ಸಚಿವ ಉಮೇಶ್ ಕತ್ತಿ ನಿಧನ; ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ
ಬೆಂಗಳೂರು, ಸೆಪ್ಟೆಂಬರ್ 6: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
"ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಉಮೇಶ್ ಕತ್ತಿ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ, ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
Recommended Video

ಮಂಗಳವಾರ ರಾತ್ರಿ ಡಾಲರ್ಸ್ ಕಾಲೋನಿ ನಿವಾಸದಲ್ಲಿ 61 ವರ್ಷದ ಉಮೇಶ್ ಕತ್ತಿ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದು, ಬುಧವಾರ ಬೆಂಗಳೂರಿನಲ್ಲಿ ಉಮೇಶ್ ಕತ್ತಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಜಯೇಂದ್ರ ಟ್ವೀಟ್: "ಮಾನ್ಯ ಅರಣ್ಯ ಸಚಿವರು ಹಾಗೂ ಬಿಜೆಪಿಯ ಹಿರಿಯ ನಾಯಕರಾದ ಶ್ರೀ ಉಮೇಶ್ ಕತ್ತಿಯವರ ಅಕಾಲಿಕ ಮರಣದ ವಿಚಾರ ತಿಳಿದು ಆಘಾತವಾಗಿದೆ. ನೇರ ವ್ಯಕ್ತಿತ್ವದ, ಸ್ನೇಹಜೀವಿಯಾಗಿದ್ದ ಕತ್ತಿಯವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ. ದೇವರು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ. ಸದ್ಗತಿ," ಎಂದು ಬಿ. ವೈ. ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸಂತಾಪ: "ಹಿರಿಯ ಸಂಪುಟ ಸಹೋದ್ಯೋಗಿ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ನಿಧನ ತೀವ್ರ ದುಃಖ ತಂದಿದೆ. ರಾಜಕೀಯ ಹಾಗೂ ಜನಸೇವೆಯಲ್ಲಿ ಅಪಾರ ಅನುಭವ ಹೊಂದಿದ್ದ ನಾಯಕರನ್ನು ಕಳೆದುಕೊಂಡು ನಾಡು ಇಂದು ಬರಿದಾಗಿದೆ. ಭಗವಂತ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ," ಎಂದು ಸಚಿವ ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದೌಡು: ಉಮೇಶ್ ಕತ್ತಿ ನಿಧನರಾದ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಯಕರ ದಂಡು ಎಂಎಸ್ ರಾಮಯ್ಯ ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ. ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಕಂದಾಯ ಸಚಿವ ಆರ್ ಅಶೋಕ್ ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.












Click it and Unblock the Notifications