಸಿದ ಅವರ ಪ್ರಯತ್ನಗಳು ಸದಾಕಾಲ ಸ್ಮರಣೀಯವಾಗಿರುತ್ತವೆ. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ನೀಡಿದ ಮಾರ್ಗದರ್ಶನ ಅನೇಕ ಜನರಿಗೆ ಪ್ರೇರಣೆಯಾಗಿದೆ. ಈ ದುಃಖದ ಘಳಿಗೆಯಲ್ಲಿ ಭಗವಂತನು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಪಾರ ಅಭಿಮಾನಿ ಬಳಗಕ್ಕೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಕೋರಿದ್ದಾರೆ.
ಬೈಂದೂರಿನ ಮಾಜಿ ಶಾಸಕರು ಹಾಗೂ ಅಜಾತಶತ್ರು ಎಂದೇ ಖ್ಯಾತರಾಗಿದ್ದ ಶ್ರೀ ಬಿ. ಅಣ್ಣಪ್ಪ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ. ತಮ್ಮ ಸರಳತೆ ಮತ್ತು ಜನಪರ ಕಾಳಜಿಯ ಮೂಲಕ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು… pic.twitter.com/9jS3TybBVq
— DK Shivakumar (@DKShivakumar) February 7, 2026
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು, 'ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ, ರಾಜ್ಯ ಕಂಡ ಮುತ್ಸದ್ಧಿ ರಾಜಕಾರಣಿ ಬಸ್ರೂರು ಅಪ್ಪಣ್ಣ ಹೆಗ್ಡೆ ಯವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ. ಹಾಗೂ ಅವರ ಕುಟುಂಬ ವರ್ಗಕ್ಕೆ, ಬಂಧು ಮಿತ್ರರಿಗೆ, ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ' ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
-
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ












Click it and Unblock the Notifications